ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಅಗತ್ಯ

| Published : Nov 12 2025, 02:15 AM IST

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕಾನೂನು ಸೇವಾ ಪ್ರಾಧಿಕಾರದ ಕಾಯ್ದೆಯಡಿ ವಿಚಾರಣಾಧೀನ ಕೈದಿಗಳಿಗೆ ಉಚಿತ ಮತ್ತು ಗುಣಮಟ್ಟದ ಕಾನೂನು ಸೇವೆಗಳನ್ನು ಕಡ್ಡಾಯವಾಗಿ ಒದಗಿಸಲಾಗುವುದು ಎಂದು ಹಿರಿಯ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣನವರ್ ಹೇಳಿದ್ದಾರೆ.

- ಕಾರಾಗೃಹದಲ್ಲಿ ಕಾನೂನು ಅರಿವು- ನೆರವು ಕಾರ್ಯಕ್ರಮದಲ್ಲಿ ನ್ಯಾ. ಮಹಾವೀರ ಸಲಹೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ಕಾನೂನು ಸೇವಾ ಪ್ರಾಧಿಕಾರದ ಕಾಯ್ದೆಯಡಿ ವಿಚಾರಣಾಧೀನ ಕೈದಿಗಳಿಗೆ ಉಚಿತ ಮತ್ತು ಗುಣಮಟ್ಟದ ಕಾನೂನು ಸೇವೆಗಳನ್ನು ಕಡ್ಡಾಯವಾಗಿ ಒದಗಿಸಲಾಗುವುದು ಎಂದು ಹಿರಿಯ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ್ ಎಂ. ಕರೆಣ್ಣನವರ್ ಹೇಳಿದರು.

ನಗರದ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಅವರು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಮಟ್ಟದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಂದ ಈ ಸೇವೆಗಳನ್ನು ಒದಗಿಸಲಾಗಿದೆ. ಉಚಿತ ಕಾನೂನು ನೆರವು ಎಲ್ಲ ವಿಚಾರಣಾಧೀನ ಕೈದಿಗಳು, ಅವರು ಅರ್ಹತಾ ಮಾನದಂಡಗಳನ್ನು ಪೂರೈಸಿದಲ್ಲಿ ಅಥವಾ ಮಹಿಳೆಯರು, ಮಕ್ಕಳು ಇತ್ಯಾದಿ ವಿಶೇಷ ವರ್ಗಕ್ಕೆ ಸೇರಿದ್ದರೆ, ಉಚಿತ ಕಾನೂನು ನೆರವು ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ಕಾನೂನು ನೆರವು ಕೇಂದ್ರಗಳಲ್ಲಿ ಕಾನೂನು ಸಲಹೆಗಾರರು ಮತ್ತು ಪ್ಯಾರಾ ಲೀಗಲ್ ವಾಲಂಟಿಯರ್ಸ್ ನಿಯಮಿತವಾಗಿ ಭೇಟಿ ನೀಡುತ್ತಾರೆ. ಕೈದಿಗಳ ಕಷ್ಟಗಳನ್ನು ಆಲಿಸಿ, ಅವರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅರ್ಜಿಗಳಾದ ಜಾಮೀನು, ಪೆರೋಲ್, ಮೇಲ್ಮನವಿ ತಯಾರಿಸಲು ಸಹಾಯ ಮಾಡುತ್ತಾರೆ. ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸರ್ಕಾರಿ ರಕ್ಷಣಾ ವಕೀಲರಂತೆ, ಪೂರ್ಣ ಸಮಯ ಮೀಸಲಾದ ವಕೀಲರ ತಂಡವನ್ನು ರಚಿಸಲಾಗಿದೆ ಎಂದರು.

ಕರ್ನಾಟಕ ಕಾರಾಗೃಹ ನಿಯಮಾವಳಿಗಳು ವಿಚಾರಣಾಧೀನ ಕೈದಿಗಳನ್ನು ಶಿಕ್ಷೆಗೆ ಗುರಿಯಾದ ಕೈದಿಗಳಿಂದ ಪ್ರತ್ಯೇಕವಾಗಿ ಇಡುವುದು ಮತ್ತು ಅವರಿಗೆ ಸೂಕ್ತ ವಸತಿ, ಆಹಾರ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದನ್ನು ಕಡ್ಡಾಯವಾಗಿದೆ. ವಕೀಲರನ್ನು ಭೇಟಿ ಮಾಡುವ ಸೌಲಭ್ಯವು ಇದರಲ್ಲಿ ಒಂದು ಪ್ರಮುಖ ಹಕ್ಕು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಎ.ಡಿ.ಆರ್ ಕಟ್ಟಡ, ಹಳೇ ನ್ಯಾಯಾಲಯಗಳ ಸಂಕೀರ್ಣ, ದಾವಣಗೆರೆ-577002. ದೂ: 08192-296364, ಇ-ಮೇಲ್: ** dlsadavangere4@gmail.com ** ವೆಬ್ ಸೈಟ್: ** https://districts.ecourts.gov.in/davangere ** ಇಲ್ಲಿಗೆ ಸಂಪರ್ಕಿಸಬಹುದು ಎಂದರು.

ಕಾರಾಗೃಹ ಅಧೀಕ್ಷಕ ಆನಂದ ಭಜಂತ್ರಿ, ವಕೀಲರಾದ ಸೋಹನ್ ಕಟಗಿಹಳ್ಳಿಮಠ, ಸುಭಾಷ್ ಎಚ್., ಕೆಂಚಪ್ಪ ಪೊಲೀಸ್ ಅಧಿಕಾರಿ ಸೋಮಶೇಖರ ಉಪಸ್ಥಿತರಿದ್ದರು.

- - -

(ಕೋಟ್‌) ಕೈದಿಗಳಿಗೆ ಬಂಧನದ ಆರಂಭಿಕ ಹಂತದಿಂದ ಮೇಲ್ಮನವಿ ಹಂತದವರೆಗೆ ಕಾನೂನು ನೆರವು ಮತ್ತು ಪ್ರಾತಿನಿಧ್ಯ ಒದಗಿಸಲಾಗುವುದು. ವಿಚಾರಣಾ ನ್ಯಾಯಾಲಯದಿಂದ ಪ್ರಕರಣ ಇತ್ಯರ್ಥಗೊಂಡಲ್ಲಿ ಅಪೀಲು ಕೂಡ ಸಲ್ಲಿಸಲು ಈ ವಕೀಲರು ಸಕ್ಷಮವಾಗಿರುತ್ತಾರೆ. ದಾವಣಗೆರೆಯಲ್ಲಿ ಈಗಾಗಲೇ 8 ಜನ ಪೂರ್ಣ ಪ್ರಮಾಣದ ವಕೀಲರನ್ನು ನೇಮಿಸಿಕೊಳ್ಳಲಾಗಿದೆ.

- ಮಹಾವೀರ್ ಎಂ. ಕರೆಣ್ಣನವರ್, ಸದಸ್ಯ ಕಾರ್ಯದರ್ಶಿ.

- - -

-10ಕೆಡಿವಿಜಿ31.ಜೆಪಿಜಿ:

ದಾವಣಗೆರೆಯಲ್ಲಿ ಸೋಮವಾರ ಮಹಾವೀರ್ ಎಂ. ಕರೆಣ್ಣನವರ್ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿದರು.