ಎಲ್ಲರೂ ಮಲ್ಲಮ್ಮನ ಆದರ್ಶ ಪಾಲನೆ ಮಾಡಿ

| Published : May 11 2025, 01:20 AM IST

ಸಾರಾಂಶ

ಪವಾಡಗಳ ಮೂಲಕ ಮಲ್ಲಮ್ಮನನ್ನು ನೋಡಬೇಡಿ. ಅವಳ ಸಾಧನೆ, ಸಾಧನೆಗೆ ಆಯ್ದುಕೊಂಡ ಮಾರ್ಗಗಳನ್ನು ಗಮನಿಸಿ, ಅಂತಹ ಆದರ್ಶಗಳ ಪಾಲನೆ ಮಾಡಿದಾಗ ನಿಜವಾಗ ಸಾದ್ವಿಯೊಬ್ಬಳ ನೆನಪು ಸಾರ್ಥಕವೆನಿಸುತ್ತದೆ ಎಂದು ಜಾನಪದ ವಿದ್ವಾಂಸ ಡಾ, ಎಂ. ಬೈರೇಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಪವಾಡಗಳ ಮೂಲಕ ಮಲ್ಲಮ್ಮನನ್ನು ನೋಡಬೇಡಿ. ಅವಳ ಸಾಧನೆ, ಸಾಧನೆಗೆ ಆಯ್ದುಕೊಂಡ ಮಾರ್ಗಗಳನ್ನು ಗಮನಿಸಿ, ಅಂತಹ ಆದರ್ಶಗಳ ಪಾಲನೆ ಮಾಡಿದಾಗ ನಿಜವಾಗ ಸಾದ್ವಿಯೊಬ್ಬಳ ನೆನಪು ಸಾರ್ಥಕವೆನಿಸುತ್ತದೆ ಎಂದು ಜಾನಪದ ವಿದ್ವಾಂಸ ಡಾ, ಎಂ. ಬೈರೇಗೌಡ ಹೇಳಿದರು.

ನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಲ್ಲಮ್ಮ ಕೇವಲ ಮಹಿಳೆಯಲ್ಲ;

ಅವಳ ಮೌನಕ್ರಾಂತಿ ಅಪಾರವಾದುದು. ಕ್ರಾಂತಿಕಿಡಿಯ ಕಿಚ್ಚು ಇಡೀ ಆ ಕಾಲಘಟ್ಟದ ಜನಸಮುದಾಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದು ಸುಳ್ಳಲ್ಲ. ಅಂಥಹ ಸಾಧಕಿಯರ ಸಾಲಿನಲ್ಲಿ ಅನೇಕ ಮಹಿಳೆಯರನ್ನು ನಾವು ಮರೆತಿದ್ದೇವೆ. ಎಲ್ಲರೂ ಪ್ರಸ್ತುತ ಕಾಲಘಟ್ಟಕ್ಕೆ ಅಗತ್ಯವಾಗಿ ಬೇಕೆನಿಸುತ್ತದೆ ಎಂದರು.

ಜೋಗವನ್ನು ಐವತ್ತನಾಲ್ಕು ವರ್ಷಗಳ ಕಾಲ ಆಳಿದ ಕರಿಮೆಣಸಿನ ರಾಣಿ ಚನ್ನಭೈರಾದೇವಿಯನ್ನು ನಾವು ಮರೆತಿದ್ದೇವೆ. ಪುರಾಣದ ಮಹಾಸತಿಯರು, ಇತಿಹಾಸದ ಹೋರಾಟಗಾರ್ತಿಯರು, ಹನ್ನೆರಡನೇ ಶತಮಾನದ ಅಕ್ಕಮಹಾದೇವಿ ಇವರೆಲ್ಲರ ಸಾಲಿನಲ್ಲಿ ನಿಲ್ಲುವ ವ್ಯಕ್ತಿತ್ವ ಹೇಮರೆಡ್ಡಿ ಮಲ್ಲಮ್ಮ. ಲಂಪಟ ಮೈದುನ ವೇಮನನ ಮನಃಪರಿವರ್ತನೆಗೆ ಕಾರಣಳಾಗಿ ಯೋಗಿಯನ್ನಾಗಿಸಿದ ಮಹಾಮಾತೆ ಮಲ್ಲಮ್ಮ ಎಂದು ವಿವರಿಸಿದರು.ಸಮುದಾಯದ ಮುಖಂಡ ಗೋವಿಂದರಾಜು ಮಾತನಾಡಿ, ಮಲ್ಲಮ್ಮ ನೆಲೆನಿಂತ ಕಾಡು ಪ್ರದೇಶ ಶ್ರೀಶೈಲವನ್ನು ನೋಡಲೇಬೇಕು. ಅಂತಹ ದುರ್ಗಮ ಅರಣ್ಯ ಪ್ರದೇಶದಲ್ಲಿ ಒಂಟಿ ಮಹಿಳೆ ನೆಲೆನಿಂತು ಸಮುದಾಯದ ಒಳಿತು ಕೋರಿದ್ದು ಸಾಮಾನ್ಯ ಸಂಗತಿಯಲ್ಲ. ಮಲ್ಲಮ್ಮನ ಸ್ಮರಣೆ ಸದಾ ನಮ್ಮೊಳಗೆ ಜಾಗೃತಿ ಮೂಡಿಸುತ್ತದೆ, ಆಕೆಯ ಆದರ್ಶ ನಮಗೆ ಮಾರ್ಗದರ್ಶನ ನೀಡುತ್ತದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಕೆ. ಸತೀಶ್ ಅಧ್ಯಕ್ಷತೆವಹಿಸಿದ್ದರು, ಕಲಾವಿದ ಶ್ರೀನಿವಾಸ್ ನಾಡಗೀತೆ ಹಾಡಿದರು. ಸಮುದಾಯದ ಮುಖಂಡರಾದ ದರ್ಶನ್, ಚಂದ್ರಶೇಖರ್ ರೆಡ್ಡಿ, ನಾಗೇಶ್ ರೆಡ್ಡಿ, ವರದರಾಜು, ಶಾರದಮ್ಮ, ರಾಜೇಶ್ವರಿ, ವಸಂತ, ಮಷಣ್ ರೆಡ್ಡಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.