ಕನ್ನಡಪ್ರಭ ವಾರ್ತೆ ಇಳಕಲ್ಲ

ಇಳಕಲ್ಲ ನಗರದಲ್ಲಿ ೧೨ ಪೆಟ್ರೋಲ್‌ ಬಂಕ್‌ನಲ್ಲಿ ಇದ್ದರೂ ವಾಹನ ಸವಾರರು, ರೈತರು, ಲಾರಿ ಚಾಲಕರು ಪೆಟ್ರೋಲ್, ಡಿಸೇಲ್‌ಗಾಗಿ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಮಧ್ಯಪ್ರಾಚ್ಯ ಯುದ್ಧ ಭೀತಿ, ಹಾರ್ಮೂಜ್‌ ಜಲಸಂಧಿ ದಿಗ್ಭಂಧನದಿಂದ ತೈಲ ಪೂರೈಕೆ ವ್ಯತ್ಯದ ಕಾರಣ ಇಳಕಲ್ಲ ನಗರದಲ್ಲಿ ೧೨ ಬಂಕ್‌ಗಳಿದ್ದರೂ ಸಮರ್ಮಕವಾಗಿ ಡೀಸೆಲ್‌ ಪೂರೈಕೆ ಆಗದ ಕಾರಣ ರೈತರು ಗಂಟೆಗಳ ಕಾಲ ಸರದಿಯಲ್ಲಿ ನಿಂತರೂ ಡೀಲ್‌ ಸಿಗುತ್ತಿಲ್ಲ. ನಗರದಲ್ಲಿರುವ ಸೊಲ್ಲಾಪುರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಲಾರಿಗಳು ಸರಕು ಹೊತ್ತುಕೊಂಡು ಡೀಸೆಲ್‌ಗಾಗಿ ಬಂಕ್‌ಗಳಿಗೆ ಅಲೆಯುತಿದ್ದಾರೆ. ಸ್ಟಾಕ್‌ ಇರುವ ಬಂಕ್‌ನಲ್ಲಿ ಸರತಿಯಲ್ಲಿ ನಿಂತರೂ ಪಾಳೆಯ ಬರುವಷ್ಟರಲ್ಲಿ ಡೀಸೆಲ್ ಖಾಲಿ ಆಗುತ್ತಿದೆ. ಬಹುತೇಕ ರೈತರು ಈಗ ಕೃಷಿ ಕೆಲಸದಲ್ಲಿ ಟ್ರ್ಯಾಕ್ಟರ್‌ ಅವಲಂಭಿಸಿದ್ದಾರೆ. ಡೀಸೆಲ್‌ ಅಭಾವದಿಂದ ಅನೇಕ ರೈತರು ಹೊಲದ ಉಳುಮೆ ನಿಲ್ಲಿಸಿದ್ದಾರೆ. ಪ್ರತಿದಿನ ರೈತರು ಬೆಳಗ್ಗೆ ೫ ಗಂಟೆಗೆ ವಾಹನ ಹಾಗೂ ಕ್ಯಾನ್‌ ಹಿಡಿದು ಸರದಿ ನಿಲ್ಲುತ್ತಿದ್ದಾರೆ. ಆದರೆ ಬಂಕ್‌ ಮಾಲೀಕರು ಕ್ಯಾನ್‌ ತಂದವರಿಗೆ ಡೀಸೆಲ್‌ ಕೊಡಲ್ಲ ಎಂದು ಹೇಳುತ್ತಿದ್ದಾರೆ. ರೈತರು ಗ್ರಾಮದಿಂದ ಟ್ರ್ಯಾಕ್ಟರ್‌ ತಂದು ಡೀಸೆಲ್‌ ಹಾಕಿಸುವುದು ಆಗಲ್ಲ. ದಯವಿಟ್ಟು ಡೀಸೆಲ್‌ ಕಡುವಂತೆ ಮನವಿ ಮಾಡಿದರೂ ಸರಕಾರ ಕ್ಯಾನ್‌ಗಳಲ್ಲಿ ಡೀಸೆಲ್‌ ಕೊಡದಂತೆ ಆದೇಶ ಮಾಡಿದೆ ಎಂದು ತಿಳಿಸುತ್ತಿದ್ದಾರೆ. ಇದರಿಂದ ರೈತರಿಗೆ ತೊಂದರೆ ಆಗುತ್ತಿದೆ. ದೇಶದ ಬೆನ್ನೆಲುಬಾದ ರೈತರು ಕೃಷಿ ಕಾಯಕ ಮಾಡಬೇಕಾದರೆ ಪೆಟ್ರೋಲ್‌ ಬಂಕ್‌ನವರು ಕ್ಯಾನ್‌ಗಳಲ್ಲಿ ಡೀಸೆಲ್‌ ಕೊಡುವ ವ್ಯವಸ್ಥೆ ಮಾಡಬೇಕೆಂದು ರೈತರು ಆಗ್ರಹಿಸಿದ್ದಾರೆ.