ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕನ್ನಡದ ಕೆಲಸದಲ್ಲಿ ಪ್ರತಿಯೊಬ್ಬ ಕನ್ನಡಿಗರೂ ಪಾಲ್ಗೊಳ್ಳಬೇಕು ಎಂದು ತಹಸೀಲ್ದಾರ್ ಡಾ.ನೂರಲ್ ಹುದಾ ನೀಡಿದರು.

ಬುಧವಾರ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ತಾಲೂಕಿಗೆ ಆಗಮಿಸಿದ ಸಾಹಿತ್ಯ ರಥವನ್ನುಸ್ವಾಗತಿಸಿ ಮಾಲಾರ್ಪಣೆ ಮಾಡಿ ಮಾತನಾಡಿದರು. ಜಿಲ್ಲಾ ಸಮ್ಮೇಳನಕ್ಕೆ ಎನ್‌.ಆರ್.ಪುರ ತಾಲೂಕಿನ ಸಾಹಿತಿ ಜಯಮ್ಮ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ ಎಂದರು.

ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಕಡೂರಿನಲ್ಲಿ ಎಪ್ರಿಲ್ 10,11 ಹಾಗೂ 12 ರಂದು ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸಾಹಿತ್ಯ ರಥ ವಿವಿಧ ತಾಲೂಕಿನಲ್ಲಿ ಸಂಚರಿಸಿ ಇಂದು ನರಸಿಂಹರಾಜ ಪುರಕ್ಕೆ ಬಂದಿದೆ. ಜಿಲ್ಲಾದ್ಯಂತ ಕಸಾಪ ಮಹಿಳಾ ಘಟಕದವರು ಈ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಎಲ್ಲಾ ಮಹಿಳೆಯರು ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಮಾತನಾಡಿ, ತಾಲೂಕಿನಲ್ಲಿ ಕಸಾಪ ಮಹಿಳಾ ಘಟಕದವರು ಕನ್ನಡದ ಕೆಲಸ ದಲ್ಲಿ ತನ್ನೇ ಆದ ಛಾಪು ಮೂಡಿಸುತ್ತಿದ್ದಾರೆ. ನಮ್ಮೂರಿನ ಸಾಹಿತಿ ಎಂ.ಜಯಮ್ಮ ಸಮ್ಮೇಳನಾಧ್ಯಕ್ಷೆಯಾಗಿರುವುದು ಮಹಿಳೆ ಯರಿಗೆ ಸಿಕ್ಕ ಗೌರವ ಎಂದರು.


ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ನಡೆಯುವುದರಿಂದ ಲೇಖಕರು, ಕವಿಗಳು, ಚಿಂತಕರು ತಮ್ಮ ಚಿಂತನೆಗಳನ್ನು ಸಮ್ಮೇಳನದಲ್ಲಿ ಹಂಚಿಕೊಳ್ಳುವುದರಿಂದ ಹೊಸ ಬರಹಗಾಗರಿಗೆ ಪ್ರೇರಣೆಯಾಗಲಿದೆ.ಕನ್ನಡ ಭಾಷೆ ಮಹತ್ವ ಮತ್ತಷ್ಟು ಹೆಚ್ಚಾಗಲಿದೆ ಎಂದರು.

ಪಪಂ ಮಾಜಿ ಅಧ್ಯಕ್ಷೆ ಜುಬೇದ ಮಾತನಾಡಿದರು. ಈ ಸಂದರ್ಭದಲ್ಲಿ ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಸದಸ್ಯರಾದ ಶ್ಯಾಮಲ ಸತೀಶ್, ಚೈತ್ರಾ ರಮೇಶ್,ಶೀಲಾ ಸುಂದರೇಶ್, ತಾ.ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷೆ ಜಯಂತಿ, ಕಸಾಪ ಮಹಿಳಾ ಘಟಕದ ಕಾರ್ಯದರ್ಶಿ ಶಶಿಕಲಾ, ಸದಸ್ಯೆಸವಿತಾ, ತರೀಕೆರೆ ಮಹಿಳಾ ಘಟಕದ ಅಧ್ಯಕ್ಷೆ ಸುನೀತ, ಕಡೂರು ಮಹಿಳಾ ಘಟಕದ ಅಧ್ಯಕ್ಷೆ ಲತಾ ರಾಜಶೇಖರ್, ಪದ್ಮ ಸೂರಿ ಶ್ರೀನಿವಾಸ್, ಕಸಾಪ ಜಿಲ್ಲಾ ಸಂಚಾಲಕ ಎಸ್‌.ಎಸ್.ಸಂತೋಷ್ ಕುಮಾರ್, ಪ್ರಧಾನ ಸಂಚಾಲಕ ಇರ್ಮಾನ್ ಅಹಮ್ಮದ್ ಬೇಗ್ ಮತ್ತಿತರರು ಇದ್ದರು.

ಇದೇ ಸಂದರ್ಭದಲ್ಲಿ ಸಾಹಿತ್ಯ ರಥದ ದ್ವಜ ಹಸ್ತಾಂತರಿಸಲಾಯಿತು. ಸಮ್ಮೇಳನಾಧ್ಯಕ್ಷೆ ಜಯಮ್ಮ ಅವರಿಗೆ ಆಹ್ವಾನ ಪತ್ರಿಕೆ ನೀಡಲಾಯಿತು. ಜಯಂತಿ ಮತ್ತು ತಂಡದವರು ಕನ್ನಡ ಗೀತೆ ಹಾಡಿದರು. ಭುವನೇಶ್ವರಿ ದೇವಿಗೆ ಆರತಿ ಎತ್ತಿ ಪುಷ್ಪಾರ್ಚನೆ ಮಾಡಲಾಯಿತು.