ಗ್ರಾಮದಲ್ಲಿ ಮುಕ್ತವಾಗಿ ಎಲ್ಲರಿಗೂ ಕ್ಷೌರಕ್ಕೆ ಒಪ್ಪಿಗೆ

| Published : Oct 29 2024, 12:55 AM IST

ಸಾರಾಂಶ

ತಾಲೂಕಿನ ಹಲಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಸ್ಪೃಶ್ಯತೆ ನಿವಾರಣಾ ಸಭೆ ಜರುಗಿತು.

ಹಲಗೇರಿ ಗ್ರಾಪಂನಲ್ಲಿ ಅಸ್ಪೃಶ್ಯತೆ ನಿವಾರಣೆ ಸಭೆ

ಕನ್ನಡಪ್ರಭ ವಾರ್ತೆ ಕೊಪ್ಪಳ

ತಾಲೂಕಿನ ಹಲಗೇರಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಅಸ್ಪೃಶ್ಯತೆ ನಿವಾರಣಾ ಸಭೆ ಜರುಗಿತು.

ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುವ ವಿಚಾರಕ್ಕೆ ಕ್ಷೌರದ ಅಂಗಡಿಯನ್ನು ಬಂದ್‌ ಮಾಡಿದ್ದ ಹಿನ್ನೆಲೆ ಆ ಕ್ಷೌರದ ಅಂಗಡಿಗಳ ಮಾಲೀಕರು, ಸಮುದಾಯದ ಜಿಲ್ಲಾ ಅಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ತಾಲೂಕು ಮುಖಂಡರು ಹಾಗೂ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪೋಲಿಸ್ ಇಲಾಖೆ ಮತ್ತು ಗ್ರಾಮದ ಮುಖಂಡರೊಂದಿಗೆ ಸಭೆ ಜರುಗಿತು.

ಎಲ್ಲ ಸಮುದಾಯದವರಿಗೆ ಮುಕ್ತವಾಗಿ ಕ್ಷೌರ ಮಾಡುವಂತೆ ತಿಳಿಸಲಾಯಿತು. ಅವರಿಗೆ ಗ್ರಾಮ ಪಂಚಾಯಿತಿಯಿಂದ ಲಭ್ಯವಿರುವ ರಸ್ತೆ ಬದಿ ನಿವೇಶನವನ್ನು ಒದಗಿಸಿ ಅನುಕೂಲ ಮಾಡಿಕೊಡಲು ನಿರ್ಣಯಿಸಲಾಯಿತು. ಕ್ಷೌರದ ಅಂಗಡಿಯವರು ಒಮ್ಮತದಿಂದ ಗ್ರಾಮದಲ್ಲಿ ಎಲ್ಲ ಸಮುದಾಯದವರಿಗೆ ಮುಕ್ತವಾಗಿ ಕ್ಷೌರ ಮಾಡಲು ಒಪ್ಪಿಗೆ ಸೂಚಿಸಿದರು.

ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಓಜನಹಳ್ಳಿ, ಪಿಡಿಒ ಅಶೋಕ ರಾಂಪೂರ, ಗ್ರಾಪಂ ಸದಸ್ಯ ನಾಗರಾಜ ಪಾಲನಕರ, ಸುಭಾಷ ಹೂಗಾರ, ಮುಖಂಡರಾದ ಮಂಜುನಾಥ ಮ್ಯಾಗಳಮನಿ, ಶರಣಪ್ಪ ಬಿನ್ನಾಳ, ಪತ್ರಕರ್ತ ಹನುಮಂತಪ್ಪ ಹಳ್ಳಿಕೇರಿ, ಭೀಮಣ್ಣ ಗುಡ್ಲಾನೂರ, ಜಿಲ್ಲಾ ಹಡಪದ ಸಮಾಜದ ಜಿಲ್ಲಾಧ್ಯಕ್ಷ ಮಂಜುನಾಥ ಹಂದ್ರಾಳ, ಕಾರ್ಯದರ್ಶಿ ದ್ಯಾಮಣ್ಣ ಮಾದಿನೂರ, ಬಸವರಾಜ ಊಣಿಸಾಳ, ಬುಡ್ಡಪ್ಪ ಹಡಪದ, ಶಿವಪ್ಪ ಹಡಪದ, ದೇವಪ್ಪ ಹಡಪದ, ಗವಿಸಿದಪ್ಪ ಕಾಟ್ರಳ್ಳಿ , ಪ್ರಕಾಶ ದದೇಗಲ್ ಹಾಗೂ ಕಾರ್ಯದರ್ಶಿ ದೊಡ್ಡನಗೌಡ ಪಾಟೀಲ್ ಇತರರಿದ್ದರು.ಸರ್ವರೂ ಸಮಾನರು, ಕ್ಷೌರಕ್ಕೆ ಬೇಡ ತಾರತಮ್ಯ-ನ್ಯಾಯಾಧೀಶ ಮಹಾಂತೇಶ:

ಹಲಗೇರಿ ಗ್ರಾಮದಲ್ಲಿ ಕ್ಷೌರಕ್ಕೆ ನಿರಾಕರಣೆ ಮಾಡುವುದು ತಪ್ಪು.ಅಸ್ಪೃಶ್ಯತೆ ಭಾವ ಯಾರಲ್ಲೂ ಬೇಡ. ಎಲ್ಲರೂ ಸಮಾನರು ಎಂದು ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಹೇಳಿದರು.ತಾಲೂಕಿನ ಹಲಗೇರಿಯಲ್ಲಿ ದಲಿತರಿಗೆ ಕ್ಷೌರಕ್ಕೆ ನಿರಾಕರಣೆ ಮಾಡಿದ ಹಿನ್ನೆಲೆ ಗ್ರಾಪಂಗೆ ಭೇಟಿ ನೀಡಿದ ಅವರು ಕ್ಷೌರದ ಅಂಗಡಿಯವರು ಹಾಗೂ ಸಮುದಾಯದವರು, ಗ್ರಾಮದ ಹಿರಿಯರೊಡನೆ ಸಭೆ ನಡೆಸಿದರು.ಕ್ಷೌರಕ್ಕೆ ಯಾರಿಗೂ ನಿರಾಕರಣೆ ಮಾಡಬಾರದು. ಅದು ಅಪರಾಧ, ಎಲ್ಲರೂ ಸಹೋದರ ಭಾವದಿಂದ ಬಾಳಬೇಕು. ಸರ್ವರೂ ಸಮಾನರೆಂದು ತಿಳಿಯಬೇಕು. ಹಲಗೇರಿ ಗ್ರಾಮದಲ್ಲಿ ಅಸ್ಪೃಶ್ಯತೆ ಭಾವದಿಂದ ಕ್ಷೌರ ನಿರಾಕರಣೆ ಮಾಡಿದ್ದಾರೆ ಎಂಬುದು ಒಂದು ಕಳಂಕದ ವಿಷಯ. ಇದು ಮತ್ತೆ ಎಂದಿಗೂ ಮರುಕಳಿಸಬಾರದು ಎಂದರು.ಗ್ರಾಮದ ಹಿರಿಯರು, ಗ್ರಾಪಂ ಮಂಡಳಿಯವರು, ಪಿಡಿಒ, ಕ್ಷೌರಿಕರು, ಸಮಾಜದವರಿದ್ದರು.