ನೀರಿದ್ದರೂ ತೀರದ ಜನರ ದಾಹ

| Published : Apr 04 2024, 01:02 AM IST

ಸಾರಾಂಶ

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 11.45 ಲಕ್ಷ ಜನರಿದ್ದು, ನಿತ್ಯ 22,80,000 (2.28 ಎಂಎಲ್‌ಡಿ) ಲೀಟರ್‌ ನೀರು ಬೇಕಿದೆ. ಅಗತ್ಯಕ್ಕೆ ಅನುಗುಣವಾಗಿ ನೀರಿನ ಸಂಗ್ರಹವಿದೆ ಎಂಬುದು ಪಾಲಿಕೆ ಸ್ಪಷ್ಟನೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ 11.45 ಲಕ್ಷ ಜನರಿದ್ದು, ನಿತ್ಯ 22,80,000 (2.28 ಎಂಎಲ್‌ಡಿ) ಲೀಟರ್‌ ನೀರು ಬೇಕಿದೆ. ಅಗತ್ಯಕ್ಕೆ ಅನುಗುಣವಾಗಿ ನೀರಿನ ಸಂಗ್ರಹವಿದೆ ಎಂಬುದು ಪಾಲಿಕೆ ಸ್ಪಷ್ಟನೆ. ಆದರೂ ಜನತೆ ಮಾತ್ರ ನೀರಿನ ಸಮಸ್ಯೆ ಅನುಭವಿಸುವುದು ಮಾತ್ರ ತಪ್ಪುತ್ತಿಲ್ಲ. ಏಕೆ ಹೀಗೆ ಎಂಬ ಪ್ರಶ್ನೆಗೆ ಪಾಲಿಕೆ ಬಳಿಯೂ ಸರಿಯಾದ ಉತ್ತರವಿಲ್ಲ.

ಹಲವು ತಿಂಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ಬೋರ್‌ವೆಲ್‌ ನೀರಿಲ್ಲದೇ ಸಂಪೂರ್ಣ ಬತ್ತಿವೆ. ಹಾಗಂತ ಬೋರ್‌ವೆಲ್‌ ಮೂಲಕವೇನೂ ಕುಡಿಯುವ ನೀರಿನ ಸರಬರಾಜು ಮಾಡುತ್ತಿಲ್ಲ. ಪಾಲಿಕೆಯೇ ಮಲಪ್ರಭಾ ಜಲಾಶಯ ಹಾಗೂ ನೀರಸಾಗರ ಕೆರೆಯಿಂದ ನೀರು ಪೂರೈಕೆ ಮಾಡುತ್ತದೆ. ಮಳೆಗಾಲ ಆರಂಭವಾಗುವವರೆಗೂ ಅಷ್ಟೇ ಅಲ್ಲದೇ ಮುಂದಿನ ಒಂದು ವರ್ಷ ಸಾಕಾಗುವಷ್ಟು ನೀರಿನ ಸಂಗ್ರಹವಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಕೆಲವು ವಾರ್ಡ್‌ಗಳಲ್ಲಿ ನಿಗದಿತ ವೇಳೆಗೆ ನೀರು ಪೂರೈಕೆಯಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕರದ್ದು. ಅದಕ್ಕಾಗಿ ಪ್ರತಿನಿತ್ಯ ಪ್ರತಿಭಟನೆಗಳು ನಡೆಯುತ್ತಲೇ ಇರುತ್ತವೆ.

11.45 ಲಕ್ಷ ಜನಸಂಖ್ಯೆ:

ಮಹಾನಗರದಲ್ಲಿ ಒಟ್ಟು 11.45 ಲಕ್ಷ ಜನರು (2011ರ ಜನಗಣತಿ ಪ್ರಕಾರ) ವಾಸಿಸುತ್ತಿದ್ದಾರೆ. ಇರುವ 82 ವಾರ್ಡ್‌ಗಳಲ್ಲಿ ಹಳೇ ಹುಬ್ಬಳ್ಳಿಯ 22 ವಾರ್ಡ್‌ಗಳಿಗೆ ಕಲಘಟಗಿ ತಾಲೂಕಿನ ನೀರಸಾಗರ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದ್ದರೆ, ಇನ್ನುಳಿದ 60 ವಾರ್ಡ್‌ಗಳಿಗೆ ಸವದತ್ತಿ ಬಳಿ ನಿರ್ಮಿಸಲಾಗಿರುವ ಮಲಪ್ರಭಾ ಜಲಾಶಯದಿಂದ ನೀರು ಪೂರೈಕೆಯಾಗುತ್ತಿದೆ. ಇದರಲ್ಲಿ 36 ವಾರ್ಡ್‌ಗಳಲ್ಲಿ ನಿರಂತರ ನೀರು ಪೂರೈಕೆ ವ್ಯವಸ್ಥೆ ಜಾರಿಯಲ್ಲಿದೆ.

ಕೆಲವೆಡೆ ನೀರಿನ ಅಭಾವ:ಬೇಸಿಗೆ ಆರಂಭವಾಗುತ್ತಿದ್ದಂತೆ ಹಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿತ್ತು. ನಿಗದಿತ ದಿನದಂದು ನೀರು ಬಾರದೇ ಜನತೆ ಸಮಸ್ಯೆ ಅನುಭವಿಸುವಂತಾಗಿದೆ ಎಂಬುದು ಹಲವು ವಾರ್ಡ್‌ಗಳಲ್ಲಿ ಆರೋಪ ಕೇಳಿ ಬಂದಿವೆ. ಈ ಕುರಿತು ಹಲವೆಡೆ ಪ್ರತಿಭಟನೆ ನಡೆಸಿರುವ ಉದಾಹರಣೆಗಳಿವೆ.

ಇನ್ನು ಹಳೇ ಹುಬ್ಬಳ್ಳಿ ಸೇರಿದಂತೆ ಕೆಲವೆಡೆ ನೀರು ಪೂರೈಕೆಯಲ್ಲಿಯೇ ವ್ಯತ್ಯಯವಾಗುತ್ತಿದ್ದು, ವಾರಕ್ಕೊಮ್ಮೆ ಬರಬೇಕಿದ್ದ ನೀರು 10-12 ದಿನಗಳಿಗೆ ಬರುತ್ತಿದೆ. ಇದರಿಂದಾಗಿ ಕುಡಿಯುವ ನೀರಿಗೆ ಪರದಾಡುವಂತಹ ಪರಿಸ್ಥಿತಿ ಉಲ್ಬಣವಾಗಿದೆ ಎಂಬುದು ಸ್ಥಳೀಯ ನಿವಾಸಿಗಳ ಆಕ್ರೋಶದ ನುಡಿಗಳು.

ಇದಕ್ಕೆ ಎಚ್ಚೆತ್ತುಕೊಂಡ ಪಾಲಿಕೆ ಈಗಾಗಲೇ ಸಮರ್ಪಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತಿದೆ. ಪ್ರತಿವಾರವೂ ಪಾಲಿಕೆ ಆಯುಕ್ತರು ವಿಶೇಷ ಸಭೆ ನಡೆಸಿ ಸಮಸ್ಯೆಯಿರುವ ಪ್ರದೇಶಗಳಿಗೆ ತೆರಳಿ ಸಮಸ್ಯೆ ಆಲಿಸಿ ಪರಿಹರಿಸುವ ಕಾರ್ಯಕ್ಕೆ ಮುಂದಾಗಿರುವುದು ಜನರಲ್ಲಿ ಕೊಂಚ ನೆಮ್ಮದಿ ಮೂಡುವಂತಾಗಿದೆ. ಇನ್ನು ಕೆಲವೆಡೆ ಕಿಡಿಗೇಡಿಗಳು ಪೈಪ್‌ಲೈನ್‌ ಒಡೆಯುತ್ತಿರುವುದು ಗಮನಕ್ಕೆ ಬಂದಿದ್ದು, ಅಂತಹವರ ಮೇಲೆ ನಿಗಾ ಇಡಲು ಸ್ಥಳೀಯ ಜನರಿಗೆ ಹಾಗೂ ಪಾಲಿಕೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.

ಎಷ್ಟಿದೆ ನೀರು?:

ಬೇಸಿಗೆಯ ಹಿನ್ನೆಲೆಯಲ್ಲಿ ಎಲ್ಲ ನೀರಿನ ಮೂಲಗಳು ಬರಿದಾಗಿದ್ದು, ಪಾಲಿಕೆಯಿಂದ ಪೂರೈಕೆಯಾಗುವ ನೀರೆ ಪ್ರಮುಖ ಮೂಲವಾಗಿದೆ. ಒಂದು ವರ್ಷಕ್ಕೆ 2.7 ಟಿಎಂಸಿ ನೀರು ಬೇಕು. ಮಲಪ್ರಭಾ ಜಲಾಶಯದಲ್ಲಿ 6.84 ಟಿಎಂಸಿ ಹಾಗೂ ಕಲಘಟಗಿ ತಾಲೂಕಿನ ನೀರಸಾಗರದಲ್ಲಿ 0.28 ಟಿಎಂಸಿ ನೀರು ಸಂಗ್ರಹವಿದೆ. ಕಳೆದ ಸಾಲಿನ ಏಪ್ರೀಲ್‌ನಲ್ಲಿ ಒಟ್ಟು 8.85 ಟಿಎಂಸಿ ಅಡಿ ನೀರು ಸಂಗ್ರಹವಿತ್ತು. ಈ ಬಾರಿ ಮಳೆಯಾಗದ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದ ನೀರಿನ ಪ್ರಮಾಣ ಇಳಿಕೆಯಾಗಿದೆ. ಆದರೆ, ಒಂದು ವರ್ಷ ಸಾಕಾಗುವಷ್ಟು ನೀರಿನ ಸಂಗ್ರಹವಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾದಲ್ಲಿ ಅಂತಹ ಸ್ಥಳಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ತಿಳಿಸಿದೆ. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಕೆಲವೆಡೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿರುವುದು ಗಮನಕ್ಕೆ ಬಂದಿದೆ. ಅದನ್ನು ಗಮನಿಸಿ ಬಗೆಹರಿಸಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.

ಪಾಲಿಕೆ ಆಯುಕ್ತರು ಕುಡಿಯುವ ನೀರಿನ ಸಮಸ್ಯೆಯೇ ಇಲ್ಲ ಎನ್ನುತ್ತಾರೆ. ನಿತ್ಯವೂ ವಾರ್ಡ್‌ಗಳಿಗೆ ತೆರಳಿ ವೀಕ್ಷಣೆ ಮಾಡಲಿ. ನೀರಿಲ್ಲದೇ ಜನತೆ ತೊಂದರೆ ಅನುಭವಿಸುವುದು ಗೊತ್ತಾಗುತ್ತದೆ ಎಂದು ಹಳೇ ಹುಬ್ಬಳ್ಳಿ ನಿವಾಸಿ ಅಬ್ದುಲ್‌ ರಜಾಕ್‌ ನದಾಫ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.