ಪ್ರತಿಯೊಬ್ಬ ಪ್ರಜೆಗೂ ಕಾನೂನು ಅರಿವು ಅಗತ್ಯ

| Published : Nov 13 2024, 12:03 AM IST

ಸಾರಾಂಶ

ಸಮಾಜದ ದುರ್ಬಲ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಮಹಿಳೆಯರಿಗೆ ಹಾಗೂ ವಿಕಲಚೇತನರಿಗೆ ಉಚಿತ ಕಾನೂನು ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಉದ್ದೇಶ. ಕಡಿಮೆ ಸಮಯದಲ್ಲಿ ನ್ಯಾಯ ಪರಿಹಾರಕ್ಕಾಗಿ ಜನತಾ ನ್ಯಾಯಾಲಯದ ಪ್ರಯೋಜನ ಪಡೆದುಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಕೋಲಾರಈ ದೇಶದಲ್ಲಿ ಜನಿಸಿದ ಪ್ರತಿಯೊಬ್ಬರಿಗೂ ಇಲ್ಲಿನ ಕಾನೂನುಗಳ ಕುರಿತು ಅರಿವು ಇರಬೇಕು. ಕಷ್ಟದಲ್ಲಿರುವವರಿಗೆ ಕಾನೂನು ಸೇವಾ ಪ್ರಾಧಿಕಾರ ಉಚಿತ ಕಾನೂನು ನೆರವು ನೀಡಲು ಸಿದ್ಧವಿದೆ ಎಂದು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಸುನಿಲ ಎಸ್.ಹೊಸಮನಿ ತಿಳಿಸಿದರು.ತಾಲೂಕಿನ ಕ್ಯಾಲನೂರಿನಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನದ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಹಾಗೂ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.ಜನತಾ ನ್ಯಾಯಾಲಯ ಬಳಸಿಕೊಳ್ಳಿ

ಸಮಾಜದ ದುರ್ಬಲ ವರ್ಗದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ಮಹಿಳೆಯರಿಗೆ ಹಾಗೂ ವಿಕಲಚೇತನರಿಗೆ ಉಚಿತ ಕಾನೂನು ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಮುಖ್ಯ ಉದ್ದೇಶ. ಪ್ರತಿದಿನ ತಮ್ಮ ಕೆಲಸಗಳನ್ನು ಬಿಟ್ಟು ಒಂದಲ್ಲ ಒಂದು ಅನೇಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ನ್ಯಾಯಾಲಯಕ್ಕೆ ಬರುತ್ತಿರಿ. ನ್ಯಾಯಾಲಯದಲ್ಲಿ ಕಡಿಮೆ ಸಮಯದಲ್ಲಿ ಅತಿ ಶೀಘ್ರದ ಪರಿಹಾರಕ್ಕಾಗಿ ಹಾಗೂ ರಾಜಿ ಸಂಧಾನಕ್ಕಾಗಿ ನಡೆಸುವ ರಾಷ್ಟ್ರೀಯ ಜನತಾ ನ್ಯಾಯಾಲಯದ ಪ್ರಯೋಜನ ಪಡೆದುಕೊಳ್ಳಿ ಎಂದರು.

ಹೆಚ್ಚು ಜನರಿಗೆ ಕಾನೂನು ಸೇವೆಗಳ ಪ್ರಾಧಿಕಾರಗಳ ಕಾಯ್ದೆ ಮತ್ತು ಈ ಕಾಯ್ದೆಯ ಅಡಿಯಲ್ಲಿ ಲಭಿಸುವ ಉಚಿತ ಕಾನೂನು ಸೇವೆಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.ನ್ಯಾಯ ದೊರಕಿಸುವ ಉದ್ದೇಶ

ಎಲ್ಲರಿಗೂ ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಉಚಿತ ಕಾನೂನು ನೆರವು ಮತ್ತು ಸಲಹೆಗಳನ್ನು ನೀಡುವುದು ಈ ಜಾಗೃತಿ ಜಾಥಾದ ಉದ್ದೇಶವಾಗಿದೆ. ನಮ್ಮ ಸಂವಿಧಾನವು ಒಂದು ಕಲ್ಯಾಣ ರಾಜ್ಯ ಕಲ್ಪನೆ ಹೊಂದಿದೆ ಸರ್ಕಾರದ ಯೋಜನೆಗಳನ್ನು ಸಂವಿಧಾನದ ಅಡಿಯಲ್ಲಿ ಜನರಿಗೆ ತಲುಪಬೇಕು ಸಮಾಜದಲ್ಲಿ ವಿವಿಧ ವರ್ಗಗಳಿಗೆ ಜಾಗೃತಿ ಮೂಡಿಸಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಬಾಲಕಾರ್ಮಿಕ ಪದ್ದತಿ ನಿಷೇಧ ಕಾಯಿದೆ, ಬಾಲ್ಯ ವಿವಾಹ ನಿಷೇಧ ಕಾಯಿದೆ ಮತ್ತಿತರ ಕಾನೂನುಗಳ ಕುರಿತು ಅರಿವು ಮೂಡಿಸಿದ ಅವರು, ಸಂವಿಧಾನ ಮಕ್ಕಳಿಗೆ ಶಿಕ್ಷಣದ ಹಕ್ಕು ನೀಡಿದೆ, ಈ ಹಕ್ಕಿಗೆ ಚ್ಯುತಿ ತಂದು ಅವರನ್ನು ಕೆಲಸಕ್ಕೆ ದೂಡುವುದು, ಮದುವೆ ಮಾಡುವುದು ಅಪರಾಧ ಎಂದು ಎಚ್ಚರಿಸಿದರು.ಕ್ರೈಸ್ಟ್ ಅಕಾಡೆಮಿ ಉಪನ್ಯಾಸಕ ಸುಬ್ರಮಣ್ಯ, ಗ್ರಾ.ಪಂ ಅಧ್ಯಕ್ಷ ಎನ್.ರಮೇಶ್, ಜ್ಞಾನದೀಪಿಕಾ ವಿದ್ಯಾಸಂಸ್ಥೆ ಅಧ್ಯ್ಕಷ ವಂಶಿಕ್‌ಮೌಳಿ, ಪ್ರಾಂಶುಪಾಲೆ ಶರ್ಮಿಳಾ, ಸಂಸ್ಥೆಯ ರಾಧಿಕಾ ಇದ್ದರು.