ಮಳೆ ಇಲ್ಲದಿದ್ದರೂ ಬಂತು ಕೆರೆಗೆ ನೀರು

| Published : Feb 04 2025, 12:32 AM IST

ಸಾರಾಂಶ

ತಾಲೂಕಿನ ಹೊಸಳ್ಳಿ ಕೆರೆಗೆ ಬಿರು ಬೇಸಿಗೆಯಲ್ಲಿಯೂ ನೀರು ಬರುತ್ತಿದ್ದು, ಹೊಸಳ್ಳಿ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ.

- ತಾಲೂಕಿನಲ್ಲಿಯೇ ದೊಡ್ಡದಾದ ಕೆರೆ

- ಈ ಕೆರೆಯ ಹೂಳು ತೆಗೆಯಲು ಕೋಟ್ಯಂತರ ರುಪಾಯಿ ವೆಚ್ಚ

- ಭರಪೂರ ಮಳೆಯಾದರೂ ಬಂದಿರಲಿಲ್ಲ ಕೆರೆಗೆ ನೀರು

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಹೊಸಳ್ಳಿ ಕೆರೆಗೆ ಬಿರು ಬೇಸಿಗೆಯಲ್ಲಿಯೂ ನೀರು ಬರುತ್ತಿದ್ದು, ಹೊಸಳ್ಳಿ ಗ್ರಾಮಸ್ಥರ ಸಂತಸಕ್ಕೆ ಪಾರವೇ ಇಲ್ಲದಂತೆ ಆಗಿದೆ.

ಮಳೆಗಾಲದಲ್ಲಿಯೂ ಭರ್ತಿಯಾಗದ ಈ ಕೆರೆಗೆ ಮಳೆ ಇಲ್ಲದ ಈ ಕಾಲದಲ್ಲಿ ನೀರು ಬರುತ್ತಿದ್ದು, ಕೆರೆಯಂಗಳ ನೀರು ತುಂಬಿಕೊಳ್ಳುತ್ತಿದೆ.

ಪೂಜೆ ಮಾಡಿದ ಗ್ರಾಮಸ್ಥರು:

ಬಹದ್ದೂರುಬಂಡಿ ನವಲಕಲ್ ಏತನೀರಾವರಿ ಯೋಜನೆಯನ್ನು ಪ್ರಾಯೋಗಿಕವಾಗಿ ಚಾಲನೆ ಮಾಡಲಾಗಿದ್ದು, ಯಶಸ್ವಿಯಾಗಿರುವ ಹಿನ್ನೆಲೆ ಹೊಸಳ್ಳಿ ಕೆರೆಗೆ ನೀರು ಹರಿಸಲಾಗುತ್ತಿದೆ.

ನವಕಲ್ ಏತನೀರಾವರಿ ಯೋಜನೆಯ ಮೂಲಕ ಪಂಪ್‌ನಲ್ಲಿ ಲಿಫ್ಟ್‌ ಮಾಡಿದ ನೀರನ್ನು ಕೆರೆ ತುಂಬಿಸಲು ಹರಿಸಲಾಗುತ್ತಿದ್ದು, ಭಾನುವಾರ ರಾತ್ರಿಪೂರ್ತಿ ನೀರು ಹರಿಯುತ್ತಿರುವುದನ್ನು ಕಂಡು ಗ್ರಾಮಸ್ಥರು ತಾವೇ ಸ್ವಯಂ ಪ್ರೇರಿತವಾಗಿ ಗಂಗಾಮಾತೆಯ ಪೂಜೆ ಮಾಡಿದ್ದಾರೆ.

ನಮ್ಮೂರ ಕೆರೆಗೆ ಅಂತೂ ನೀರು ಬಂತು ಎಂದು ಕುಣಿದಾಡಿದ್ದಾರೆ. ಕೆರೆಯ ನೀರು ಭರ್ತಿಯಾದರೆ ನಮ್ಮೂರಿಗೆ ಬರ ಇಲ್ಲ ಎಂದು ಹೇಳುತ್ತಿದ್ದಾರೆ ರೈತರು.

ಕೆರೆಯಲ್ಲಿ ನೀರು ತುಂಬಿದರೆ ಸುತ್ತಮುತ್ತಲು ಬೋರವೆಲ್ ರಿಚಾರ್ಜ್ ಆಗುತ್ತವೆ. ಇದರಿಂದ ನಮಗೆ ಬಹಳ ಅನುಕೂಲವಾಗುತ್ತದೆ ಎಂದು ಖುಷಿಪಡುತ್ತಿದ್ದಾರೆ.

80 ಎಕರೆ ವಿಶಾಲವಾದ ಕೆರೆ:

ಹೊಸಳ್ಳಿ ಕೆರೆ ಬರೋಬ್ಬರಿ 80 ಎಕರೆ ವಿಶಾಲವಾಗಿದ್ದು, ಇದರಿಂದ ಈ ಮೊದಲು ನೂರಾರು ಎಕರೆ ಪ್ರದೇಶ ನೀರಾವರಿಯಾಗುತ್ತಿತ್ತು. ಆದರೆ, ಕಾಲಕ್ರಮೇಣ ಅದರ ಜಲಾನಯನ ಪ್ರದೇಶ ಇಲ್ಲದಂತೆ ಆಗಿರುವುದರಿಂದ ನೀರು ಬರುತ್ತಿಲ್ಲ. ಹೀಗಾಗಿ, ಈ ಕೆರೆ ಬಣಗುಡುತ್ತಿತ್ತು. ಈಗ ತುಂಗಭದ್ರಾ ನದಿಯಿಂದ ಏತನೀರಾವರಿ ಯೋಜನೆಯ ಮೂಲಕ ಭರ್ತಿ ಮಾಡುತ್ತಿರುವುದರಿಂದ ಹೊಸಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಖುಷಿಯಾಗಿದ್ದಾರೆ.

ಹಿರೇಹಳ್ಳದಿಂದ ಭರ್ತಿ:

ಈ ಕೆರೆಯನ್ನು ಈ ಹಿಂದೆ ಹಿರೇಹಳ್ಳ ಜಲಾಶಯದ ಕಾಲುವೆ ಮೂಲಕ ಭರ್ತಿ ಮಾಡಲಾಗಿದ್ದು, ಆಗ ಶಾಸಕರಾಗಿದ್ದ ಕೆ. ಬಸವರಾಜ ಹಿಟ್ನಾಳ ಮುತುವರ್ಜಿ ವಹಿಸಿ, ಕೆರೆ ಭರ್ತಿ ಮಾಡಿಸಿದ್ದರು. ಆದರೆ, ನಂತರ ಹಿರೇಹಳ್ಳ ಜಲಾಶಯದಿಂದ ಕಾಲುವೆಗಳಿಗೆ ನೀರೇ ಬರಲಿಲ್ಲವಾದ್ದರಿಂದ ಕೆರೆಯೂ ಪಾಳು ಬಿದ್ದಂತೆ ಆಯಿತು.

ಕೋಟ್ಯಂತರ ರುಪಾಯಿ ವ್ಯಯ:

ಹೊಸಳ್ಳಿ ಕೆರೆಯ ಹೂಳು ತೆಗೆಯಲು ಕೋಟ್ಯಂತರ ರುಪಾಯಿ ವ್ಯಯ ಮಾಡಲಾಗಿದೆ. ಬಹದ್ದೂರುಬಂಡಿ, ಹಿಟ್ನಾಳ ಹಾಗೂ ಹಿರೇಬಗನಾಳ ಗ್ರಾಮ ಪಂಚಾಯಿತಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಪ್ರತಿ ವರ್ಷವೂ ಕೆರೆಯ ಹೂಳು ತೆಗೆಯುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತದೆ.

ಹೀಗಾಗಿ, 80 ಎಕರೆ ವಿಶಾಲವಾದ ಕೆರೆಯ ಆಳವೂ ಅಷ್ಟೇ ದೊಡ್ಡದಾಗಿದೆ. ಹೀಗಾಗಿ, ಈ ಕೆರೆ ಭರ್ತಿಯಾದರೆ ನಾಲ್ಕು ವರ್ಷ ಸುತ್ತಮುತ್ತಲ ಪ್ರದೇಶದಲ್ಲಿ ನೀರಿನ ಸಮಸ್ಯೆಯಾಗುವುದಿಲ್ಲ ಎಂದೇ ಹೇಳಲಾಗುತ್ತದೆ.ಬಹದ್ದೂರುಬಂಡಿ ನವಲಕಲ್ ಏತನೀರಾವರಿ ಯೋಜನೆಯಲ್ಲಿ ಹೊಸಳ್ಳಿ ಕೆರೆಯನ್ನು ತುಂಬಿಸುವ ಕಾರ್ಯ ಪ್ರಾರಂಭಿಸಿದ್ದು, ಗ್ರಾಮಸ್ಥರು ಗಂಗಾಪೂಜೆ ಮಾಡಿದ್ದಾರೆ ಎಂದು ತಿಳಿದು ಅತೀವ ಸಂತಸವಾಯಿತು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.