ಐಆರ್‌ಬಿಯಿಂದ ಸಾವಿರಾರು ಜನ ಬಲಿಯಾದರೂ ತುಟಿ ಬಿಚ್ಚದ ಬಿಜೆಪಿಗರು: ಸಚಿವ ಮಂಕಾಳ ವೈದ್ಯ

| Published : Aug 13 2024, 12:47 AM IST

ಐಆರ್‌ಬಿಯಿಂದ ಸಾವಿರಾರು ಜನ ಬಲಿಯಾದರೂ ತುಟಿ ಬಿಚ್ಚದ ಬಿಜೆಪಿಗರು: ಸಚಿವ ಮಂಕಾಳ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಐಆರ್‌ಬಿ ಮಾಲೀಕ ಬಿಜೆಪಿಯವರೇ. ಆದರೂ ಅದನ್ನು ಬದಿಗಿಟ್ಟು ಜನರ ಸಲುವಾಗಿ ಪಕ್ಷಾತೀತವಾಗಿ ಹೋರಾಡಬೇಕಿದೆ. ಇಲ್ಲವಾದಲ್ಲಿ ಜನ ಕ್ಷಮಿಸುವುದಿಲ್ಲ ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ಹೊನ್ನಾವರ: ಬಿಜೆಪಿಗರು ಒಬ್ಬ ಸತ್ತರೂ ರಸ್ತೆ ಮೇಲೆ ಹೋಗಿ ಮಲಗುತ್ತಾರೆ. ಆದರೆ ಐಆರ್‌ಬಿಯಿಂದ ಸಾವಿರಾರು ಜನ ಮೃತಪಟ್ಟರೂ ತುಟಿ ಬಿಚ್ಚುತ್ತಿಲ್ಲ. ಬಿಜೆಪಿಗರು ಇದ್ದಾರೋ ಇಲ್ಲವೋ ಎನ್ನುವುದು ತಿಳಿಯುತ್ತಿಲ್ಲ ಎಂದು ಸಚಿವ ಮಂಕಾಳ ವೈದ್ಯ ಬಿಜೆಪಿ ವಿರುದ್ಧ ಕಿಡಿಕಾರಿದರು.ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಐಆರ್‌ಬಿ ಮಾಲೀಕ ಬಿಜೆಪಿಯವರೇ. ಆದರೂ ಅದನ್ನು ಬದಿಗಿಟ್ಟು ಜನರ ಸಲುವಾಗಿ ಪಕ್ಷಾತೀತವಾಗಿ ಹೋರಾಡಬೇಕಿದೆ. ಇಲ್ಲವಾದಲ್ಲಿ ಜನ ಕ್ಷಮಿಸುವುದಿಲ್ಲ ಎಂದರು.

ಮಳೆಗಾಲದಲ್ಲಿ ಪ್ರಕೃತಿ ವಿಕೋಪದಿಂದ ಸುಮಾರು ₹900 ಕೋಟಿ ಹಾನಿ ಅಂದಾಜಿಸಲಾಗಿದೆ. ಸರ್ಕಾರದ ಗಮನಕ್ಕೆ ತರಲಾಗಿದೆ. ಖುದ್ದು ಸಿಎಂ ಸಿದ್ದರಾಮಯ್ಯನವರು, ಕಂದಾಯ ಸಚಿವರು ಜಿಲ್ಲೆಗೆ ಬಂದಿದ್ದಾರೆ. ಮನೆಗಳಿಗೆ ಹಾನಿಯಾದವರಿಗೆ ಹಾನಿ ಅಂದಾಜಿಸಿ ಪರಿಹಾರ ನೀಡಲಾಗಿದೆ. ಮನೆ ಸಂಪೂರ್ಣ ಹಾನಿಯಾದವರಿಗೆ ಮನೆ ನೀಡುತ್ತೇವೆ. ಹಣಕ್ಕೆಯಾವುದೇ ಕೊರತೆ ಇಲ್ಲ. ಸಮಸ್ಯೆಗಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹೊನ್ನಾವರದ ಶರಾವತಿ ಸೇತುವೆ ಗುಣಮಟ್ಟದ ಬಗ್ಗೆ ಪರೀಕ್ಷಿಸಲಾಗುತ್ತದೆಯೇ ಎಂದು ಪ್ರಶ್ನಿಸಿದಾಗ, ಉತ್ತರಿಸಿದ ಸಚಿವರು, ಒಂದೇ ಸೇತುವೆ ಮೇಲೆ ಸಂಚರಿಸುವುದು ಸರಿಯಲ್ಲ. ಇನ್ನೊಂದು ಸೇತುವೆ ನಿರ್ಮಾಣದ ಬಗ್ಗೆ ಈಗಾಗಲೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದ ಕಂಪನಿ ಐಆರ್‌ಬಿಯವರು ಇದು ಕೇಂದ್ರ ಸರ್ಕಾರಕ್ಕೆ ಸಂಬಂದಿಸಿದ್ದು ಎನ್ನುತ್ತಾರೆ. ಕೇಂದ್ರ ಸರ್ಕಾರ ಐಆರ್‌ಬಿ ಮೇಲೆ ಗೂಬೆ ಕೂರಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಡಾ. ನಯನಾ, ಸಚಿವರ ಪುತ್ರಿ ಬೀನಾ ವೈದ್ಯ ಉಪಸ್ಥಿತರಿದ್ದರು.

ಬೆಂಗಳೂರಿಗೆ ಶರಾವತಿ ನೀರು: ಸಾಧಕ ಬಾಧಕ ಚರ್ಚಿಸಿ ನಿರ್ಧಾರ

ಶರಾವತಿ ನದಿ ನೀರು ಬೆಂಗಳೂರಿಗೆ ಒಯ್ಯುವ ಬಗ್ಗೆ ಸರ್ಕಾರ ಯೋಜನೆ ರೂಪಿಸುತ್ತಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ ಸಚಿವರು, ಈ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಪ್ರತಿದಿನ ವಿದ್ಯುತ್ ಉತ್ಪಾದನೆಯಾಗಿ ಜಲಾಶಯದಿಂದ ಎಷ್ಟು ನೀರು ಸಮುದ್ರಕ್ಕೆ ಸೇರುತ್ತದೆ, ಬೆಂಗಳೂರಿಗೆ ಎಷ್ಟು ಪ್ರಮಾಣದ ನೀರಿನ ಅವಶ್ಯಕತೆ ಇದೆ ಎನ್ನುವ ಮಾಹಿತಿಯನ್ನು ಸಹ ಪಡೆಯುತ್ತೇನೆ. ಸದ್ಯಕ್ಕೆ ಯೋಜನೆಯು ಸರ್ಕಾರದ ಮುಂದಿಲ್ಲ. ಯೋಜನೆಯ ಸಾಧಕ- ಬಾಧಕದ ಬಗ್ಗೆ ಸಮಗ್ರವಾಗಿ ಮಾಹಿತಿ ಪಡೆದೇ ನಿರ್ಧರಿಸಲಾಗುತ್ತದೆ. ನಮ್ಮ ಕ್ಷೇತ್ರದ ಜನತೆಗೆ ಯಾವುದೇ ಕಾರಣಕ್ಕೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದರು. ಜನರ ಕಷ್ಟಕ್ಕೆ ಸ್ಪಂದಿಸಲು ಇನ್ನುಮುಂದೆ ಪ್ರತಿ ಪಂಚಾಯಿತಿಗೆ ತೆರಳಿ ಅವರ ಕೆಲಸ ಮಾಡುತ್ತೇನೆ ಎಂದರು.