ಕನ್ನಡಪ್ರಭ ವಾರ್ತೆ ಹುಕ್ಕೇರಿ ದೇಶದ ಅಭಿವೃದ್ಧಿ ಮತ್ತು ಸರಕಾರವನ್ನು ರೂಪಿಸುವಲ್ಲಿ ಪ್ರತಿ ಮತವೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ನಾಗರಿಕರಲ್ಲಿ ಮತದಾನದ ಮಹತ್ವ, ಮತದಾರರ ನೋಂದಣಿ ಮತ್ತು ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕನ್ನವರ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ದೇಶದ ಅಭಿವೃದ್ಧಿ ಮತ್ತು ಸರಕಾರವನ್ನು ರೂಪಿಸುವಲ್ಲಿ ಪ್ರತಿ ಮತವೂ ನಿರ್ಣಾಯಕ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ನಾಗರಿಕರಲ್ಲಿ ಮತದಾನದ ಮಹತ್ವ, ಮತದಾರರ ನೋಂದಣಿ ಮತ್ತು ನೈತಿಕ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ರಾಜಣ್ಣ ಸಂಕನ್ನವರ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿ ಶುಕ್ರವಾರ ತಾಲೂಕು ಆಡಳಿತ, ಪುರಸಭೆ, ಶಿಕ್ಷಣ ಇಲಾಖೆ ಹಾಗೂ ಕಾನೂನು ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾನ ದಿನಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನವು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಮತ್ತು ಜವಾಬ್ದಾರಿ. ಯುವ ಮತ್ತು ಹೊಸ ಮತದಾರರಲ್ಲಿ ಮತದಾನ ಮಹತ್ವ, ಅದರ ಕಾರ್ಯಗಳ ಬಗ್ಗೆ ಅರಿವು ಮೂಡಿಸುವುದು ಅತಿ ಅಗತ್ಯವಾಗಿದೆ ಎಂದರು.ನೈತಿಕ ಮತ್ತು ನಿರ್ಭಯ ಮತದಾನಕ್ಕೆ ಅಗತ್ಯವಿರುವ ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಬೇಕು. ಮತದಾರರು ಯಾವುದೇ ಕಾರಣಕ್ಕೂ ಹಣ, ಆಮಿಷ ಅಥವಾ ಒತ್ತಡಕ್ಕೆ ಮಣಿಯದೆ ಯೋಗ್ಯ ಅಭ್ಯರ್ಥಿಗೆ ಮತ ಚಲಾಯಿಸುವಂತೆ ವಾತಾವರಣ ಕಲ್ಪಿಸಬೇಕು. ಪ್ರಜಾಪ್ರಭುತ್ವದಲ್ಲಿ 18 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರು ಮತದಾನದ ಹಕ್ಕು ಮತ್ತು ಕರ್ತವ್ಯವನ್ನು ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ಮಾತನಾಡಿ, ಮತದಾನದ ಮೂಲಕ ಮತದಾರರು ಪ್ರಭುಗಳಾದಾಗ ಮಾತ್ರ ಪ್ರಜಾಪ್ರಭುತ್ವದ ನೆಲೆ ಗಟ್ಟಿಯಾಗಲು ಸಾಧ್ಯ ಎಂದರು.

ಬಸ್ಸಾಪುರ ಪ್ರೌಢಶಾಲೆ ಶಿಕ್ಷಕ ಯೋಗೇಶ ಕಾಂಬೋಜಿ ಉಪನ್ಯಾಸ ನೀಡಿ ನಮ್ಮತನ ಉಳಿಸಿಕೊಳ್ಳಬೇಕಾದರೆ ಮತದಾನದ ಮಹತ್ವ ಅರಿತು ಬದುಕಬೇಕು ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಈಶ್ವರ ಸಿದ್ನಾಳ, ಬಿಇಒ ಪ್ರಭಾವತಿ ಪಾಟೀಲ, ತಾಪಂ ಯೋಜನಾಧಿಕಾರಿ ಪ್ರಶಾಂತ ಮುನ್ನೋಳ್ಳಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಕಾಡಪ್ಪಾ ಕುರಬೇಟ, ಎಜಿಪಿ ಅನಿಲ ಕರೋಶಿ, ಅನಿತಾ ಏಶಿ, ಸಂತೋಷ ನಾಯಿಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಸಮನ್ವಯ ಅಧಿಕಾರಿ ಎ.ಎಸ್.ಪದ್ಮಣ್ಣವರ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಎಂ.ವಿ.ಮಾಸ್ತಮರಡಿ ನಿರೂಪಿಸಿದರು. ಎಂ.ಡಿ.ಬಡಿಗೇರ ವಂದಿಸಿದರು.ಮತದಾನದ ಮಹತ್ವ ಕುರಿತು ಹಮ್ಮಿಕೊಂಡ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ನಂತರ ಮಕ್ಕಳಿಂದ ಮತದಾನ ಜಾಗೃತಿ ಜಾಥಾ ಜರುಗಿತು.