ಸಾರಾಂಶ
ಕನ್ನಡಪ್ರಭ ವಾರ್ತೆ ನಾಗಮಂಗಲ
ಕೃಷಿ ಮಾರುಕಟ್ಟೆ ಇದ್ದರೂ ಸಹ ವೈಜ್ಞಾನಿಕವಾದ ಯೋಜನೆ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಜಿಲ್ಲೆಯ ಬಯಲು ಸೀಮೆ ಸಾವಯವ ಕೃಷಿಕರ ಸಂಘದ ಗೌರವಾಧ್ಯಕ್ಷ ಎಂ.ಪಿ.ಶಂಕರಯ್ಯ ಬೇಸರ ವ್ಯಕ್ತಪಡಿಸಿದರು.ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಬಿಜಿಎಸ್ ಸಭಾಂಗಣದಲ್ಲಿ ಭೈರವೈಕ್ಯ ಡಾ. ಬಾಲಗಂಗಾಧರನಾಥ ಸ್ವಾಮೀಜಿ 79ನೇ ಜಯಂತ್ಯುತ್ಸವ ಹಾಗೂ 11ನೇ ವರ್ಷದ ಸಂಸ್ಮರಣಾ ಮಹೋತ್ಸವದ ಪ್ರಯುಕ್ತ ಶನಿವಾರ ಆಯೋಜಿಸಿದ್ದ ಕೃಷಿ ಮೇಳ ಮತ್ತು ರೈತ ಸಂಗಮ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಹಿಂದೆ ಭೂಮಿ ಉಳುಮೆ ಮಾಡಲು ಎತ್ತು ಗಾಡಿಗಳಿದ್ದವು. ಗೊಬ್ಬರ ಸಿಗುತ್ತಿತ್ತು. ಇದರಿಂದ ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆದು ಅಧಿಕ ಲಾಭದೊಂದಿಗೆ ನೆಮ್ಮದಿ ಬದುಕು ನಡೆಸುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಯಾವುದೇ ಬೆಳೆ ಬೆಳೆಯಬೇಕೆಂದರೆ ಭೂಮಿ ಉಳುಮೆಗೆ ಟ್ರ್ಯಾಕ್ಟರ್ ಯಾಂತ್ರೀಕರಣ, ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಬೇಕು. ಕೃಷಿ ವೆಚ್ಚ ಏರುತ್ತಿರುವ ಬಗ್ಗೆ ರೈತರು ಎಷ್ಟೇ ಹೋರಾಟ ನಡೆಸಿದರೂ ಸಹ ವೈಜ್ಞಾನಿಕವಾದ ಬೆಲೆ ಸಿಗದಿರುವುದು ಬೇಸರ ತಂದಿದೆ ಎಂದರು.ಜನಸಂಖ್ಯೆಗೆ ಅನುಗುಣವಾಗಿ ಎಷ್ಟು ಆಹಾರ ಧಾನ್ಯ ಬೇಕೆಂಬುದನ್ನು ನಿಗದಿ ಮಾಡಿ ಸೂಕ್ತ ಸಲಹೆಯೊಂದಿಗೆ ರೈತರಲ್ಲಿ ಜಾಗೃತಿ ಮೂಡಿಸಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮವಹಿಸಬೇಕು ಎಂದರು.
ಬೆಂಗಳೂರಿನ ಆದಿಚುಂಚನಗಿರಿ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ ಮಾತನಾಡಿ, ಕೃಷಿ ರೈತರ ಬೆನ್ನೆಲುಬು. ಸೃಷ್ಟಿಯಲ್ಲಿ ಪ್ರಾರಂಭವಾಗಿರುವ ಮನುಷ್ಯ ಪ್ರಾಣಿ ಪಕ್ಷಿಗಳೆಲ್ಲಕ್ಕೂ ಆಹಾರ ಬಹಳ ಮುಖ್ಯ. ರೈತರೆಂದರೆ ಸಾಮಾನ್ಯ ಮನುಷ್ಯರಲ್ಲ ಬಹುದೊಡ್ಡ ನೇಗಿಲ ಯೋಗಿ ತ್ಯಾಗಿಗಳು. ಅವರು ಬೆಳೆಯುವ ಒಳ್ಳೆಯ ದವಸ ಧಾನ್ಯಗಳನ್ನು ಬೇರೆಯವರಿಗೆ ಕೊಟ್ಟು ಉಳಿದಿದ್ದನ್ನು ತಾವು ಸೇವಿಸುವ ಮನೋಭಾವ ಉಳ್ಳವರೇ ರೈತರು ಎಂದರು.ರೈತರ ಬಗ್ಗೆ ಎಷ್ಟು ಹೇಳಿದರೂ ಸಾಲದು. ರೈತರು ತಮ್ಮ ಕರ್ತವ್ಯಗಳನ್ನು ಎಂದಿಗೂ ಮರೆಯಬಾರದು. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ದೇಶ ಸೇವೆ ಮಾಡಬೇಕು ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಎಸ್.ಅಶೋಕ್ ಸೇರಿದಂತೆ ಹಲವರು ಮಾತನಾಡಿದ ಬಳಿಕ ಶ್ರೀಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯವಹಿಸಿ ಆಶೀರ್ವದಿಸಿದರು.ವಿಶೇಷ ಉಪನ್ಯಾಸ: ಸುಸ್ಥಿರ ಕಬ್ಬು ಬೇಸಾಯ ಉಪಕ್ರಮ ಕುರಿತು ವಿಸಿ ಫಾರ್ಮ್ ವಲಯ ಕೃಷಿ ಸಂಶೋಧನಾ ಕೇಂದ್ರ ಬೆಲ್ಲದ ಪಾರ್ಕ್‌ನ ವಿಜ್ಞಾನಿ ಡಾ.ಸ್ವಾಮಿಗೌಡ, ಬರಪರಿಸ್ಥಿತಿಯಲ್ಲಿ ನೀರಿನ ಸಬ್ದಳಕೆ ಕುರಿತು ಬೆಂಗಳೂರು ಕೃಷಿ ಇಲಾಖೆ ಕೃಷಿ ವಿಜ್ಞಾನಿ ಡಾ.ಆನಂತಕುಮಾರ್, ಕೃಷಿ ಯಾಂತ್ರೀಕರಣದ ಅನಿವಾರ್ಯತೆ ಕುರಿತು ಕೃಷಿ ವಿಜ್ಞಾನಿ ಡಾ.ಪ್ರವೀಣ್ ಹಾಗೂ ಮೇವು ಅಭಿವೃದ್ಧಿ ಕುರಿತು ಡಾ.ಬಿ.ಜಿ.ಶೇಖರ್ ವಿಶೇಷ ಉಪನ್ಯಾಸ ನೀಡಿದರು.
ಎರಡು ದಿನಗಳ ಕಾಲ ನಡೆದ ಕೃಷಿ ಮೇಳ ಮತ್ತು ರೈತ ಸಂಗಮ ಶನಿವಾರ ಸಂಪನ್ನಗೊಂಡಿತು. ನಾಡಿನಾದ್ಯಂತದಿಂದ ಹಲವಾರು ರೈತರು, ಕೃಷಿ ಯುವಕರು ಕೃಷಿ ಮೇಳಕ್ಕೆ ಆಗಮಿಸಿ, ವೀಕ್ಷಣೆಯ ಜೊತೆಗೆ ಕೃಷಿ ಬಗ್ಗೆ ಮಾಹಿತಿ ಪಡೆದುಕೊಂಡರು. ಕ್ಷೇತ್ರದ ಶ್ರೀ ಕಾಲಭೈರವೇಶ್ವರ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಆಯೋಜಿಸಲಾಗಿದ್ದ 70ಕ್ಕೂ ಹೆಚ್ಚು ವಸ್ತು ಪ್ರದರ್ಶನಗಳು ಆಯೋಜನೆಗೊಂಡಿದ್ದವು. ಒಟ್ಟಾರೆ ಕೃಷಿ ಮೇಳ ರೈತರ ಆಕರ್ಷಣೆಯಾಯಿತು.ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಚೈತನ್ಯನಾಥ ಸ್ವಾಮೀಜಿ, ಉಪ ನಿರ್ದೇಶಕಿ ಡಾ.ಕೆ.ಮಾಲತಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹರೀಶ್, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ. ಈಶ್ವರಪ್ರಸಾದ್, ಜಿಲ್ಲೆಯ ವಿವಿಧ ರೈತ ಉತ್ಪಾದಕ ಕಂಪನಿ ಅಧ್ಯಕ್ಷರಾದ ಕಾರಸವಾಡಿ ಮಹದೇವ, ರಮೇಶ್, ರಾಮಣ್ಣ, ಶಂಕರಯ್ಯ, ಗೋಪಾಲ್, ಮಹೇಶ್‌ಚಂದ್ರಗುರು, ಹನುಮಂತೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಕೃಷಿ ಸಮಾಜದ ಅಧ್ಯಕ್ಷರು, ಸಾವಯವ ಕೃಷಿಕರು, ನೈಸರ್ಗಿಕ ಕೃಷಿಕರು, ಪ್ರಗತಿಪರ ರೈತರು, ರೈತ ಮಹಿಳೆಯರು ಇದ್ದರು.