ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜಾತಿ ಜನಗಣತಿ ಸಂದರ್ಭದಲ್ಲಿ ಎಲ್ಲಾ ಒಕ್ಕಲಿಗರ ಉಪಪಂಗಡಗಳನ್ನು ಬಿಟ್ಟು ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸಬೇಕು. ಆ ಮೂಲಕ ಒಕ್ಕಲಿಗರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಸರ್ಕಾರದಿಂದ ಹಕ್ಕು, ಸೌಕರ್ಯ ಪಡೆಯಲು ಒಕ್ಕಲಿಗರು ಸಂಘಟಿತರಾಗಿ ಜಾಗೃತರಾಗಬೇಕು ಎಂದು ಒಕ್ಕಲಿಗ ಸಮಾಜದ ಸ್ವಾಮೀಜಿಗಳು, ವಿವಿಧ ಮುಖಂಡರು ಮನವಿ ಮಾಡಿದರು.ಕೇಂದ್ರ ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿ ನಗರದ ಕುಂಚಿಟಿಗ ಸಮುದಾಯ ಭವನದಲ್ಲಿ ಗುರರುವಾರ ಹಮ್ಮಿಕೊಂಡಿದ್ದ ಒಕ್ಕಲಿಗರ ಜಾತಿಜನಗಣತಿ ಜಾಗೃತಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿಗಳು, ನಮ್ಮಲ್ಲಿ ಎಷ್ಟೇ ಉಪ ಪಂಗಡಗಳಿದ್ದರೂ ಒಕ್ಕಲಿಗರು ಒಂದೇ ಎಂಬ ಸಂದೇಶ ಸಾರಿದರು.ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ಒಕ್ಕಲಿಗ ಸಮಾಜದ ಹಿತಕ್ಕಾಗಿ ಎಲ್ಲರೂ ಆರೋಗ್ಯಕರವಾಗಿ ಚಿಂತನೆ ಮಾಡಬೇಕು. ಉಪಜಾತಿಗಳ ವ್ಯತ್ಯಾಸ ಬಿಟ್ಟು ಒಕ್ಕಲಿಗರೆಲ್ಲಾ ಒಂದಾಗಿ ಸಂಘಟಿತರಾಗಿ ಜಾತಿ ಜನಗಣತಿಯಲ್ಲಿ ಜಾತಿ ಕಾಲಂನಲ್ಲಿ ಒಕ್ಕಲಿಗ ಎಂದು ನೋಂದಾಯಿಸಿ ಒಕ್ಕಲಿಗರ ಸಂಖ್ಯೆಯನ್ನು ನಿಖರವಾಗಿ ನೋಂದಣಿ ಮಾಡಿ ಜಾತಿ ಜನಸಂಖ್ಯೆ ಆಧಾರದಲ್ಲಿ ವಿವಿಧ ಸಮಲತ್ತು ಪಡೆಯಲು ಸಾಧ್ಯವಾಗುತ್ತದೆ. ಉಪಪಂಗಡಗಳ ಗೊಂದಲ ನಿವಾರಿಸಿ ಒಕ್ಕಲಿಗರನ್ನು ಸಂಘಟನೆ ಮಾಡಲು ಎಲ್ಲೆಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಬರುವ ಶನಿವಾರ ಬೆಂಗಳೂರಿನ ಆದಿಚುಂಚನಗಿರಿ ಸಂಸ್ಥಾನದಲ್ಲಿ ನಿರ್ಮಲಾನಂದನಾಥ ಸ್ವಾಮೀಜಿಗಳ ನೇತೃತ್ವದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪಕ್ಷಾತೀತವಾಗಿ ಸಮಾಜದ ಮುಖಂಡರು ಸಭೆ ಸೇರಿ ಒಕ್ಕಲಿಗರ ಜಾಗೃತಿ ಸಭೆ ನಡೆಸುವರು. ಎಲ್ಲರೂ ಒಗ್ಗಟ್ಟಾಗಿ ಒಕ್ಕಲಿಗರ ಸಮಾಜ ಕಟ್ಟೋಣ, ಉಪಪಂಗಡಗಳ ಹೆಸರಿನಲ್ಲಿ ಸಮಾಜ ಒಡೆಯುವ ಪ್ರಯತ್ನಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಡಾ.ರಂಗನಾಥ್ ಮನವಿ ಮಾಡಿದರು.ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ನಂಜಾವಧೂತ ಸ್ವಾಮೀಜಿ ಮಾತನಾಡಿ, ರಾಜ್ಯದಲ್ಲಿರುವ ಒಕ್ಕಲಿಗರ ಸಂಘಟನಾ ಶಕ್ತಿ, ಒಗ್ಗಟ್ಟನ್ನು ಜಾತಿಜನಗಣತಿಯಲ್ಲಿ ಸಾಬೀತು ಮಾಡಬೇಕು. ಉಪಪಂಗಡಗಳ ಮೂಲಕ ಒಕ್ಕಲಿಗ ಸಮಾಜ ವಿಘಟನೆಯಾಗಬಾರದು. ಸಂಘಟಿತರಾದರೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಶಕ್ತಿ ಮೂಡುತ್ತದೆ.ಎಲ್ಲಾ ಉಪಪಂಗಡಗಳೂ ಒಕ್ಕಲಿಗರಾಗಿ ಒಟ್ಟಾಗಿ ಸಾಗೋಣ ಎಂದು ಹೇಳಿದರು.ಆದಿಚುಂಚನಗಿರಿ ಸಂಸ್ಥಾನದ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಉಪಜಾತಿ, ಪಂಗಡಗಳಿಂದ ಒಕ್ಕಲಿಗ ಸಮಾಜದ ಶಕ್ತಿ ಕ್ಷೀಣಿಸುತ್ತದೆ. ನಾವು ಸರ್ಕಾರದಿಂದ ಸೌಲಭ್ಯಗಳನ್ನು ನ್ಯಾಯಬದ್ಧವಾಗಿ ಪಡೆಯಲು ಸಾಧ್ಯವಾಗುವುದಿಲ್ಲ. ಒಕ್ಕಲಿಗ ಸಮಾಜಕ್ಕೆ ಇರುವ ಮೀಸಲಾತಿಯ ಉಪಯೋಗವನ್ನು ದೊರಕಿಸಬೇಕು. ಸಮಾಜ ಒಡೆಯುವ ಶಕ್ತಿಗಳಿಗೆ ಅವಕಾಶ ನೀಡದಂತೆ ಒಕ್ಕಲಿಗರು ಸಂಘಟಿತರಾಗಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ವಿಶ್ವಒಕ್ಕಲಿಗರ ಮಹಾಸಂಸ್ಥಾನದ ನಿಶ್ಚಲಾನಂದನಾಥ ಸ್ವಾಮೀಜಿ, ಜಾತಿಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿಕಾಲಂನಲ್ಲಿ ಒಕ್ಕಲಿಗ ಎಂದು ನಮೂದಿಸಿ ಒಕ್ಕಲಿಗರ ನಿಖರವಾದ ಸಂಖ್ಯೆ ದಾಖಲು ಮಾಡಬೇಕು ಎಂದರು.ಮಾಜಿ ಶಾಸಕ ಎಚ್.ನಿಂಗಪ್ಪ ಮಾತನಾಡಿ, ಒಕ್ಕಲಿಗ ಸಮಾಜ ಸಾಮಾಜಿಕವಾಗಿ ಶಕ್ತಿಯುತವಾಗಿ ಸಂಘಟಿತರಾಗಬೇಕು ಎಂದು ಬಾಲಗಂಗಾಧರನಾಥ ಸ್ವಾಮೀಜಿಗಳು ಪ್ರಯತ್ನಪಟ್ಟಿದ್ದರು. ಒಕ್ಕಲಿಗರು ಉಪಪಂಗಡ ಮರೆತು ಒಂದಾಗಿ ಸ್ವಾಮೀಜಿಯವರ ಆಶಯವನ್ನು ಈಡೇರಿಸೋಣ ಎಂದರು.ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹನುಮಂತರಾಯಪ್ಪ, ಲೋಕೇಶ್ ನಾಗರಾಜಯ್ಯ, ರಾಜ್ಯಕುಂಚಿಟಿಗರ ಸಂಘದ ಉಪಾಧ್ಯಕ್ಷ ಎಲ್. ಲಿಂಗಣ್ಣ, ಒಕ್ಕಲಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ನಾಗರಾಜು, ಜಿಲ್ಲಾ ಕುಂಚಿಟಿಗರ ಸಂಘದಅಧ್ಯಕ್ಷ ನೇತಾಜಿ ಶ್ರೀಧರ್, ಮಾಜಿ ಅಧ್ಯಕ್ಷ ದೊಡ್ಡಲಿಂಗಪ್ಪ, ಆರ್.ಕಾಮರಾಜ್, ಉಪ್ಪಿನಕೊಳಗ ಒಕ್ಕಲಿಗರ ಸಂಘದ ನರಸಿಂಹರಾಜು, ಒಕ್ಕಲಿಗ ಸಮಾಜದ ಮುಖಂಡರಾದ ಭೈರವಗಿರೀಶ್, ಮಂಜುನಾಥ್, ಶಿರಾ ರಮೇಶ್, ವೀರನಾಗಪ್ಪ, ಭಕ್ತರಹಳ್ಳಿ ದೇವರಾಜು, ವೀರಕ್ಯಾತಯ್ಯ ಮೊದಲಾದವರು ಭಾಗವಹಿಸಿದ್ದರು.