ರಕ್ತದ ಅವಶ್ಯಕತೆ ನಿರಂತರವಾಗಿದ್ದು, ಪ್ರತಿ ರಕ್ತದಾನವು ಮೂರು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ.
ಭಟ್ಕಳದಲ್ಲಿ ರಕ್ತದಾನ ಶಿಬಿರ ಉದ್ಘಾಟಿಸಿದ ಜಯಕರ ಶೆಟ್ಟಿ
ಕನ್ನಡಪ್ರಭ ವಾರ್ತೆ ಭಟ್ಕಳರಕ್ತದ ಅವಶ್ಯಕತೆ ನಿರಂತರವಾಗಿದ್ದು, ಪ್ರತಿ ರಕ್ತದಾನವು ಮೂರು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಅಧ್ಯಕ್ಷ ಎಸ್. ಜಯಕರ್ ಶೆಟ್ಟಿ ಹೇಳಿದರು.
ಪಟ್ಟಣದ ಶ್ರೀ ಗುರು ಸುಧೀಂದ್ರ ಪದವಿ ಮಹಾವಿದ್ಯಾಲಯದ ಘಟಕಗಳಾದ ಭಟ್ಕಳ ರೋಟರಾಕ್ಟ್ ಕ್ಲಬ್, ಯೂಥ್ ರೆಡ್ ಕ್ರಾಸ್, ಎನ್.ಎಸ್.ಎಸ್., ಉನ್ನತ ಭಾರತ ಅಭಿಯಾನ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಸಹಭಾಗಿತ್ವದಲ್ಲಿ ಆಯೋಜಿಸಲ್ಪಟ್ಟ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಸಮಾಜಕ್ಕೆ ನೀಡುವ ಉತ್ತಮ ಕೊಡುಗೆಯಾಗಿದೆ. ದಾನ ಮಾಡಿದ ಪ್ರತಿಯೊಂದು ಹನಿ ರಕ್ತದಿಂದ ಶಸ್ತ್ರಚಿಕಿತ್ಸೆಗೆ ಒಳಗಾದವರನ್ನು, ದೀರ್ಘಕಾಲದ ಕಾಯಿಲೆಯಿಂದ ಬಳಲುತ್ತಿರುವವರನ್ನು ಮತ್ತು ತುರ್ತು ಚಿಕಿತ್ಸೆಗೆ ಒಳಗಾದವರನ್ನು ಬದುಕಿಸಬಹುದಾಗಿದೆ ಎಂದರು.ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕಾರ್ಯಾಚರಣಾ ವ್ಯವಸ್ಥಾಪಕಿ ವಾಣಿ ಭಟ್ ಮಾತನಾಡಿ, ಭಾರತದಲ್ಲಿ ಪ್ರತಿದಿನ ಸರಾಸರಿ ೩೮೦೦೦ ಯೂನಿಟ್ ರಕ್ತದ ಅವಶ್ಯಕತೆ ಇದ್ದು, ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅಡಿಯಲ್ಲಿ ೨೦೦೭ರಿಂದ ಪರಿವರ್ತನ್ ಎಂಬ ಅಭಿಯಾನ ಹಮ್ಮಿಕೊಂಡಿದೆ. ಈ ಮೂಲಕ ರಕ್ತದ ಅವಶ್ಯಕತೆ ಪೂರೈಸುವ ಕೆಲಸ ಮಾಡುತ್ತಿದೆ ಎಂದರು.
ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ ವಿ. ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸತತ ೩೫ ಬಾರಿ ರಕ್ತದಾನಗೈದ ಸಮಾಜ ಸೇವಕ, ರೋಟರಿ ಪ್ರಮುಖ ನಜೀರ್ ಖಾಸಿಂಜೀ ಅವರನ್ನು ಗೌರವಿಸಲಾಯಿತು.ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಘಟಕ ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ್, ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ್ ನಾಯಕ್, ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ ಪೈ, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ರೋಟರಾಕ್ಟ್ ಅಧ್ಯಕ್ಷೆ ನೇಹಾ ಭಂಡಾರಿ ಸ್ವಾಗತಿಸಿದರು, ಸದಸ್ಯರಾದ ವಿನುತಾ ಕಾರ್ಯಕ್ರಮ ನಿರೂಪಿಸಿದರು, ದೀಕ್ಷಾ ನಾಯ್ಕ್ ವಂದಿಸಿದರು. ಶಿಬಿರದಲ್ಲಿ ಒಟ್ಟೂ ೪೭ ಯೂನಿಟ್ ರಕ್ತ ಸಂಗ್ರಹಿಸಲಾಯಿತು.