ಬೆಣ್ಣಿಹಳ್ಳ ಪ್ರವಾಹ ತಡೆಗೆ ಹಣ ಬಂದರೂ ಕೆಲಸ ಶುರುವಾಗ್ತಿಲ್ಲ!

| Published : Oct 09 2025, 02:01 AM IST

ಬೆಣ್ಣಿಹಳ್ಳ ಪ್ರವಾಹ ತಡೆಗೆ ಹಣ ಬಂದರೂ ಕೆಲಸ ಶುರುವಾಗ್ತಿಲ್ಲ!
Share this Article
  • FB
  • TW
  • Linkdin
  • Email

ಸಾರಾಂಶ

ಬರೋಬ್ಬರಿ 148 ಕಿಮೀ ಹರಿದು ಹೋಗುವ ಬೆಣ್ಣಿಹಳ್ಳ ಹಳ್ಳ ಮಳೆಗಾಲದಲ್ಲಿ ಯಾವುದೇ ನದಿಗೂ ಕಮ್ಮಿಯಿಲ್ಲ ಎಂಬಂತೆ ಪ್ರತಾಪ ತೋರಿಸುತ್ತದೆ. ಪ್ರತಿವರ್ಷ ಇದರ ಪ್ರವಾಹಕ್ಕೆ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾದರೆ, 35ಕ್ಕೂ ಹೆಚ್ಚು ಹಳ್ಳಿಗಳು ತೊಂದರೆ ಅನುಭವಿಸುತ್ತವೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಬೆಣ್ಣಿಹಳ್ಳದ ಪ್ರವಾಹ ತಡೆಗೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಿ ವರ್ಷ ಕಳೆದರೂ ಈ ವರೆಗೂ ಕಾಮಗಾರಿಯೇ ಪ್ರಾರಂಭವಾಗುತ್ತಿಲ್ಲ. ಈ ಮಳೆಗಾಲದಲ್ಲಂತೂ ಸಮಸ್ಯೆ ಅನುಭವಿಸಿದ್ದಾಯ್ತು. ಮುಂದಿನ ಮಳೆಗಾಲದೊಳಗೆ ಆದರೂ ಕಾಮಗಾರಿಗೆ ಪ್ರಾರಂಭವಾಗುತ್ತದೆಯೇ?.

ಇದು ಬೆಣ್ಣಿಹಳ್ಳದಿಂದ ಪ್ರತಿ ವರ್ಷ ತೊಂದರೆ ಅನುಭವಿಸುವ ರೈತರು, ಸಾರ್ವಜನಿಕರ ಪ್ರಶ್ನೆ.

ಶಿಗ್ಗಾಂವಿ ತಾಲೂಕಿನ ದುಂಡಸಿಯಲ್ಲಿ ಉಗಮವಾಗುವ ಬೆಣ್ಣಿಹಳ್ಳ ಕುಂದಗೋಳ, ಹುಬ್ಬಳ್ಳಿ, ನವಲಗುಂದ ಮೂಲಕ ಹಾಯ್ದು ಗದಗ ಜಿಲ್ಲೆಯ ರೋಣ ತಾಲೂಕಿನ ಮೆಣಸಗಿ ಬಳಿ ಮಲಪ್ರಭಾ ನದಿ ಸೇರುತ್ತದೆ. ಬರೋಬ್ಬರಿ 148 ಕಿಮೀ ಹರಿದು ಹೋಗುವ ಈ ಹಳ್ಳ ಮಳೆಗಾಲದಲ್ಲಿ ಯಾವುದೇ ನದಿಗೂ ಕಮ್ಮಿಯಿಲ್ಲ ಎಂಬಂತೆ ಪ್ರತಾಪ ತೋರಿಸುತ್ತದೆ. ಪ್ರತಿವರ್ಷ ಇದರ ಪ್ರವಾಹಕ್ಕೆ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿನ ಬೆಳೆ ಹಾನಿಯಾದರೆ, 35ಕ್ಕೂ ಹೆಚ್ಚು ಹಳ್ಳಿಗಳು ತೊಂದರೆ ಅನುಭವಿಸುತ್ತವೆ.

₹ 200 ಕೋಟಿ:

ಬೆಣ್ಣಿಹಳ್ಳದ ಶಾಶ್ವತ ಪ್ರವಾಹ ತಡೆಯಲು ₹ 1628 ಕೋಟಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ರಾಜ್ಯ ಸರ್ಕಾರ ಪ್ರವಾಹ ತಡೆಯಲು ರಾಜ್ಯ ವಿಪತ್ತು ಉಪಶಮನ ನಿಧಿಯಡಿ ₹ 200 ಕೋಟಿ ಬಿಡುಗಡೆ ಮಾಡಿದೆ. 2024-25ರ ಬಜೆಟ್‌ನಲ್ಲೇ ಘೋಷಿಸಿದ್ದ ಸರ್ಕಾರ, 2024ರ ಸೆಪ್ಟೆಂಬರ್‌ನಲ್ಲೇ ಹಣವನ್ನೂ ಬಿಡುಗಡೆ ಮಾಡಿದೆ. ಒಂದು ಸಲ ಇದಕ್ಕಾಗಿ ಟೆಂಡರ್‌ ಕೂಡ ಕರೆಯಲಾಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಅದು ಅಷ್ಟಕ್ಕೆ ಸ್ಥಗಿತಗೊಂಡಿತ್ತು. ಇದೀಗ ಮರು ಟೆಂಡರ್‌ ಕರೆಯಲಾಗಿದೆ.

ಏನೇನು ಕೆಲಸ?:

ಬೆಣ್ಣಿಹಳ್ಳದ ವ್ಯಾಪ್ತಿಯಲ್ಲಿ ಧಾರವಾಡ, ಗದಗ ಜಿಲ್ಲೆಯ 35ಕ್ಕೂ ಹೆಚ್ಚು ಹಳ್ಳಿಗಳು ಬರುತ್ತವೆ. ₹ 1628 ಕೋಟಿ ಯೋಜನೆಯಲ್ಲಿ ಸರ್ಕಾರ ₹ 200 ಕೋಟಿ ಬಿಡುಗಡೆ ಮಾಡಿದೆ. ಇದರಲ್ಲಿ ಸೂಕ್ಷ್ಮ ಹಾಗೂ ಅತಿ ಅವಶ್ಯವಿರುವ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದೆ. ಹುಬ್ಬಳ್ಳಿ ತಾಲೂಕಿನ ಬಂಡಿವಾಡದಿಂದ ರೋಣ ತಾಲೂಕಿನ ಮೆಣಸಗಿ ವರೆಗೆ 95 ಕಿಮೀ ಕಾಲುವೆ ಹೂಳೆ ಎತ್ತುವುದು, ಶಿರಗುಪ್ಪಿ, ಇಂಗಳಹಳ್ಳಿ, ಕಿರೇಸೂರ, ಕಾಲವಾಡ, ಅರಕುರಹಟ್ಟಿ, ಕೊಂಗವಾಡ, ಅರಹಟ್ಟಿ, ಸೊಟಕಾಳಗಳಲ್ಲಿ ತಡೆಗೋಡೆ ನಿರ್ಮಿಸುವುದು, ಜತೆಗೆ ಏರಿ ನಿರ್ಮಿಸುವುದು. ಹುಬ್ಬಳ್ಳಿ-ನವಲಗುಂದ ತಾಲೂಕುಗಳ 6 ಕಡೆಗಳಲ್ಲಿ ಬಾಕ್ಸ್‌ ಬ್ರಿಡ್ಜ್‌ ನಿರ್ಮಾಣ, 2 ಕಡೆಗಳಲ್ಲಿ ನೀರಿನ ಸಂಗ್ರಹ (ಸಣ್ಣ ಬ್ಯಾರೇಜ್‌- weir) ನಿರ್ಮಿಸುವುದು, ಯಮನೂರು ಬಳಿ ಬರುವ ಭಕ್ತರಿಗಾಗಿ ಸ್ನಾನಘಟ್ಟ ನಿರ್ಮಿಸುವ ಕಾರ್ಯ ಕೈಗೆತ್ತಿಕೊಳ್ಳಲು ಯೋಚಿಸಲಾಗಿದೆ. ಬೆಣ್ಣಿಹಳ್ಳದ ಸೂಕ್ಷ್ಮ ಹಾಗೂ ಅತಿ ಅವಶ್ಯವಿರುವ ಕಾಮಗಾರಿಗಳೆಂದು ಪರಿಗಣಿಸಿ ಇವುಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

ಈಗಲೇ ಏಕೆ?:

ಈ ಟೆಂಡರ್‌ ಒಪನ್‌ ಮಾಡಿ ಆದಷ್ಟು ಶೀಘ್ರ ವರ್ಕ್‌ ಆರ್ಡರ್‌ ಕೊಡುವ ಅಗತ್ಯವಿದೆ. ಈಗಾಗಲೇ ಅಕ್ಟೋಬರ್‌ ತಿಂಗಳು ಶುರುವಾಗಿದೆ. ಈಗ ಮಳೆ ಕಡಿಮೆಯಾಗಿದೆ. ಈಗ ಅನುಮತಿ ಸಿಕ್ಕು ಕೆಲಸ ಪ್ರಾರಂಭಿಸಿದರೆ ಏಳೆಂಟು ತಿಂಗಳಲ್ಲಿ ಸ್ವಲ್ಪ ಕೆಲಸ ಮಾಡಬಹುದು. ಮಳೆಗಾಲದೊಳಗೆ ಸ್ವಲ್ಪ ಕೆಲಸ ಮುಗಿದರೆ ಪ್ರವಾಹ ತಗ್ಗಿಸಲು ಅನುಕೂಲ ಆಗಬಹುದು. ಮಳೆಗಾಲ ಪ್ರಾರಂಭವಾದರೆ ಕೆಲಸಕ್ಕೆ ತೊಂದರೆಯಾಗಲಿದೆ. ಇದರಿಂದ ರೈತರು ಸಮಸ್ಯೆ ಎದುರಿಸುವಂತೆ ಆಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಯೋಚಿಸಿ ಟೆಂಡರ್‌ ಪ್ರಕ್ರಿಯೆ ಮುಗಿಸಿ ಕೆಲಸ ಪ್ರಾರಂಭಿಸಬೇಕು ಎಂಬುದು ರೈತರ ಒಕ್ಕೊರಲಿನ ಆಗ್ರಹ.

ಏನೇ ಆದರೂ ಈ ಮಳೆಗಾಲದೊಳಗೆ ಬೆಣ್ಣಿಹಳ್ಳದ ಪ್ರವಾಹ ತಡೆ ಕಾಮಗಾರಿ ಪ್ರಾರಂಭವಾಗುವುದೇ? ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕಿದೆ.ಬೆಣ್ಣಿಹಳ್ಳದ ಯೋಜನೆಗೆ ಅನುದಾನ ನೀಡಲಾಗಿದೆ ಎಂದು ಕಳೆದ ವರ್ಷದಿಂದಲೇ ಹೇಳುತ್ತಿದ್ದಾರೆ. ಆದರೆ, ಈ ವರೆಗೂ ಕೆಲಸ ಮಾತ್ರ ಆರಂಭಿಸಿಲ್ಲ. ಕಾಲಹರಣ ಮಾಡದೇ ತ್ವರಿತಗತಿಯಲ್ಲಿ ಕೆಲಸ ಪ್ರಾರಂಭಿಸಿದರೆ ಮಳೆಗಾಲದಲ್ಲಿ ನಾವು ಅನುಭವಿಸುವ ತೊಂದರೆ ತಪ್ಪುತ್ತದೆ. ಸರ್ಕಾರ ಯೋಚನೆ ಮಾಡಬೇಕು.

ರಮೇಶಗೌಡ ಪಾಟೀಲ, ಬೆಣ್ಣಿಹಳ್ಳದ ಪ್ರವಾಹ ಪೀಡಿತ ರೈತ

ಸರ್ಕಾರ ₹ 200 ಕೋಟಿ ಬಿಡುಗಡೆ ಮಾಡಿದೆ. ಮೊದಲಿಗೆ ಕರೆದಿದ್ದ ಟೆಂಡರ್‌ ತಾಂತ್ರಿಕ ಸಮಸ್ಯೆಯಿಂದ ರದ್ದಾಯಿತು. ಇದೀಗ ಮರು ಟೆಂಡರ್‌ ಕರೆಯಲಾಗಿದೆ. ಶೀಘ್ರದಲ್ಲೇ ಕೆಲಸ ಪ್ರಾರಂಭವಾಗಲಿದೆ.

ರಾಘವೇಂದ್ರ ಜಾಲಗಾರ, ಕಾರ್ಯನಿರ್ವಾಹಕ ಅಭಿಯಂತರ, ಕೆಎನ್‌ಎನ್‌ಎಲ್‌, ನವಲಗುಂದ