ಸಾರಾಂಶ
45 ದಿನಗಳ ಜತೆಗೆ ಮೂರು ತಿಂಗಳವರೆಗೆ ನೋಂದಣಿ ಪ್ರಕ್ರಿಯೆಗೆ ಅನುಮತಿ । ಖರೀದಿಗೆ ಎನ್‌ಐಸಿ ತಂತ್ರಾಂಶ
ನಂದನ್ಪುಟ್ಟಣ್ಣಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ರಾಜ್ಯದಲ್ಲೇ ಅತೀ ಹೆಚ್ಚು ಕೊಬ್ಬರಿ ಅವಲಂಬಿತ ತಾಲೂಕಾಗಿರುವ ಚನ್ನರಾಯಪಟ್ಟಣದಲ್ಲಿ ರೈತರಿಗೆ ಕೇಂದ್ರ ಸರ್ಕಾರದ ಸೂಚನೆಯಂತೆ ನಾಫೆಡ್ ಸಂಸ್ಥೆ ಮೂಲಕ ಉಂಡೆ ಕೊಬ್ಬರಿ ಖರೀದಿಸಲು ರಾಜ್ಯ ಸರ್ಕಾರ ಸಮ್ಮತಿ ನೀಡಿದ್ದು ಜ.೨೦ ರಿಂದ ನೋಂದಣಿ ಆರಂಭವಾಗಲಿದೆ.ತಿಪಟೂರು, ಅರಸೀಕೆರೆ ಮತ್ತು ಚನ್ನರಾಯಪಟ್ಟಣ ಅತೀ ಹೆಚ್ಚು ತೆಂಗು ಬೆಳೆಯುವ ಪ್ರದೇಶವಾಗಿದ್ದು, ರೈತರು ಶೇ. ೭೫ರಷ್ಟು ತೆಂಗಿನ ಬೆಳೆಯ ಮೇಲೆ ಅವಲಂಬಿತರಾಗಿದ್ದಾರೆ. ಈ ಬಾರಿ ನಾಫೆಡ್ ಕೇಂದ್ರದಕ್ಕೆ ಹೆಚ್ಚು ಕೊಬ್ಬರಿ ಬರುವ ನಿರೀಕ್ಷೆಗಳಿವೆ.
ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಸಂಸ್ಥೆಯನ್ನು ರಾಜ್ಯ ಸರ್ಕಾರ ಮಾರಾಟ ಸಂಸ್ಥೆಯಾಗಿ ನೇಮಿಸಿದ್ದು ೧೨೦೦೦ ರು. ಎಂಎಸ್‌ಪಿ ಜತೆಗೆ ೧೫೦೦ ರು. ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ಘೋಷಿಸಿರುವುದರಿಂದ ಮತ್ತೊಮ್ಮೆ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿಲ್ಲ. ಆದರೆ, ಕೊಬ್ಬರಿ ಖರೀದಿ ಪ್ರಕ್ರಿಯೆ ನಡೆದ ಮೂರು ದಿನದಲ್ಲಿ ರೈತರ ಖಾತೆಗೆ ಹಣ ಬರಬೇಕು ಎಂಬ ರೈತರ ಬೇಡಿಕೆ ಬಗ್ಗೆ ಸಹಕಾರ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾವುದೇ ಚಕಾರವಿಲ್ಲ.೨೦೨೪ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿ ಖರೀದಿಸಲು ಅನುಮತಿ ನೀಡಿದೆ. ಪ್ರತಿ ಕ್ವಿಂಟಾಲ್‌ಗೆ ೧೨೦೦೦ ರು. ನಂತೆ ೬೨೫೦೦ ಮೆಟ್ರಿಕ್ ಟನ್ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ತುಮಕೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ರೈತರಿಂದ ಖರೀದಿಗೆ ಒಪ್ಪಿಗೆ ನೀಡಲಾಗಿದೆ.
ಉಂಡೆ ಕೊಬ್ಬರಿ ಖರೀದಿಗೂ ಮುಂಚೆ ಎನ್‌ಐಸಿ ಸಂಸ್ಥೆಯು ಬೆಂಬಲ ಬೆಲೆ ಯೋಜನೆಯಡಿ ಭತ್ತ, ರಾಗಿ ಖರೀದಿಗೆ ಸಿದ್ಧಪಡಿಸಿರುವ ತಂತ್ರಾಂಶವನ್ನೇ ಇಲ್ಲಿಯೂ ಬಳಸಲಾಗುತ್ತಿದ್ದು ಶೀಘ್ರದಲ್ಲಿಯೇ ನಾಫೆಡ್ ಸಂಸ್ಥೆ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.೧ ಎಕರೆಗೆ ಆರು ಕ್ವಿಂಟಲ್ ಕೊಬ್ಬರಿ ಮಾರಾಟ ಮಾಡಲು ಅವಕಾಶವಿದ್ದು, ಗರಿಷ್ಠ ೨೦ ಕ್ವಿಂಟಲ್ ಮಾರಾಟ ಮಾಡಬಹುದು. ಖರೀದಿ ಕೇಂದ್ರಗಳ ಸಂಖ್ಯೆಯನ್ನು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್ ಪೋರ್ಸ್ ನಿರ್ಧರಿಸಲಿದೆ. ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿದ ರೈತರಿಗೆ ನೇರವಾಗಿ ಅವರ ಖಾತೆಗೆ ಹಣ ಜಮಾ ಆಗಲಿದೆ. ವರ್ತಕರಿಂದ ಖರೀದಿಸದಂತೆ ಸೂಚನೆ ನೀಡಲಾಗಿದೆಯಾದರೂ ರಾಗಿ ಮಾರಾಟದಂತೆ ಕೊಬ್ಬರಿಯಲ್ಲಿಯೂ ಮಧ್ಯವರ್ತಿಗಳು ನುಸುಳುವ ಅಪಾಯ ಇದ್ದೇ ಇದೆ.
ಚನ್ನರಾಯಪಟ್ಟಣದ ಎಪಿಎಂಸಿಯಲ್ಲಿ ವಾರ್ಷಿಕವಾಗಿ ೯೨,೫೮೩.೬೦ ಕ್ವಿಂಟಲ್ ಕೊಬ್ಬರಿ ವಹಿವಾಟು ನಡೆಯುತ್ತಿದೆ. ಪ್ರಸ್ತುತ ಸರ್ಕಾರ ೬೨೫೦೦ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಗೆ ಮುಂದಾಗಿರುವುದು ರೈತರಿಗೆ ಅನುಕೂಲವಾಗಲಿದೆ.ಪಟ್ಟಣದ ಎ.ಪಿ.ಎಂ.ಸಿ. ಆವರಣದಲ್ಲಿ ಜ.೧೯ರಿಂದ ಅರ್ಜಿ ಸ್ವೀಕರಿಸಲು ಪ್ರಾರಂಭಿಸಲಾಗುವುದು ರೈತರು ಎಫ್‌ಐಡಿ ಮತ್ತು ಆಧಾರ್ ಕಾರ್ಡ್ ತಂದು ನೋಂದಣಿ ಮಾಡಿಸಿಕೊಂಡು ಕೊಬ್ಬರಿಯನ್ನು ಬಿಡಬಹುದಾಗಿದ್ದು ರೈತ ಸಮಸ್ಯೆಗಳಿಗೆ ಹಾಗೂ ಮಾಹಿತಿ ಪಡೆಯಲು ನಾಫೆಡ್ ಅಧಿಕಾರಿ ಚೇತನ್ ಅವರ ದೂರವಾಣಿ ಸಂಖ್ಯೆ ೦೮೧೭೬-೪೫೪೨೪೫ ಸಂಪರ್ಕಿಸಬಹುದಾಗಿದೆ.
ಮೂರು ತಿಂಗಳ ಖರೀದಿ!:ವರ್ಷಪೂರ್ತಿ ಕೊಬ್ಬರಿ ಖರೀದಿಗೆ ಅವಕಾಶ ನೀಡಬೇಕೆಂಬ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸ್ಪಂದಿಸಿಲ್ಲ. ಜ.೨೦ರಂದು ರೈತರ ನೋಂದಣಿ ಆರಂಭವಾಗಲಿದ್ದು ೪೫ ದಿನಗಳ ಕಾಲ ನೋಂದಣಿ ಜತೆಗೆ ಮುಂದಿನ ಮೂರು ತಿಂಗಳು ಖರೀದಿಗೆ ಅವಕಾಶ ಮಿತಿಗೊಳಿಸಲಾಗಿದೆ. ಏಪ್ರಿಲ್‌ನಲ್ಲಿ ಲೋಕಸಭಾ ಚುನಾವಣೆ ಪೂರ್ಣವಾಗಲಿದ್ದು ನಂತರದಲ್ಲಿ ಖರೀದಿ ಕೇಂದ್ರ ಇರುವ ಬಗ್ಗೆ ತೆಂಗು ಬೆಳೆಗಾರರಿಗೆ ಅನುಮಾನಗಳಿವೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಕೊಬ್ಬರಿಗೆ ಬೆಂಬಲ ಬೆಲೆ ನೀಡಲು ಮುಂದಾಗಿರುವುದು ಸ್ವಾಗತಾರ್ಹ. ಆದರೆ ನಾಫೆಡ್‌ನವರು ಕೊಬ್ಬರಿ ಖರೀದಿ ಮಾಡಿದ ಮೂರು ದಿನಗಳಲ್ಲಿ ರೈತ ಖಾತೆಗೆ ಹಣ ನೀಡಬೇಕು. ಇದರಿಂದ ರೈತ ಸಂಕಷ್ಟ ನಿವಾರಣೆಯಾಗಲಿದೆ.ಚಂದ್ರಕಲಾ ಗಿರೀಶ್, ಗ್ರಾಮ ಪಂಚಾಯಿತಿ ಸದಸ್ಯರು, ಪಡುವನಹಳ್ಳಿ.
ಕೊಬ್ಬರಿ ಖರೀದಿಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಬೇಕು. ನಿಜವಾದ ರೈತರ ಹತ್ತಿರ ಕೊಬ್ಬರಿ ಖರೀದಿ ಮಾಡಿ ತಮ್ಮ ಜಮೀನಿನ ಪಾಣಿ ಮೂಲಕ ನಾಫೆಡ್‌ಗೆ ನೀಡಿ ಹಣ ಮಾಡುತ್ತಿದ್ದಾರೆ, ಇಂತಹ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಿ ಅಧಿಕಾರಿಗಳು ಮೂಲ ರೈತರಿಗೆ ನ್ಯಾಯ ದೊರಕಿಸಬೇಕು.ಪ್ರೇಮಮ್ಮ, ರೈತ ಸಂಘದ ಮಹಿಳಾ ರಾಜ್ಯ ಉಪಾಧ್ಯಕ್ಷರು.