ಸಾರಾಂಶ
ಕೀರ್ತನಾಕನ್ನಡಪ್ರಭ ವಾರ್ತೆ ಕುಶಾಲನಗರ
ಕೊಡಗಿನ ಎಲ್ಲೆಡೆ ಬಿರು ಬಿಸಿಲಿನ ನಡುವೆ ಜೀವನದಿ ಕಾವೇರಿ ಹರಿವು ಬಹುತೇಕ ಕ್ಷೀಣಗೊಂಡಿದೆ. ಕಾವೇರಿ ನದಿ ತಟದ ಗ್ರಾಮ ಪಟ್ಟಣಗಳಲ್ಲಿ ಕುಡಿಯುವ ನೀರಿಗೆ ನೀರಿನ ಕೊರತೆ ಎದುರಾಗಿದ್ದು ಈ ನಿಟ್ಟಿನಲ್ಲಿ ಪಂಪ್ ಹೌಸ್ ಸಮೀಪ ನದಿಗೆ ಅಡ್ಡಲಾಗಿ ಬಂಡ್ ನಿರ್ಮಿಸುವ ಕಾರ್ಯಕ್ಕೆ ಸಂಬಂಧಿಸಿದವರು ಚಿಂತನೆ ಹರಿಸಿದ್ದಾರೆ.ಜಿಲ್ಲೆಯ ವಿವಿಧಡೆ ಹಾಗು ಕುಶಾಲನಗರ ಅರಣ್ಯ ವಲಯದಲ್ಲಿರುವ ಬಹುತೇಕ ಕೆರೆಗಳಲ್ಲಿ ಮಾತ್ರ ನೀರಿನ ಕೊರತೆ ಇದುವರೆಗೆ ಕಂಡು ಬಂದಿಲ್ಲ ಎನ್ನುವುದು ಗಮನಾರ್ಹ.
ಮಡಿಕೇರಿ ವಿಭಾಗದ ಕುಶಾಲನಗರ ಅರಣ್ಯ ವಲಯದ ಮೀಸಲು ಅರಣ್ಯಗಳಲ್ಲಿ ಸುಮಾರು 22 ಕೆರೆಗಳಿದ್ದು ಶೇಕಡ 80ರಷ್ಟು ಕೆರೆಗಳಲ್ಲಿ ನೀರು ತುಂಬಿರುವ ದೃಶ್ಯ ಕಂಡು ಬಂದಿದೆ.ಈ ಕಾರಣದಿಂದ ವನ್ಯಜೀವಿಗಳಿಗೆ ಕುಡಿಯುವ ನೀರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ ಎಂದು ಕುಶಾಲನಗರ ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಮಾಹಿತಿ ನೀಡಿದ್ದಾರೆ.
ಕುಶಾಲನಗರ -ಮಡಿಕೇರಿ ಹೆದ್ದಾರಿ ರಸ್ತೆಯ ಹಂಚಿನಲ್ಲಿರುವ ಆನೆಕಾಡು 7ನೇ ಹೊಸಕೋಟೆ ಅತ್ತೂರು ಸೇರಿದಂತೆ ದುಬಾರೆ ಮತ್ತಿತರ ಅರಣ್ಯಗಳಲ್ಲಿ ಕೆರೆಗಳಲ್ಲಿ ನೀರು ಸಂಗ್ರಹ ಯಥೇಚ್ಛ ಪ್ರಮಾಣದಲ್ಲಿ ಗೋಚರಿಸಿದ್ದು, ಕಾಡಾನೆಗಳು ಹುಲಿ ಮತ್ತು ಇತರ ವನ್ಯಜೀವಿಗಳು ಕುಡಿಯುವ ನೀರಿಗಾಗಿ ಈ ಕೆರೆಗಳನ್ನು ಅವಲಂಬಿಸಿವೆ.ಬೇಸಿಗೆ ಹಿನ್ನೆಲೆಯಲ್ಲಿ ಕೆಲವು ಕೆರೆಗಳಲ್ಲಿ ಮಾತ್ರ ನೀರಿನ ಸಂಗ್ರಹ ಮಟ್ಟ ಕಡಿಮೆಯಾಗಿದೆ. ಅತ್ತೂರು ಅರಣ್ಯ ವ್ಯಾಪ್ತಿಯಲ್ಲಿ ಹಾರಂಗಿ ಜಲಾಶಯದ ನೀರನ್ನು ಕೂಡ ಈ ಭಾಗದ ಅರಣ್ಯದಲ್ಲಿರುವ ವನ್ಯಜೀವಿಗಳಿಗೆ ಸಹಕಾರಿಯಾಗಿದೆ.
ಅಗತ್ಯ ಬಿದ್ದರೆ ಕೊಳವೆ ಬಾವಿ ನೆರವು:ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್, ಅಗತ್ಯವಿದ್ದಲ್ಲಿ ಸೋಲಾರ್ ವಿದ್ಯುತ್ ಬಳಸಿ ಕೊಳವೆಬಾವಿ ತೋಡುವ ಮೂಲಕ ನೀರನ್ನು ಕೆರೆಗಳಿಗೆ ಹಾರೈಸುವ ಯೋಜನೆ ಬಗ್ಗೆ ಚಿಂತನೆ ಹರಿಸಲಾಗಿದೆ ಎಂದು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ. ಅರಣ್ಯದ ಅಂಚಿನಲ್ಲಿ ಕಾಡ್ಗಿಚ್ಚು ಸಂದರ್ಭ ಕೂಡ ಈ ನೀರಿನ ಬಳಕೆ ಮಾಡಲು ಉಪಯೋಗವಾಗಲಿದೆ ಎಂದು ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.ನದಿಯ ತಟದ 2 ಬದಿಗಳಲ್ಲಿ ಬೆಳೆದು ನಿಂತಿದ್ದ ಬೃಹತ್ ಮರಗಳನ್ನು ಅಕ್ರಮವಾಗಿ ತೆರವುಗೊಳಿಸಿರುವುದು ಕಾವೇರಿ ನದಿಯ ಜಲಮೂಲಗಳಿಗೆ ಧಕ್ಕೆ ಉಂಟಾಗಲು ಪ್ರಮುಖ ಕಾರಣವಾಗಿದೆ. ಅರಣ್ಯಗಳಲ್ಲಿ ಮರಗಳನ್ನು ರಕ್ಷಿಸುವ ಮೂಲಕ ನೀರಿನ ಸೆಲೆಗಳನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿರುವುದು, ಈ ಮೂಲಕ ಕೆರೆಗಳಲ್ಲಿ ನೀರಿನ ಸಂಗ್ರಹ ಮಟ್ಟ ಉಳಿಯಲು ಕಾರಣ ಎಂಬುದು ಕಾವೇರಿ ಪರಿಸರ ರಕ್ಷಣಾ ಬಳಗದ ಪ್ರಮುಖ ಮದನ್ ಅವರ ಅಭಿಪ್ರಾಯವಾಗಿದೆ.
ಕುಶಾಲನಗರ ಸಮೀಪದ ದುಬಾರೆ ಅರಣ್ಯ ವ್ಯಾಪ್ತಿಯಲ್ಲಿ ಅಮ್ಮಾಳೆ ಕೆರೆ ಮತ್ತು ಬುಂಡೆಕೆರೆ ಬಾಚಿಕೆರೆಯಲ್ಲಿ ನೀರಿನ ಸಂಗ್ರಹ ಇರುವುದಾಗಿ ದುಬಾರೆ ಅರಣ್ಯ ಶಾಖೆಯ ಉಪವಲಯ ಅರಣ್ಯಾಧಿಕಾರಿ ಕನ್ನಂಡ ರಂಜನ್ ಮಾಹಿತಿ ನೀಡಿದ್ದಾರೆ.ಈ ವ್ಯಾಪ್ತಿಯಲ್ಲಿ ಕಾಡಾನೆ ಹುಲಿ ಸೇರಿದಂತೆ ಮತ್ತಿತರ ವನ್ಯಜೀವಿಗಳು ಕುಡಿಯಲು ಅರಣ್ಯದ ಅಂಚಿನಲ್ಲಿರುವ ಕಾವೇರಿ ನದಿಯ ನೀರನ್ನು ಕೂಡ ಅವಲಂಬಿಸಿದೆ ಎಂದು ತಿಳಿಸಿದ್ದಾರೆ.ವಿರಾಜಪೇಟೆ ವಿಭಾಗದ ಅರಣ್ಯ ವ್ಯಾಪ್ತಿಯಲ್ಲಿ ವನ್ಯಜೀವಿಗಳಿಗೆ ಕುಡಿಯುವ ನೀರಿನ ಕೊರತೆ ಇರುವುದಿಲ್ಲ. ಈ ವ್ಯಾಪ್ತಿಯ ಬಹುತೇಕ ಕಡೆ ಕಾಫಿ ತೋಟಗಳು ಹಾಗೂ ನಾಗರಹೊಳೆ ಅರಣ್ಯ ಅಂಚಿನಲ್ಲಿ ವನ್ಯಜೀವಿಗಳಿಗೆ ಎಲ್ಲಾ ರೀತಿಯ ಮೂಲಭೂತ ಯೋಜನೆಗಳನ್ನು ರೂಪಿಸಲಾಗಿದ್ದು ವನ್ಯಜೀವಿಗಳಿಗೆ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ.
-ಶರಣಬಸಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ.