ಉಜ್ಜಿನಿ ಸದ್ಧರ್ಮ ಪೀಠದವರೇ ಇಡೀ ಊರು ತುಂಬ ಇದ್ದು, ಎರಡು ಮನೆಗಳು ಮಾತ್ರ ಪಂಚಮಸಾಲಿ ಸಮುದಾಯದಲ್ಲಿಯೇ ಬೇರೆ ಪೀಠದವರು ಇದ್ದಾರೆ. ಈ ಊರಲ್ಲಿ ಬೀಗರು ಸಿಗುವುದೇ ಇಲ್ಲ. ಎಲ್ಲರೂ ಅಣ್ಣ ತಮ್ಮಂದಿರೇ ಆಗಿದ್ದಾರೆ. ಇಂತಹ ವಿಚಿತ್ರ, ಅಪರೂಪ.
ಭೀಮಣ್ಣ ಗಜಾಪುರ
ಕೂಡ್ಲಿಗಿ: ಹಟ್ಟಿಗಳು, ತಾಂಡಾಗಳಲ್ಲಿ ಮಾತ್ರ ನಾವು ಒಂದೇ ಸಮುದಾಯದ ಮನೆಗಳಿರುವುದನ್ನು ನಾವು ಕಾಣುತ್ತೇವೆ. ಮುಂದುವರೆದ ಸಮುದಾಯಗಳು ಇರುವ ಹಳ್ಳಿಗಳಲ್ಲಿ ಹತ್ತಾರು ಜಾತಿಯ, ಧರ್ಮಗಳ ಮನೆಗಳಿರುವುದನ್ನು ಕಾಣುತ್ತೇವೆ. ಆದರೆ ಕೂಡ್ಲಿಗಿ ತಾಲೂಕಿನ ಹೊಸಹಳ್ಳಿ ಸಮೀಪದ ಟಿ.ಸೂರವ್ವನಹಳ್ಳಿಯಲ್ಲಿ 150 ಮನೆಗಳಿವೆ. ಎಲ್ಲ ಮನೆಗಳು ಕೂಡ ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರೇ.ಈ ಹಳ್ಳಿ ಉಜ್ಜಿನಿಯಿಂದ ಹೊಸಹಳ್ಳಿಗೆ ಹೋಗುವ ರಸ್ತೆಯಲ್ಲಿ ಬರುತ್ತದೆ. ನಿಂಬಳಗೆರೆ ದಾಟಿದ ನಂತರ ನಾಲ್ಕೈದು ಕಿ.ಮೀ. ಹೊಸಹಳ್ಳಿ ಕಡೆಗೆ ಕ್ರಮಿಸಿದರೆ ಎಡಗಡೆಗೆ ಕ್ರಾಸ್ ಬರುತ್ತದೆ. ಅಲ್ಲಿಂದಲೇ ಈ ಊರು ಕೂಗಳತೆ ದೂರದಲ್ಲಿದೆ. ಈ ಊರಲ್ಲಿ ಪರಿಶಿಷ್ಟ ಜಾತಿ, ಪಂಗಡದವರು, ಇತರೆ ಹಿಂದುಳಿದವರು, ಇತರೆ ಧರ್ಮದವರು ಯಾರೂ ಇಲ್ಲ. ಇಂದು ನಿನ್ನೆಯದಲ್ಲ, ನೂರಾರು ವರ್ಷಗಳ ಕಾಲ ಒಂದೇ ಸಮುದಾಯದವರು ವಾಸಿಸುತ್ತಾ ಬಂದಿದ್ದಾರೆ. ಏಕೆ ಹೀಗೆ ಎಂದು ಇಲ್ಲಿಯ ಗ್ರಾಮಸ್ಥರಲ್ಲಿ ಕೇಳಿದರೆ ನಮಗೂ ಗೊತ್ತಿಲ್ಲ. ನಮ್ಮ ಪೂರ್ವಜರಿಂದ ಒಂದೇ ಸಮುದಾಯದವರು ಜೀವನ ಮಾಡುತ್ತಿದ್ದೇವೆ ಎನ್ನುತ್ತಾರೆ.
ಈ ಊರಲ್ಲಿ ಪಂಚಮಸಾಲಿ ಸಮುದಾಯದ 150 ಮನೆಗಳಿದ್ದರೂ ಎಲ್ಲರೂ ಒಂದೇ ಪೀಠದವರು (ಬೆಡಗಿನವರು) ಇರುವುದು ಮತ್ತೊಂದು ವಿಶೇಷ. ಪಂಚಮಸಾಲಿ ಜನಾಂಗದಲ್ಲಿ ಉಜ್ಜಿನಿ ಸದ್ಧರ್ಮ ಪೀಠದವರೇ ಇಡೀ ಊರು ತುಂಬ ಇದ್ದು, ಎರಡು ಮನೆಗಳು ಮಾತ್ರ ಪಂಚಮಸಾಲಿ ಸಮುದಾಯದಲ್ಲಿಯೇ ಬೇರೆ ಪೀಠದವರು ಇದ್ದಾರೆ. ಈ ಊರಲ್ಲಿ ಬೀಗರು ಸಿಗುವುದೇ ಇಲ್ಲ. ಎಲ್ಲರೂ ಅಣ್ಣ ತಮ್ಮಂದಿರೇ ಆಗಿದ್ದಾರೆ. ಇಂತಹ ವಿಚಿತ್ರ, ಅಪರೂಪ.ಕಳೆದ ವರ್ಷ ಇಲ್ಲಿ ಮಲಿಯಮ್ಮ (ದೇವತೆ) ದೇವಾಲಯವನ್ನು ಜನರು ಕಟ್ಟಿಸುವ ಮೂಲಕ ಊರಿನಲ್ಲಿ ಸೌಹಾರ್ದ ಮೆರೆದಿದ್ದಾರೆ. ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯರು ಬಂದು ಮಲಿಯಮ್ಮನ ದೇವಸ್ಥಾನದ ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಿದ್ದಾರೆ. ಊರಲ್ಲಿ ಬಸವಣ್ಣನ ದೇವಸ್ಥಾನ ಇದೆ. ಈ ದೇವಾಲಯವೇ ಇಲ್ಲಿಯ ಆರಾಧ್ಯ ದೈವ. ಮಲಿಯಮ್ಮ ದೇವಿಯನ್ನು ಪಂಚಮಸಾಲಿ ಸಮುದಾಯದವರೇ ಪೂಜೆ ಮಾಡುತ್ತಾರೆ. ಹೀಗೆ ಬಗೆದಷ್ಟು ವಿಸ್ಮಯ ಸಂಗತಿಗಳು ಈ ಊರಲ್ಲಿ ಸಿಗುತ್ತವೆ.
ಈ ಊರಲ್ಲಿ ಯಾವುದೇ ಶುಭ ಸಮಾರಂಭ ಇರಲಿ, ಯಾರಾದರೂ ಸಾವನ್ನಪ್ಪಿದರೂ ಪಕ್ಕದ ಬಯಲು ತುಂಬರಗುದ್ದಿ ಗ್ರಾಮದ ದಲಿತರು ಬಂದು ಕಾರ್ಯ ನಡೆಸಿಕೊಡುತ್ತಾರೆ. ಯುವತಿಯರು ಋುತುಮತಿಯಾದರೆ ಬಯಲು ತುಂಬರಗುದ್ದಿಯ ಮಡಿವಾಳರು ಬಂದು ಬಟ್ಟೆ ಸ್ವಚ್ಛ ಮಾಡಿಕೊಡುತ್ತಾರೆ. ಹೀಗೆ ಯಾವುದೇ ಧಾರ್ಮಿಕ ಕಾರ್ಯಗಳು ನಡೆದರೂ ಬಯಲು ತುಂಬರಗುದ್ದಿಯವರು ಬಂದು ಈ ಊರಿನ ಧಾರ್ಮಿಕ ಇತರೆ ಕಾರ್ಯಗಳಲ್ಲಿ ಭಾಗಿಯಾಗುತ್ತಾರೆ. ಬಯಲು ತುಂಬರಗುದ್ದಿ ಗ್ರಾಮಕ್ಕೂ ಟಿ.ಸೂರವ್ವನಹಳ್ಳಿ ಗ್ರಾಮಕ್ಕೂ 1 ಕಿ.ಮೀ. ದೂರವಿದೆ. ಇಲ್ಲಿಯ ಮಕ್ಕಳಿಗೆ ಇದೇ ಊರಲ್ಲಿ ಪ್ರಾಥಮಿಕ ಶಾಲೆ ಇದೆ. ಆದರೆ ಪ್ರೌಢಶಾಲೆ ಕಲಿಯಬೇಕೆಂದರೂ ತುಂಬರಗುದ್ದಿಗೆ ಹೋಗಬೇಕು.ನಮ್ಮೂರಲ್ಲಿ ಇತರೆ ಜಾತಿ, ಧರ್ಮದವರು ಯಾರೂ ಇಲ್ಲ. ಇದು ಇಂದು ನಿನ್ನೆಯದಲ್ಲ. ನೂರಾರು ವರ್ಷಗಳ ಕಾಲ ಒಂದೇ ಸಮುದಾಯದ 150 ಪಂಚಮಸಾಲಿ ಸಮಾಜದ ಕುಟುಂಬಗಳು ವಾಸಿಸುತ್ತಾ ಬಂದಿದ್ದೇವೆ. ಎಲ್ಲರೂ ಅಣ್ಣ ತಮ್ಮಂದಿರೇ ಆಗಬೇಕು. ಸತ್ತರೂ, ಕೆಟ್ಟರೂ, ಯಾವುದೇ ಶುಭ ಸಮಾರಂಭ ಇದ್ದರೂ ಪಕ್ಕದ ಬಯಲ ತುುಂಬರಗುದ್ದಿ ಗ್ರಾಮಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ಜಿ.ಮಲ್ಲಿಕಾರ್ಜುನಪ್ಪ, ಶಿವಮೂರ್ತಿ, ಮರುಳಸಿದ್ದಪ್ಪ, ಜೆ.ಬಸವರಾಜ, ಜಿ.ವೀರೇಶ, ಟಿ.ಸೂರವ್ವನಹಳ್ಳಿ ಗ್ರಾಮದ ಮುಖಂಡರು.