ಸಾರಾಂಶ
ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಭಾರತೀಯ ಸೇನೆಯ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಚಂಡಿರ ಬಸಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯೂ ಭಾರತೀಯ ಸೇನೆಯ ಬಗ್ಗೆ ಅಭಿಮಾನ ಹೊಂದಿರಬೇಕು ಎಂದು ಮೈಸೂರಿನ ಕೊಡಗು ಗೌಡ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ ಹೇಳಿದರು.ಮೈಸೂರಿನ ಕೊಡಗು ಗೌಡ ಮಾಜಿ ಸೈನಿಕರ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ಆಯೋಜಿಸಿದ ಹೊಸ ವರ್ಷಾಚರಣೆ ಹಾಗೂ ಸಂತೋಷ ಕೂಟ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಅಗ್ನಿವೀರ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡು ಪ್ರತಿಯೊಬ್ಬರೂ ಸೈನಿಕರಾಗಿ ದೇಶ ಸೇವೆಯಲ್ಲಿ ತೊಡಗುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ದೇಶಭಕ್ತಿ ಮೂಡಿಸುವ ಹಾಗೂ ಸೈನಿಕರ ತ್ಯಾಗ ಬಲಿದಾನ ಗಳಿಗೆ ಸಂಬಂಧಿಸಿದ ಮನಮಿಡಿಯುವ ಹಾಡು ಮತ್ತು ನೃತ್ಯಗಳನ್ನು ಪ್ರಸ್ತುತ ಪಡಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅತಿ ಹಿರಿಯರನ್ನು ಹಾಗೂ ಇತ್ತೀಚೆಗೆ ನಿವೃತ್ತಿ ಹೊಂದಿದ ಯೋಧರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಹತ್ತನೇ ತರಗತಿ ಹಾಗೂ ಪಿಯುಸಿ ಯಲ್ಲಿ ಹೆಚ್ಚು ಅಂಕ ಪಡೆದ ಯೋಧರ ಮಕ್ಕಳಿಗೆ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ಸಂಘದ ಸ್ಥಾಪಕ ಅಧ್ಯಕ್ಷ ತಡಿಯಪ್ಪನ ಕುಮಾರಜಯ, ಮೈಸೂರು ಗೌಡ ಸಮಾಜದ ಅಧ್ಯಕ್ಷ ಕೊಂಬಾರ ನ ಬಸಪ್ಪ, ಮಾಜಿ ಅಧ್ಯಕ್ಷರಾದ ತೊಟ್ಯಾಂಬೈಲು ಮನೋಹರ್, ಕುದುಪಜೆ ಕುಶಾಲಪ್ಪ, ಕುಯ್ಯುಮುಡಿ ರಾಮಪ್ಪ, ಪೊನ್ನಚನ ಅಪ್ಪಯ್ಯ, ನಡುವಟ್ಟಿರ ಗೀತ ಲಕ್ಷ್ಮಣ ಮೊದಲಾದವರು ಉಪಸ್ಥಿತರಿದ್ದರು.ಸಂಘದ ಕಾರ್ಯದರ್ಶಿ ಕರ್ಣಯ್ಯನ ಮನೋಹರ್ ಸ್ವಾಗತಿಸಿದರೆ, ಉಪನ್ಯಾಸಕ ಪಟ್ಟ ಡ ಶಿವಕುಮಾರ್ ಮತ್ತು ಚಪ್ಪೆರಾ ಯಮುನಾ ಕಾರ್ಯಕ್ರಮ ನಿರೂಪಿಸಿ ಶಂಕರನ ದೇವಯ್ಯ ವಂದಿಸಿದರು.