ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆಗೆ ಎಲ್ಲರೂ ಸಹಕರಿಸಿ: ಶಾಸಕ ರವಿಕುಮಾರ್

| Published : Oct 04 2024, 01:00 AM IST

ವಾಲ್ಮೀಕಿ ಜಯಂತಿ ಅರ್ಥಪೂರ್ಣ ಆಚರಣೆಗೆ ಎಲ್ಲರೂ ಸಹಕರಿಸಿ: ಶಾಸಕ ರವಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಮಹರ್ಷಿ ವಾಲ್ಮೀಕಿ ಸೇರಿದಂತೆ ವಿವಿಧ ಮಹನೀಯರ ಜಯಂತಿಗಳನ್ನು ವಿಜೃಂಭಣೆಯಿಂದ ಮಾಡುವ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಿದಾಗ ಮಾತ್ರ ಜಯಂತಿ ಆಚರಣೆಗೆ ಗೌರವ ಬರುತ್ತದೆ.

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಯಾವುದೋ ಒಂದು ವರ್ಗ ಅಥವಾ ಪಕ್ಷಕ್ಕೆ ಸೀಮಿತಗೊಳಿಸದೇ ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸಲು ಸಹಕಾರ ನೀಡಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ಹೇಳಿದರು.

ನಗರದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ಸೇರಿದಂತೆ ವಿವಿಧ ಮಹನೀಯರ ಜಯಂತಿಗಳನ್ನು ವಿಜೃಂಭಣೆಯಿಂದ ಮಾಡುವ ಬದಲಿಗೆ ಅರ್ಥಪೂರ್ಣವಾಗಿ ಆಚರಿಸಿದಾಗ ಮಾತ್ರ ಜಯಂತಿ ಆಚರಣೆಗೆ ಗೌರವ ಬರುತ್ತದೆ ಎಂದರು.

ಸಮುದಾಯದ ಹಿರಿಯ ಮುಖಂಡ, ಜಿ.ಪಂ ಮಾಜಿ ಸದಸ್ಯ ಬಂಕ್ ಮುನಿಯಪ್ಪ ಮಾತನಾಡಿ, ಸ್ತ್ರೀ- ಪುರುಷ ಸರಿಸಮಾನತೆಯೊಂದಿಗೆ ಕಲ್ಯಾಣ ರಾಜ್ಯದ ಆಶಯ ಹೊಂದಿದ್ದ ಮಹರ್ಷಿ ವಾಲ್ಮೀಕಿಯು ರಾಮಾಯಣದಲ್ಲಿ ವಿವಿಧ ಪಾತ್ರಗಳ ಮೂಲಕ ಬದುಕಿನ ಪ್ರತಿ ಹಂತದಲ್ಲೂ ಅನುಸರಿಸಬೇಕಾದ ನೀತಿಯನ್ನು ಬೋಧಿಸಿದ್ದು, ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಇದೇ ಅ.೧೭ ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಮುದಾಯದ ಮುಖಂಡರು ಶ್ರಮಿಸಬೇಕು ಎಂದರು.

ತಹಸೀಲ್ದಾರ್ ಬಿ.ಎನ್.ಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಈ ಹಿಂದಿನಂತೆ ಅರ್ಥಪೂರ್ಣವಾಗಿ ಆಚರಿಸಲು ತಾಲೂಕು ಆಡಳಿತ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಅಂದು ಬೆಳಗ್ಗೆ ೮ ಗಂಟೆಗೆ ತಾಲೂಕಿನ ತಲಕಾಯಲಬೆಟ್ಟದಲ್ಲಿರುವ ಮಹರ್ಷಿ ವಾಲ್ಮೀಕಿ ದೇವಾಲಯದಲ್ಲಿ ಗಣ್ಯರಿಂದ ಪೂಜೆ ಸಲ್ಲಿಸಲಾಗುತ್ತದೆ. ನಂತರ ನಗರದ ಮಯೂರ ವೃತ್ತದಲ್ಲಿರುವ ವಾಲ್ಮೀಕಿ ದೇವಾಲಯದಿಂದ ಸಾಂಸ್ಕೃತಿಕ ಕಲಾತಂಡಗಳು ಹಾಗೂ ಪೂರ್ಣಕುಂಭದೊಂದಿಗೆ ಪಲ್ಲಕ್ಕಿಗಳ ಮೆರವಣಿಗೆ ಪ್ರಮುಖ ರಸ್ತೆಗಳ ಮೂಲಕ ಸಾಗಿ ತಾಲೂಕು ಕಚೇರಿಯ ಮುಂಭಾಗದಲ್ಲಿನ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೀರ್ಮಾನಿಸಲಾಯಿತು.

ತಾಲೂಕು ಪಂಚಾಯಿತಿ ಇಒ ಹೇಮಾವತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಗದೀಶ್, ಸಮುದಾಯದ ಹಿರಿಯ ಮುಖಂಡ ಎನ್.ಮುನಿಯಪ್ಪ, ನಗರಸಭೆ ಪೌರಾಯುಕ್ತ ಮಂಜುನಾಥ್, ಜೆಡಿಎಸ್ ಮುಖಂಡ ತಾದೂರು ರಘು ಸೇರಿ ಸಮುದಾಯದ ಮುಖಂಡರು ಹಾಜರಿದ್ದರು.-------

ತಾಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಮಾತನಾಡಿದರು.