ನ.7ರಂದು ರಾಜಣ್ಣ ಮನೇಲಿ ಮತ್ತೆ ಸಿಎಂ ಸಿದ್ದರಾಮಯ್ಯ ಔತಣಕೂಟ

| N/A | Published : Oct 30 2025, 05:01 AM IST

CM Siddaramaiah
ನ.7ರಂದು ರಾಜಣ್ಣ ಮನೇಲಿ ಮತ್ತೆ ಸಿಎಂ ಸಿದ್ದರಾಮಯ್ಯ ಔತಣಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿ ಸಂಪುಟದಿಂದ ಹೊರಬಿದ್ದಿರುವ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ನ.7 ರಂದು ಊಟಕ್ಕೆ ತೆರಳುತ್ತಿದ್ದು, ಈ ಬೆಳವಣಿಗೆ ಆಡಳಿತಾರೂಢ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

 ಬೆಂಗಳೂರು :  ಹೈಕಮಾಂಡ್‌ ಕೆಂಗಣ್ಣಿಗೆ ಗುರಿಯಾಗಿ ಸಂಪುಟದಿಂದ ಹೊರಬಿದ್ದಿರುವ ಮಾಜಿ ಸಚಿವ ಕೆ.ಎನ್‌.ರಾಜಣ್ಣ ಅವರ ನಿವಾಸಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ನ.7 ರಂದು ಊಟಕ್ಕೆ ತೆರಳುತ್ತಿದ್ದು, ಈ ಬೆಳವಣಿಗೆ ಆಡಳಿತಾರೂಢ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಹೈಕಮಾಂಡ್‌ ವಿರುದ್ಧ ಮಾತನಾಡಿದ್ದಾರೆಂಬ ಕಾರಣ ನೀಡಿ ರಾಜಣ್ಣ ಅವರನ್ನು ಸಂಪುಟದಿಂದ ಉಚ್ಚಾಟನೆ ಮಾಡಲಾಗಿತ್ತು. ಹೈಕಮಾಂಡ್‌ನಿಂದ ಕ್ರಮ ಎದುರಿಸಿರುವ ವ್ಯಕ್ತಿಯ ಮನೆಗೆ ಮುಖ್ಯಮಂತ್ರಿಗಳು ಊಟಕ್ಕೆ ತೆರಳುತ್ತಿರುವುದರಿಂದ ಈ ಭೇಟಿಯನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಕೆ.ಎನ್‌. ರಾಜಣ್ಣ ಅವರು ‘ನವೆಂಬರ್‌ ಕ್ರಾಂತಿ’ ಚರ್ಚೆ ಹುಟ್ಟು ಹಾಕಿದವರು

ಕೆ.ಎನ್‌. ರಾಜಣ್ಣ ಅವರು ‘ನವೆಂಬರ್‌ ಕ್ರಾಂತಿ’ ಚರ್ಚೆ ಹುಟ್ಟು ಹಾಕಿದವರು. ಹೈಕಮಾಂಡ್‌ ವಿರುದ್ಧವೇ ಹೇಳಿಕೆ ನೀಡಿದ್ದರು ಎಂಬ ಕಾರಣಕ್ಕೆ ಸಂಪುಟದಿಂದ ಉಚ್ಛಾಟನೆ ಕ್ರಮ ಎದುರಿಸಿದವರು.

ಜತೆಗೆ ಡಿ.ಕೆ. ಶಿವಕುಮಾರ್‌ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿದ್ದು, ಸಿದ್ದರಾಮಯ್ಯ ಅವರು ಮುಂದಿನ ಎರಡೂವರೆ ವರ್ಷವೂ ಮುಖ್ಯಮಂತ್ರಿ ಆಗಿ ಮುಂದುವರೆಯಬೇಕು ಎಂದು ಈಗಲೂ ವಾದ ಮಂಡಿಸುತ್ತಿದ್ದಾರೆ.

ಜತೆಗೆ ಸದ್ಯದಲ್ಲೇ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡುವುದಾಗಿ ಹೇಳುತ್ತಿದ್ದಾರೆ. ಇಷ್ಟೆಲ್ಲಾ ಚರ್ಚೆಗಳ ಕೇಂದ್ರ ಬಿಂದುವಾಗಿರುವ ಕೆ.ಎನ್‌. ರಾಜಣ್ಣ ಅವರ ನಿವಾಸಕ್ಕೆ ಸಿದ್ದರಾಮಯ್ಯ ಅವರ ಭೇಟಿ ನೀಡುತ್ತಿರುವುದರಿಂದ ರಾಜಕೀಯವಾಗಿ ಹಲವು ರೀತಿಯ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ಆದರೆ, ಮೂಲಗಳ ಪ್ರಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನ.7 ರಂದು ಅಧಿಕೃತ ಸರ್ಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತುಮಕೂರಿಗೆ ತೆರಳುತ್ತಿದ್ದಾರೆ. ಈ ವೇಳೆ ಸೌಜನ್ಯದ ಆಹ್ವಾನಕ್ಕೆ ಬೆಲೆ ನೀಡಿ ಸಿದ್ದರಾಮಯ್ಯ ಅವರು ರಾಜಣ್ಣ ಅವರ ಮನೆಗೆ ಹೋಗುತ್ತಿದ್ದಾರೆ. ಇದರಲ್ಲಿ ವಿಶೇಷ ಏನೂ ಇಲ್ಲ ಎಂದು ಹೇಳಲಾಗುತ್ತಿದೆ.

ಕುತೂಹಲ ಕೆರಳಿಸಲು ಕಾರಣವೇನು?

ಮತಗಳ್ಳತನ ಕುರಿತ ರಾಹುಲ್‌ಗಾಂಧಿ ಆರೋಪಕ್ಕೆ ವಿರುದ್ಧದ ಅರ್ಥದಲ್ಲಿ ಕೆ.ಎನ್‌. ರಾಜಣ್ಣ ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಹೈಕಮಾಂಡ್‌ ನೇರವಾಗಿ ಸಂಪುಟದಿಂದ ಉಚ್ಚಾಟನೆಗೊಳಿಸಲು ಸಿದ್ದರಾಮಯ್ಯ ಅವರಿಗೆ ಸೂಚಿಸಿತ್ತು. ಸಿದ್ದರಾಮಯ್ಯ ಅವರು ವಿವರಣೆ ಪಡೆಯಲು ಮುಂದಾದರೂ ಅವಕಾಶ ನೀಡದೆ ರಾಜಣ್ಣ ಅವರನ್ನು ಸಂಪುಟದಿಂದ ಹೊರ ಹಾಕಲಾಗಿತ್ತು.

ಹೀಗಾಗಿ ಹೈಕಮಾಂಡ್‌ನ ಕ್ರಮ ಎದುರಿಸಿರುವ ರಾಜಣ್ಣ ಅವರ ಮನೆಗೆ ಸಿದ್ದರಾಮಯ್ಯ ತೆರಳುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಮತ್ತೊಂದೆಡೆ ಕೆ.ಎನ್‌. ರಾಜಣ್ಣ ಡಿ.ಕೆ. ಶಿವಕುಮಾರ್ ವಿರೋಧಿ ಬಣದವರು, ನವೆಂಬರ್‌ ಕ್ರಾಂತಿ ಬಗ್ಗೆ ಹೇಳಿಕೆ ನೀಡಿದವರು, ಈಗಲೂ ಮುಂದಿನ ಎರಡೂವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಬೇಕು ಎನ್ನುತ್ತಿರುವವರು. ಈ ಎಲ್ಲಾ ಕಾರಣಗಳಿಗೆ ಸಿದ್ದರಾಮಯ್ಯ ಅವರ ಡಿನ್ನರ್‌ ಭೇಟಿ ಕುತೂಹಲ ಕೆರಳಿಸಿದೆ.

Read more Articles on