ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಪ್ರತಿಯೊಬ್ಬರೂ ಯೋಗ ಕಲಿತರೆ ಆರೋಗ್ಯದಿಂದ ಇರಬಹುದು ಎಂದು ಪರಮಹಂಸ ಯೋಗ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷ ಶಿವಪ್ರಕಾಶ್ ಹೇಳಿದರು.ತ್ಯಾಗರಾಜ ರಸ್ತೆಯ ಪತ್ರಕರ್ತರ ಭವನದಲ್ಲಿ ಭಾನುವಾರ ನಡೆದ ಇಂಟರ್ ನ್ಯಾಷನಲ್ ಯೋಗ ಟೀಚರ್ ಟ್ರೈನಿಂಗ್ (ಐವೈಟಿ) ಕೋರ್ಸಿನ 11ನೇ ತಂಡದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ, 12ನೇ ತಂಡದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತಿದೆ. ಆದ್ದರಿಂದ ಸಮಾಜದ ಎಲ್ಲಾ ವರ್ಗದ ಜನರು ಯೋಗದ ಮಹತ್ವ ಅರಿಯಬೇಕು ಎಂದರು.
ಯೋಗದಿಂದ ಆರೋಗ್ಯ ಮಾತ್ರವಲ್ಲದೇ ಉದ್ಯೋಗವಕಾಶಗಳು ಕೂಡ ಲಭ್ಯವಾಗುತ್ತಿವೆ. ನಮ್ಮ ಸಂಸ್ಥೆಯ 1980 ರಿಂದಲೂ ಮೈಸೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಲ್ಲರಿಗೂ ಯೋಗ ತಲುಪಿಸುವ ಗುರಿ ಹೊಂದಿದೆ. ಇದಕ್ಕಾಗಿ ಐವೈಟಿ ಕೋರ್ಸ್ ನಡೆಸುತ್ತಾ, ಉತ್ತಮ ಯೋಗ ಶಿಕ್ಷಕರನ್ನು ತಯಾರು ಮಾಡುತ್ತಿದೆ. ಇಲ್ಲಿ ಕಲಿತರು ದೇಶ- ವಿದೇಶಗಳಲ್ಲಿ ಯೋಗ ಶಿಕ್ಷಕರಾಗಿ ಕೆಲಸ ಮಾಡುತ್ತಿರುವುದು ಹೆಮ್ಮೆಯ ವಿಷಯ ಎಂದರು.ಮುಖ್ಯ ಅತಿಥಿಗಳಾಗಿದ್ದ ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ಪತ್ರಿಕಾ ಭೀಷ್ಮ ಪ್ರಶಸ್ತಿ ಪ್ರದಾನ ಮಾಡಿ, ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಆಚಾರ್ಯದ್ವಯರಾದ ಶ್ರೀಶಂಕರಚಾರ್ಯ, ಶ್ರೀ ರಾಮಾನುಜಾಚಾರ್ಯರ ಜಯಂತಿಯಂದು ಕಾರ್ಯಕ್ರಮ ಏರ್ಪಡಿಸಿರುವುದು ಅರ್ಥಪೂರ್ಣವಾಗಿದೆ ಎಂದು ಶುಭ ಹಾರೈಸಿದರು.
ಡಾ.ಲಕ್ಷ್ಮೀ ಶ್ರೀನಿವಾಸ್ ಗುರೂಜಿ ಗೋಶಾಲೆಯ ಮುಖ್ಯಸ್ಥ ಸುಂದರರಾಜ್, ಮನೋ ತರಬೇತುದಾರರಾದ ಸುಧೀರ್ ಸುಬ್ರಹ್ಮಣ್ಯ, ವಿದ್ಯಾಲಯದ ಕೋರ್ಸ್ ಸಂಚಾಲಕಿ ಡಾ.ಆರ್. ಭಾವನಾ, ಡಾ.ಆರ್. ಅಪರ್ಣಾ ಇದ್ದರು.11ನೇ ತಂಡದಲ್ಲಿ ಜಿಎನ್. ಸುವರ್ಣ, ಎ.ಎಸ್. ರಕ್ಷಿತಾ, ಬಿ.ಯು. ಕಾವ್ಯಾ, ಎಚ್. ನಾಗರಾಜಪ್ಪ, ಎಲ್. ಜಗದೀಶ್, ಮುರಳೀಧರ, ರಾಣಿ, ಪ್ರಸಾದ್, ಸೌಮ್ಯಾ ಹಾಗೂ ರವಿಶಂಕರ್ ಐವೈಟಿ ತರಬೇತಿ ಪಡೆದು. ಪ್ರಮಾಣಪತ್ರ ಸ್ವೀಕರಿಸಿದರು. ಈ ಪೈಕಿ ಮೂವರು ತರಬೇತಿಯಿಂದ ಆಗಿರುವ ಉಪಯೋಗದ ಬಗ್ಗೆ ಅನಿಸಿಕೆ ಹಂಚಿಕೊಂಡರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗಳಿಸಿರುವ ರಾಣಿ ಸ್ವಾಮಿಗೌಡ ಹಾಗೂ ಭಾರತಿ ಅವರು ವಿವಿಧ ಯೋಗಗಳನ್ನು ಪ್ರದರ್ಶಿಸಿದರು.