ರಾಷ್ಟ್ರೀಯ ಮತದಾರರ ದಿನವು ಪ್ರಜಾಪ್ರಭುತ್ವವನ್ನು ಬಲಪಡಿಸುವುದಾಗಿದೆ. ದೇಶದ ಚುನಾವಣೆ ಆಯೋಗವು ಮತದಾನದ ಹಕ್ಕು ನೀಡಿದೆ. ಹೀಗಾಗಿ ರಾಜಕೀಯ ಪ್ರೇರಿತರಾಗಿ ಯಾರೂ ಮತದಾನ ಮಾಡಬಾರದು. ಒತ್ತಡ, ಹಣ, ಆಮೀಷಕ್ಕೆ ಮತ ಮಾರಾಟ ಮಾಡಿಕೊಳ್ಳದೇ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಮತದಾನ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸಂವಿಧಾನದಲ್ಲಿ ನೀಡಿರುವ ಮತದಾನದ ಹಕ್ಕನ್ನು 18 ವರ್ಷ ತುಂಬಿದ ಪ್ರತಿಯೊಬ್ಬ ನಾಗರಿಕರೂ ಕಡ್ಡಾಯವಾಗಿ ಚಲಾಯಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ.ಪಾರ್ವತಮ್ಮ ಹೇಳಿದರು.

ಪಟ್ಟಣದ ತಾಲೂಕು ಆಡಳಿತ ಸೌಧ ಕಚೇರಿ ಆವರಣದಲ್ಲಿ ತಾಲೂಕು ಆಡಳಿತ, ವಕೀಲರ ಸಂಘ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯಿಂದ ಆಯೋಜಿಸಿದ್ದ 16ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಯ ಮತದಾರರ ದಿನವು ಪ್ರಜಾಪ್ರಭುತ್ವವನ್ನು ಬಲಪಡಿಸುವುದಾಗಿದೆ. ದೇಶದ ಚುನಾವಣೆ ಆಯೋಗವು ಮತದಾನದ ಹಕ್ಕು ನೀಡಿದೆ. ಹೀಗಾಗಿ ರಾಜಕೀಯ ಪ್ರೇರಿತರಾಗಿ ಯಾರೂ ಮತದಾನ ಮಾಡಬಾರದು. ಒತ್ತಡ, ಹಣ, ಆಮೀಷಕ್ಕೆ ಮತ ಮಾರಾಟ ಮಾಡಿಕೊಳ್ಳದೇ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಮತದಾನ ಮಾಡಬೇಕು ಎಂದರು.

ವಿದ್ಯೆ ಕಲಿತರೆ ಸಾಲದು, ವಿದ್ಯಾರ್ಥಿಗಳಿಗೆ ವಿವೇಕ ಹಾಗೂ ಸಂಸ್ಕ್ರತಿ ಮುಖ್ಯ. ಇಂದಿನ ಯುವಕರು ಮುಂದಿನ ಪ್ರಜೆಗಳು. 18 ವರ್ಷ ತುಂಬಿದ ಯುವ ಮತದಾರರಿಗೆ ಮತದಾನ ಮಾಡಬೇಕೆಂಬ ಮಹಾದಾಸೆ ಇದೆ. ಉತ್ತಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಭಾರತವನ್ನು ಅಭಿವೃದ್ಧಿ ರಾಷ್ಟ್ರವನ್ನಾಗಿ ನಿರ್ಮಾಣ ಮಾಡಲು ಭದ್ರ ಬುನಾದಿ ಹಾಕಬೇಕಿದೆ ಎಂದರು‌.

ತಹಸೀಲ್ದಾರ್ ಬಸವರಡ್ಡೆಪ್ಪರೋಣದ, ಕ್ಷೇತ್ರ ಶಿಕ್ಷಣಾಧಿಕಾರಿ ಧರ್ಮಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್, ಸಹಾಯಕ ಸರ್ಕಾರಿ ಅಭಿಯೋಜಕ ಶಿವನಂಜಯ್ಯ, ವಕೀಲರ ಸಂಘದ ಅಧ್ಯಕ್ಷ ಗಂಗರಾಜು, ಕಾರ್ಯದರ್ಶಿ ಕೆ.ಎಸ್.ಮೋಹನ್ ಕುಮಾರ್ ಇತರರಿದ್ದರು.

ಇದೇ ವೇಳೆ ಯುವ ಮತದಾರರಿಗೆ ಭಾವಚಿತ್ರವಿರುವ ಗುರುತಿನ ಚೀಟಿ ವಿತರಿಸಲಾಯಿತು. ಮತದಾರರ ಪಟ್ಟಿಗಳನ್ನು ನವೀಕರಿಸಿ, ಹೊಸ ಮತದಾರರ ನೋಂದಣಿಗೆ ಸಹಾಯ ಮಾಡುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸಿದ ಬೂತ್ ಮಟ್ಟದ ಅಧಿಕಾರಿಗಳನ್ನು (ಬಿಎಲ್ ಒ) ಸನ್ಮಾನಿಸಲಾಯಿತು.