ಮೈಸೂರನಲ್ಲೂ ಓದುಗ ಬಳಗ ಸೃಷ್ಟಿ

| Published : Jul 02 2024, 01:41 AM IST

ಸಾರಾಂಶ

ಮೈಸೂರು ಆಕಾಶವಾಣಿ ಎದುರಿನ ಚೆಲುವಾಂಬ ಉದ್ಯಾನವನದಲ್ಲಿ ತಿಂಗಳಿಗೆ ಒಮ್ಮೆ ಸೇರಿ ತಾವು ಇಷ್ಟಪಟ್ಟು ತಂದಂತಹ ಪುಸ್ತಕಗಳನ್ನು ಓದುತ್ತಾರೆ.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರಿನಲ್ಲಿ ಸದ್ದಿಲ್ಲದೆ ಓದು ಬಳಗವೊಂದು ಸೃಷ್ಟಿಯಾಗಿದೆ.ಬೆಂಗಳೂರಿನಲ್ಲಿ ಆರಂಭವಾದ ‘ಅಪರಿಚಿತ ಓದುಗರು’ ಅನ್ನುವ ಅಭಿಯಾನವು ಮೈಸೂರಿನಲ್ಲೂ ಯುವ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಗರದ ವಿದ್ಯಾರ್ಥಿಗಳ ತಂಡವೊಂದು ಸಾಮಾಜಿಕ ಜಾಲತಾಣವಾದಂತಹ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಹಾಗೂ ವಾಟ್ಸಾಪ್ ಗಳಲ್ಲಿ ಮೈಸೂರು ಸಾಹಿತ್ಯ ಓದುಗರ ತಂಡವನ್ನು ತೆರೆದಿದ್ದಾರೆ. ಇದರಲ್ಲಿ ಯುವ ಓದುಗರ ಜೊತೆಗೆ ಹಿರಿಯರನ್ನೂ ಸೇರಿಸಿಕೊಂಡು ಮೈಸೂರಿನಲ್ಲಿ ಓದುಗ ಬಳಗ ಸೃಷ್ಟಿಸಲಾಗಿದೆ.ಮೈಸೂರು ಆಕಾಶವಾಣಿ ಎದುರಿನ ಚೆಲುವಾಂಬ ಉದ್ಯಾನವನದಲ್ಲಿ ತಿಂಗಳಿಗೆ ಒಮ್ಮೆ ಸೇರಿ ತಾವು ಇಷ್ಟಪಟ್ಟು ತಂದಂತಹ ಪುಸ್ತಕಗಳನ್ನು ಓದುತ್ತಾರೆ. ಅಷ್ಟೇ ಅಲ್ಲದೇ, ಕೃತಿಗಳ ಬಗ್ಗೆ ಚರ್ಚೆ ಮಾಡುವುದು ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ರಸಪ್ರಶ್ನೆ ಏರ್ಪಡಿಸುವುದು, ಈ ರೀತಿ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಪುಸ್ತಕಗಳನ್ನು ಬಹುಮಾನವಾಗಿ ನೀಡುತ್ತಾರೆ.ಪ್ರತಿ ಭಾನುವಾರ ಏನಿಲ್ಲವೆಂದರೂ 40 ರಿಂದ 50 ಜನ ಓದುಗರು ಒಂದೆಡೆ ಸೇರುತ್ತಾರೆ.ಈ ತಿಂಗಳ ಆಹ್ವಾನಿತ ಲೇಖಕರು ಅನೇಕ ಪ್ರಶಸ್ತಿಗಳಿಗೆ ಭಾಜನವಾದ ಜನಪ್ರಿಯ ಪ್ರವಾಸ ಕಥನ ‘ಜಗವ ಸುತ್ತುವ ಮಾಯೆ’ ಯ ಲೇಖಕರಾದ ಸುಚಿತ್ರಾ ಹೆಗಡೆ ಮತ್ತು ಯುವ ಬರಹಗಾರ ಮಣಿಕಂಠ ತ್ರಿಶಂಕರ್ ಭಾಗವಹಿಸಿದ್ದರು.

ತಮ್ಮ ಕೃತಿಯ ಹಿಂದಿನ ಕಥೆಯನ್ನು ಹೇಳುತ್ತಾ ಪುಸ್ತಕದ ಕುರಿತು ಸಂವಾದದಲ್ಲಿ ಭಾಗಿಯಾದ ಲೇಖಕಿ ಸುಚಿತ್ರಾ ಹೆಗಡೆ, ಯುವಜನತೆಯ ಸೃಜನಶೀಲತೆಗೆ ಮತ್ತು ಓದಿನ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಂಥದ್ದೊಂದು ಸ್ಫೂರ್ತಿಯುತ ಸಾಹಿತ್ಯ ಚಟುವಟಿಕೆಯನ್ನು ಆರಂಭಿಸಿದ ಬೆಂಗಳೂರಿನ ಅವ್ವ ಪುಸ್ತಕಾಲಯದ ಅನಂತ ಕುಣಿಗಲ್, ಮೈಸೂರಿನ ಯುವ ಮುಂದಾಳು ಕಿರಣ ಪಿ. ಕೌಶಿಕ್ ಮತ್ತು ಸಾಂಸ್ಕೃತಿಕ ನಗರಿಯ ಸಾಹಿತ್ಯ ಪ್ರೇಮಿಗಳನ್ನು ಶ್ಲಾಘಿಸಿದರು.