ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಬರಗಾಲ

| Published : Apr 21 2024, 02:19 AM IST

ಸಾರಾಂಶ

ಅನ್ನದಾತ ಹಾಗೂ ಬಡವರ ಕಲ್ಯಾಣ ಕಾರ್ಯಕ್ರಮ ರೂಪಿಸುವುದಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇನೆ. ಮೂರನೇ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಅನ್ನದಾತ ಹಾಗೂ ಬಡವರ ಕಲ್ಯಾಣ ಕಾರ್ಯಕ್ರಮ ರೂಪಿಸುವುದಕ್ಕಾಗಿ ಮೈತ್ರಿ ಮಾಡಿಕೊಂಡಿದ್ದೇನೆ. ಮೂರನೇ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಎನ್‌ಡಿಎ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಹೆಚ್ಚು ಮತಗಳಿಂದ ಗೆಲ್ಲಿಸಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಬೃಹತ್‌ ಸಭೆಯಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

2004 ಹಾಗೂ 2013ರಲ್ಲಿ ಎರಡು ಬಾರಿ ಇಲ್ಲಿನ ತಿಮ್ಮರಾಯಪ್ಪರನ್ನು ಶಾಸಕರನ್ನಾಗಿ ಆಯ್ಕೆ ಮಾಡಿದ್ದು ಸಂತಸ ತಂದಿದೆ. 2006ರಲ್ಲಿ ಸಿಎಂ ಆಗುವ ಅವಕಾಶ ದೊರೆತಿತ್ತು. ಆ ವೇಳೆ ಜನಪರವಾದ ಯೋಜನೆ ಜಾರಿಗೆ ತಂದಿದ್ದೇನೆ. 2013ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ಈ ಸರ್ಕಾರ ಬಂದಗಲೆಲ್ಲಾ ಮಳೆ ಕಡಿಮೆಯಾಗಿ ರಾಜ್ಯದಲ್ಲಿ ಬರಗಾಲ ಬರುವುದು ಸಾಮಾನ್ಯವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಅದಷ್ಟು ಬೇಗ ಮಳೆ ಬರಲಿ ಎಂದರು.

2018ಕ್ಕೆ ಸಮಿಶ್ರ ಸರ್ಕಾರ ಬಂತು, ಆಗ ಪ್ರಾಮಾಣಿಕವಾಗಿ ಕೆಲಸ ಮಾಡಲು ಬಿಡಲೇ ಇಲ್ಲ. ಅವಮಾನ ಹಾಗೂ ಕಿರಿಕಿರಿ ಮಾಡಿದ್ದು ನಿಮಗೆಲ್ಲಾ ಗೊತ್ತಿ. ಖರ್ಗೆ ಅವರನ್ನು ಸಿಎಂ ಮಾಡಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರೂ ಕಾಂಗ್ರೆಸ್‌ ಒಪ್ಪಲಿಲ್ಲ. ನನ್ನನೇ ಸಿಎಂ ಮಾಡಿದ್ರು, ನನಗೆ ಕೆಲಸ ಮಾಡಲೂ ಬಿಡಲಿಲ್ಲ. ರಾಜ್ಯದಲ್ಲಿ 25 ಸಾವಿರ ಕೋಟಿ ರು. ರೈತರ ಸಾಲಮನ್ನಾ ಮಾಡಿದೆ. ಈ ಪೈಕಿ ಪಾವಗಡ ತಾಲೂಕಿನ 100 ಕೋಟಿ ರು. ರೈತರ ಸಾಲಮನ್ನಾ ಯೋಜನೆಯ ಹಣ ತಲುಪಿದೆ. ಸ್ವತಂತ್ರ ಪಕ್ಷ ಅಧಿಕಾರಕ್ಕೆ ತರಬೇಕೆಂದು ತೀರ್ಮಾನಿಸಿ ಕಳೆದ 2023 ಚುನಾವಣೆ ವೇಳೆ 100 ದಿನಗಳ ಕಾಲ ಬಸ್‌ನಲ್ಲಿಯೇ ಮಲಗಿದ್ದೆ. ಆರೋಗ್ಯ ಲೆಕ್ಕಿಸದೇ ಪ್ರಯಾಣಿಸಿದೆ ಸ್ವತಂತ್ರವಾಗಿ 80 ಸ್ಥಾನ ಗೆಲ್ಲಲು ಹೋರಾಟ ಮಾಡಿದೆ. ಆದರೆ ಬಹುಮತ ಬರಲೇ ಇಲ್ಲ ಎಂದು ಹೇಳಿದರು.

2006 ಸಿಎಂ ಆಗಿದ್ದ ವೇಳೆ ಭದ್ರಾಮೇಲ್ದಂಡೆ ಯೋಜನೆ ಜಾರಿಗೆ ತೀರ್ಮಾನ ತೆಗೆದುಕೊಂಡಿದ್ದೆ. ಸರ್ಕಾರದ ಇಚ್ಚಾಶಕ್ತಿ ಕೊರತೆಯಿಂದ ಅನೇಕ ವರ್ಷಗಳಿಂದ ಯೋಜನೆ ನೆನೆಗುದ್ದಿಗೆ ಬಿದ್ದಿವು. ನೀರಾವರಿ ಹಾಗೂ ಇತರೆ ಸಮಸ್ಯೆ ನಿವಾರಣೆ ಮೈತ್ರಿಯ ಉದ್ದೇಶವಾಗಿದ್ದು, ಪಾವಗಡ, ಮಧುಗಿರಿ ಶಿರಾ ಹಾಗೂ ಹಿರಿಯೂರು ತಾಲೂಕುಗಳ ಭದ್ರಾ ಯೋಜನೆಯ ಕಾಮಗಾರಿ ಮುಗಿಸಲು ಸಾಧ್ಯವಾಗಿಲ್ಲ. ಕಾರ್ಯಕರ್ತರ ಒತ್ತಡದ ಮೇರೆಗೆ ಮಂಡ್ಯದಲ್ಲಿ ಸ್ಪರ್ಧಿಸಿದ್ದು, ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲಿದ್ದಾರೆ ಎಂದರು.

ರೈತರ ಬದುಕು ಮತ್ತು ಬೆಳೆಗೆ ಸೂಕ್ತ ಬೆಲೆ ನಿಗದಿ ಸೇರಿದಂತೆ ಕೃಷಿ ಯೋಜನೆ ಜಾರಿಯಾಗಬೇಕು. ನಿಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಸುಮಾರು 30 ಲಕ್ಷ ವೆಚ್ಚದಲ್ಲಿ ಉಚಿತ ಆರೋಗ್ಯಸಿಗಬೇಕು. ಯುವಕರಿಗೆ ಉದ್ಯೋಗ ಇತರೆ ಪ್ರಗತಿ ಪರ ಯೋಜನೆ ಜಾರಿಯಾಗಬೇಕಿದೆ. ಈ ಹಿನ್ನಲೆಯಲ್ಲಿ ಮೈತ್ರಿ ಒಂದು ಅವಕಾಶ ನನ್ನ ಪಾಲಿಗೆ ಸಿಕ್ಕಿದೆ. ಇದರಿಂದ ಎಲ್ಲ ರೀತಿಯ ಸಹಕಾರ ಸಿಗಲಿದೆ.

ರಾಜ್ಯದ ಜನತೆಗೆ ಶಾಶ್ವತ ಪರಿಹಾರ ಸಿಗಬೇಕು. ಕುತಂತ್ರದಿಂದ ಪ್ರತಿ ಬಾರಿ ವಿಧಾನ ಸಭೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಜೆಡಿಎಸ್‌ನ ತಿಮ್ಮರಾಯಪ್ಪರಿಗೆ ಹಿನ್ನಡೆಯಾಗುತ್ತಿದೆ. ಈ ಬಾರಿ ತೆನೆಹೊತ್ತ ಮಹಿಳೆಯ ಚಿಹ್ನೆ ಇರುವುದಿಲ್ಲ. ಕಮಲದ ಚಿಹ್ನೆಗೆ ಮತ ನೀಡಿ ಎನ್‌ಡಿಎ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳರನ್ನು ಹೆಚ್ಚು ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು.

ರಾಜ್ಯ ಜೆಡಿಎಸ್‌ ಉಪಾಧ್ಯಕ್ಷ ಎನ್‌.ತಿಮ್ಮಾರೆಡ್ಡಿ, ಜಿಲ್ಲಾಧ್ಯಕ್ಷ ಆರ್‌.ಸಿ.ಅಂಜಿನಪ್ಪ, ಎಸ್.ವಿ.ಗೋವಿಂದಪ್ಪ, ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ, ತಾ,ಬಿಜೆಪಿ ಅಧ್ಯಕ್ಷ ರಂಗಣ್ಣ, ಬಲರಾಮರೆಡ್ಡಿ, ಹಿರಿಯ ಮುಖಂಡರಾದ ರಾಜಶೇಖರಪ್ಪ, ಜಿ.ಟಿ.ಗಿರೀಶ್‌, ಅಕ್ಕಲಪ್ಪನಾಯ್ಡ್‌ ಸೊಗಡು ವೆಂಕಟೇಶ್‌, ಜಿ.ವೆಂಕಟರಾಮಯ್ಯ, ರವಿಶಂಕರನಾಯ್ಕ್‌, ಪುರಸಭೆ ಮಾಜಿ ಸದಸ್ಯ ಮನುಮಹೇಶ್‌, ಜಿ.ಎ.ವೆಂಕಟೇಶ್‌ ಸಾಯಿಸುಮನ್‌, ಜಿಪಂ ಮಾಜಿ ಅಧ್ಯಕ್ಷ ನರಸಿಂಹಪ್ಪ, ಜಿಲ್ಲಾ ಘಟಕದ ರವಿ, ಸೂರ್ಯನಾರಾಯಣ, ತಿಪ್ಪೇಸ್ವಾಮಿ, ಜೆಡಿಎಸ್‌ ಮಹಿಳಾ ಘಟಕದ ಅಧ್ಯಕ್ಷೆ ಅಂಬಿಕಾ ರಮೇಶ್‌, ಸಿಂಗರೆಡ್ಡಿಹಳ್ಳಿ ಪುರುಷೋತಮ್‌, ಜಾಲೋಡು ಶಿವಲಿಂಗಪ್ಪ ಭಾಗವಹಿಸಿದ್ದರು.

ಪುರುಷರಿಂದ ನಾಲ್ಕು ಸಾವಿರ ವಸೂಲಿ: ಗ್ಯಾರಂಟಿ ಯೋಜನೆಯಲ್ಲಿ ಎರಡು ಸಾವಿರ ತಾಯಂದಿರಿಗೆ ಕೊಡುತ್ತಾರೆ. ಬಳಿಕ ಮದ್ಯದ ಬೆಲೆ ಜಾಸ್ತಿ ಹೆಚ್ಚಿಸಿದ್ದು, ಪುರುಷರಿಂದ ನಾಲ್ಕು ಸಾವಿರ ವಸೂಲಿ ಮಾಡುತ್ತಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ 1 ಲಕ್ಷ 5 ಸಾವಿರ ಕೋಟಿ ರು. ಸಾಲ ಮಾಡಿದ್ದಾರೆ. ಈ ಸಾಲ ತೆರಿಗೆ ರೂಪದಲ್ಲಿ ನಿಮ್ಮೆಲ್ಲರ ಮೇಲೆ ಹಾಕುತ್ತಾರೆ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸಾಲ ತೀರಿಸುವುದಿಲ್ಲ ಎಂದು ಹೇಳಿದರು.