ಕನ್ನಡಪ್ರಭ ವಾರ್ತೆ ರಾಮನಗರ

ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್ ಯೋಜನೆಯಲ್ಲಿ ಅರ್ಕೇಶ್ವರ ದೇವಾಲಯ, ಪೀರನ್ ಷಾ ವಲಿ ದರ್ಗಾ ಹಾಗೂ ವಸತಿ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ ಎಂದು ಕೆಲವರು ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾದ ಮಾತು. ಭಗವಂತನ ಆಣೆಗೂ ಒಂದು ಎಳೆಯಷ್ಟೂ ಧಕ್ಕೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಶಾಸಕ ಇಕ್ಬಾಲ್ ಹುಸೇನ್ ಭರವಸೆ ನೀಡಿದರು.

ನಗರದ ಛತ್ರದ ಬೀದಿಯಲ್ಲಿರುವ ಶ್ರೀರಾಮ ದೇವಾಲಯದ ಛತ್ರದಲ್ಲಿ ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್ ಯೋಜನೆ ಸಂಬಂಧ ಶನಿವಾರ ನಡೆದ ಅರ್ಕೇಶ್ವರ ದೇವಸ್ಥಾನ, ಪೀರನ್ ಷಾ ವಲಿ ದರ್ಗಾ ಕಮಿಟಿ ಪದಾಧಿಕಾರಿಗಳು ಹಾಗೂ ವಸತಿ ಪ್ರದೇಶಗಳ ನಾಗರಿಕರ ಸಭೆಯಲ್ಲಿ ಅವರು ಮಾತನಾಡಿದರು.

ನಾನು ನಿಮ್ಮ ಮನೆ ಮಗ, ನಿಮ್ಮ ಸೇವಕ. ನೀವುಗಳು ನನಗೆ ಸಾಕಿ ಬೆಳೆಸಿದ್ದೀರಿ. ನಿಮಗೆಲ್ಲ ತೊಂದರೆಕೊಟ್ಟು ಹೈಟೆಕ್ ಪಾರ್ಕ್ ನಿರ್ಮಿಸುವ ಪ್ರಮೇಯ ಇಲ್ಲ. ನಗರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಿದ್ದೇವೆಯೇ ಹೊರತು ಯಾರನ್ನೋ ಗುರಿಯಾಗಿಟ್ಟುಕೊಂಡು ಮಾಡುತ್ತಿಲ್ಲ. ದೇಗುಲ ಮತ್ತು ದರ್ಗಾ ನನಗೆ ಎರಡು ಕಣ್ಣುಗಳಿದ್ದಂತೆ. ಯಾರ ಭಾವನೆಗಳಿಗೂ ಧಕ್ಕೆಯಾಗದಂತೆ ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ ಎಂದು ಹೇಳಿದರು.

ಸ್ವಾರ್ಥಕ್ಕಾಗಿ ವಿನಾಕಾರಣ ಗೊಂದಲ:


ಈ ಹಿಂದೆ ಅರ್ಕಾವತಿ ನದಿಯಲ್ಲಿ 75 ಮೀಟರ್ ಇದ್ದ ಬಫರ್ ಜೋನ್ ಪರಿಮಿತಿಯನ್ನು 30 ಮೀಟರ್ ಗೆ ಸೀಮಿತಗೊಳಿಸಿದ್ದೇವೆ. ಧಾರ್ಮಿಕ ಕೇಂದ್ರ ಹಾಗೂ ವಸತಿ ಪ್ರದೇಶಗಳನ್ನು ಹೊರತುಪಡಿಸಿ ಅರ್ಕಾವತಿ ನದಿಗೆ ಕಟ್ಟುತ್ತಿರುವ ತಡೆಗೋಡೆಯಿಂದ 30 ಮೀಟರ್ (100 ಅಡಿ) ಭೂಮಿ ಮಾತ್ರ ಸ್ವಾಧೀನಪಡಿಸಿಕೊಳ್ಳುತ್ತೇವೆ. ಈಗ ಹೊರಡಿಸಿರುವ ಪ್ರಾಥಮಿಕ ಅಧಿಸೂಚನೆಯೇ ಅಂತಿಮ ಅಲ್ಲ. ಈಗಾಗಲೇ 150ಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿಗಳು ಬಂದಿದ್ದು, ಎಲ್ಲವನ್ನೂ ಪರಿಶೀಲಿಸಿ ಅಧಿಕಾರಿಗಳು ಮತ್ತು ಜನರೊಂದಿಗೆ ಚರ್ಚಿಸಿದ ನಂತರವೇ ಅಂತಿಮ ಅಧಿಸೂಚನೆ ಹೊರ ಬೀಳಲಿದೆ ಎಂದು ತಿಳಿಸಿದರು.

ಈ ಯೋಜನೆಯಲ್ಲಿ ದೇವಾಲಯ, ದರ್ಗಾವನ್ನು ಸೌಂದರ್ಯೀಕರಣಗೊಳಿಸಿ ಆಕರ್ಷಣೀಯ ಕೇಂದ್ರವನ್ನಾಗಿ ಮಾಡಲಾಗುವುದು. ಇಡೀ ರಾಜ್ಯದಲ್ಲಿ ಯಾವ ಜಿಲ್ಲೆಗಳಿಗೂ ವಾಕಿಂಗ್ ಪಾಥ್ ನಿರ್ಮಾಣಕ್ಕಾಗಿ ₹157 ಕೋಟಿ ಅನುದಾನ ಬಿಡುಗಡೆ ಮಾಡಿರುವ ಉದಾಹರಣೆ ಇಲ್ಲ. ಯಾರೋ ಷಡ್ಯಂತ್ರ ಮಾಡಿಕೊಂಡು ಸ್ವಾರ್ಥಕ್ಕಾಗಿ ವಿನಾಕಾರಣ ಗೊಂದಲ ಸೃಷ್ಟಿಸುತ್ತಿದ್ದಾರೆ. ಯಾರ ಮಾತುಗಳಿಗೂ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.

ಶಾಸಕನಾಗಿ ನಾನು ಕ್ಷೇತ್ರದ ಅಭಿವೃದ್ದಿಗೆ ಮುಂದಾಗಿದ್ದೇನೆ. ನೀರು, ರಸ್ತೆಗಳಿಗೆ ಆದ್ಯತೆ ಕೊಟ್ಟಿದ್ದೇನೆ. ಈಗ ನಿಮ್ಮ ಆರೋಗ್ಯದ ದೃಷ್ಟಿಯಿಂದ ಹೈಟೆಕ್ ಪಾರ್ಕ್ ನಿರ್ಮಿಸಲು ಉದ್ದೇಶಿಸಿದ್ದೇನೆ. ಕೆಲವರು ಯೋಜನೆಯ ಸತ್ಯಾಂಶಗಳನ್ನು ಅರ್ಥ ಮಾಡಿಕೊಳ್ಳದೆ ಸ್ವಾರ್ಥಕ್ಕಾಗಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕರೊಂದಿಗೆ ವಾಗ್ವಾದ:

ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ ಮತ್ತು ರಾಘವೇಂದ್ರ ಕಾಲೋನಿಯ ನಿವಾಸಿಗಳು ಆತಂಕ ವ್ಯಕ್ತಪಡಿಸಿ ತಮ್ಮ ಬಳಿ ಬಂದಿದ್ದರು. ಆದರೆ, ಪೀರನ್ ಷಾ ವಲಿ ದರ್ಗಾದವರು ಬಂದಿರಲಿಲ್ಲ, ಹೀಗಾಗಿ ಅವರ ಬಳಿ ಮಾತನಾಡಲಾಗಲಿಲ್ಲ ಎಂದು ಶಾಸಕರು ಹೇಳಿದ ಬೆನ್ನಲ್ಲೆ ಸಭೆಯಲ್ಲಿ ಹಾಜರಿದ್ದ ದರ್ಗಾದ ಆಡಳಿತ ಮಂಡಳಿ ಪದಾಧಿಕಾರಿಗಳು ವೇದಿಕೆಯ ಮುಂಭಾಗಕ್ಕೆ ಬಂದು ದರ್ಗಾದ ಗುರುಗಳ ಬಳಿ ಯಾವುದಕ್ಕೂ ಬರಬೇಡಿ ಎಂದು ಹೇಳಿದ್ದೀರಿ. ಹೀಗಾಗಿ ನಾವ್ಯಾರು ನಿಮ್ಮ ಬಳಿಗೆ ಬರಲಿಲ್ಲ ಎಂದು ವಾದ ಮಂಡಿಸಿದರು. ಈ ವಿಚಾರದಲ್ಲಿ ಶಾಸಕರು ಹಾಗೂ ಪದಾಧಿಕಾರಿಗಳ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು.

ಸಭೆಯಲ್ಲಿ ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್‌ಕುಮಾರ್, ಮಾಜಿ ಅಧ್ಯಕ್ಷ ಸಿಎನ್ಆರ್ ವೆಂಕಟೇಶ್, ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಪುಟ್ಟರಾಜು, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷ ರೈಡ್ ನಾಗರಾಜು ಉಪಸ್ಥಿತರಿದ್ದರು.

-----

ಮುಂದಿನ ವಾರ ಡೀಸಿ- ಎಸಿಯೊಂದಿಗೆ ಸಭೆ

ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ ಮೆಂಟ್ ಯೋಜನೆ ಸಂಬಂಧ ಮುಂದಿನ ವಾರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ, ತಹಸೀಲ್ದಾರ್ ಹಾಗೂ ನಗರಸಭೆ ಆಯುಕ್ತರೊಂದಿಗೆ ಯೋಜನೆ ಅನುಷ್ಠಾನ ಸಂಬಂಧ ಚರ್ಚೆ ನಡೆಸುತ್ತೇನೆ. ಧಾರ್ಮಿಕ ಕೇಂದ್ರ ಮತ್ತು ವಸತಿ ಪ್ರದೇಶಗಳನ್ನು ಉಳಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನಿಮ್ಮ ಮತದ ಋಣ ತೀರಿಸಬೇಕಿದೆ. ನಿಮಗೆಂದೂ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ. ಧಾರ್ಮಿಕ ಕೇಂದ್ರ ಮತ್ತು ವಸತಿ ಪ್ರದೇಶಗಳಿಗೆ ಧಕ್ಕೆಯಾಗದಂತೆ ಪಾರ್ಕ್ ನಿರ್ಮಾಣ ಮಾಡುತ್ತೇನೆ.

- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ.