ಸರ್ಕಾರಿ ನೌಕರರು ಬೆಳಗ್ಗೆ ಕಚೇರಿಗೆ ಬಂದ ತಕ್ಷಣ ಹಾಜರಾತಿ ದಾಖಲಿಸುವುದಷ್ಟೇ ಅಲ್ಲ, ತಮ್ಮ ಜೇಬಿನಲ್ಲಿರುವ ಹಣದ ಲೆಕ್ಕವನ್ನೂ ಕರ್ತವ್ಯ ಆ್ಯಪ್ನಲ್ಲಿ ನಮೂದಿಸಬೇಕಾದ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ!
- ಡಿ.1ರಿಂದ ಹೊಸ ಷರತ್ತು ಜಾರಿ ಸಾಧ್ಯತೆ | -
- ಹಾಜರಾತಿ ಜತೆಗೆ ಹಣದ ವಿವರ, ಚಲನವಲನ ದಾಖಲಿಸುವುದು ಕಡ್ಡಾಯಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಸರ್ಕಾರಿ ನೌಕರರು ಬೆಳಗ್ಗೆ ಕಚೇರಿಗೆ ಬಂದ ತಕ್ಷಣ ಹಾಜರಾತಿ ದಾಖಲಿಸುವುದಷ್ಟೇ ಅಲ್ಲ, ತಮ್ಮ ಜೇಬಿನಲ್ಲಿರುವ ಹಣದ ಲೆಕ್ಕವನ್ನೂ ಕರ್ತವ್ಯ ಆ್ಯಪ್ನಲ್ಲಿ ನಮೂದಿಸಬೇಕಾದ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ!ಸರ್ಕಾರಿ ಕಚೇರಿಗಳಲ್ಲಿ ಅನಧಿಕೃತ ಗೈರುಹಾಜರಿ ಹಾಗೂ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಈಗಾಗಲೇ ಜಾರಿಯಲ್ಲಿರುವ ಕರ್ತವ್ಯ ಆ್ಯಪ್ನಲ್ಲಿ ಮತ್ತಷ್ಟು ಷರತ್ತುಗಳನ್ನು ಸೇರ್ಪಡೆಗೊಳಿಸಲಾಗಿದೆ. ಡಿಸೆಂಬರ್ 1 ರಿಂದ ಹೊಸ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ಆದೇಶಿಸಿದೆ.
ಜೇಬಿನ ಕಾಸಿಗೂ ಲೆಕ್ಕ:ಸರ್ಕಾರಿ ನೌಕರರು ಕಚೇರಿಗೆ ಆಗಮಿಸಿದ ತಕ್ಷಣ ಕರ್ತವ್ಯ ಆ್ಯಪ್ನಲ್ಲಿ ಹಾಜರಾತಿ ದಾಖಲಿಸಬೇಕು. ಇದರ ಜತೆಗೆ ವೈಯಕ್ತಿಕ ಕಾರಣಗಳಿಗಾಗಿ ತಮ್ಮೊಂದಿಗೆ ತಂದಿರುವ ಹಣದ ಮೊತ್ತವನ್ನೂ ನಮೂದಿಸಬೇಕು. ಕಚೇರಿಗೆ ಬಂದಾಗ ತಮ್ಮ ಬಳಿ ಎಷ್ಟು ಹಣವಿದೆ ಎಂಬುದನ್ನು ಕಡ್ಡಾಯವಾಗಿ ದಾಖಲಿಸಬೇಕಾಗುತ್ತದೆ.
ಕರ್ತವ್ಯ ನಿರ್ವಹಣೆಯ ಅವಧಿಯಲ್ಲಿ ಅಧಿಕಾರಿಗಳು ಅಥವಾ ನೌಕರರು ಲಂಚ ಪಡೆದಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ಸಂದರ್ಭದಲ್ಲಿ ಈ ಮಾಹಿತಿ ಸಹಕಾರಿಯಾಗಲಿದೆ ಎಂಬುದು ಈ ಕ್ರಮದ ಉದ್ದೇಶ ಎನ್ನಲಾಗಿದೆ. ಆ್ಯಪ್ನಲ್ಲಿ ದಾಖಲಿಸಿದ ಹಣಕ್ಕಿಂತ ತಪಾಸಣೆ ವೇಳೆ ಹೆಚ್ಚಿನ ಹಣ ಪತ್ತೆಯಾದರೆ ಅದಕ್ಕೆ ಉತ್ತರ ನೀಡಬೇಕಾದ ಪರಿಸ್ಥಿತಿ ಎದುರಾಗಬಹುದು.ಈ ಹಿಂದೆ ಕೂಡ ಕಚೇರಿಗೆ ಆಗಮಿಸಿದಾಗ ನೌಕರರು ತಮ್ಮ ಬಳಿಯಿರುವ ಹಣದ ವಿವರ ದಾಖಲಿಸುವ ಪದ್ಧತಿ ಇತ್ತು. ಆದರೆ, ಬಹುತೇಕರು ಇದನ್ನು ಪಾಲಿಸುತ್ತಿರಲಿಲ್ಲ. ಹೀಗಾಗಿ ಹಾಜರಾತಿಯ ಜತೆಗೆ ಹಣದ ವಿವರ ದಾಖಲಿಸುವ ವ್ಯವಸ್ಥೆಯನ್ನು ಆ್ಯಪ್ನಲ್ಲಿಯೇ ಕಡ್ಡಾಯಗೊಳಿಸುವ ಕ್ರಮ ಕೈಗೊಳ್ಳಲಾಗಿದೆ.
ಚಲನವಲನವೂ ದಾಖಲಾಗಬೇಕು:ನೌಕರರ ಚಲನವಲನದ ಮಾಹಿತಿಯನ್ನೂ ಕರ್ತವ್ಯ ಆ್ಯಪ್ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಓಓಡಿ (ಆನ್ ಅಪೀಶಿಯಲ್ ಡ್ಯೂಟಿ) ಹೆಸರಿನಲ್ಲಿ ಕಚೇರಿಯಿಂದ ಹೊರಗೆ ತೆರಳಿ ಇಡೀ ದಿನ ಗೈರುಹಾಜರಾಗುವುದಕ್ಕೂ ಕಡಿವಾಣ ಹಾಕುವ ಉದ್ದೇಶವಿದೆ.
ಅಧಿಕಾರಿಗಳು ಮತ್ತು ನೌಕರರು ಯಾವ ಕೆಲಸದ ನಿಮಿತ್ತ ಹೊರಗೆ ಹೋಗುತ್ತಿದ್ದಾರೆ, ಎಲ್ಲಿಗೆ ತೆರಳಬೇಕು ಹಾಗೂ ಎಷ್ಟು ಸಮಯ ಬೇಕಾಗುತ್ತದೆ ಎಂಬ ವಿವರಗಳನ್ನು ನಮೂದಿಸಬೇಕು. ಬ್ಯಾಂಕ್ ಸೇರಿದಂತೆ ಇತರೆ ಕಚೇರಿಗಳಿಗೆ ಅಧಿಕೃತ ಕೆಲಸದ ಮೇಲೆ ತೆರಳಿದರೆ ಕೆಲಸ ಮುಗಿದ ತಕ್ಷಣ ಮರಳಿ ಕಚೇರಿಗೆ ಹಾಜರಾಗಬೇಕು. ಓಓಡಿ ಹೆಸರಿನಲ್ಲಿ ಇಡೀ ದಿನ ಕಚೇರಿಯಿಂದ ಹೊರಗುಳಿಯುವಂತಿಲ್ಲ.ಈ ಮೂಲಕ ಸರ್ಕಾರಿ ನೌಕರರ ಹಾಜರಾತಿ, ಕರ್ತವ್ಯದ ನಿರ್ವಹಣೆ ಹಾಗೂ ಚಲನವಲನದ ಮೇಲೆ ನಿಗಾ ಇಡುವುದರ ಜತೆಗೆ ಆಡಳಿತದಲ್ಲಿ ಪಾರದರ್ಶಕತೆ ತರಲು ಸರ್ಕಾರ ಮುಂದಾಗಿದೆ.