ಕೋಟೆ ಮಾರಿಕಾಂಬೆ ಜಾತ್ರೆ ಯಶಸ್ವಿಗೆ ಎಲ್ಲರೂ ಕಾರಣ

| Published : Mar 21 2024, 01:06 AM IST

ಸಾರಾಂಶ

ಶಿವಮೊಗ್ಗದ ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಮಹೋತ್ಸವ ಅದ್ಧೂರಿ ಹಾಗೂ ವೈಭವದಿಂದ ಜರುಗಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ. ಈ ಬಾರಿಯ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಲಕ್ಷಾಂತರ ಭಕ್ತರು ಯಾವ ತೊಂದರೆಯಿಲ್ಲದೆ ದರ್ಶನ ಪಡೆದರು. ದೀಪಲಂಕಾರ ಈ ಬಾರಿಯ ವೈಶಿಷ್ಟ್ಯತೆ ಆಗಿತ್ತು. ಜೊತೆಗೆ ದೇವಸ್ಥಾನದಲ್ಲಿ ಹೂವಿನ ಅಲಂಕಾರ ಗಮನ ಸೆಳೆಯಿತು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕೋಟೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಮಹೋತ್ಸವ ಅದ್ಧೂರಿ ಹಾಗೂ ವೈಭವದಿಂದ ಜರುಗಿದ್ದು, ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಿದ್ದಾರೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಬಾರಿಯ ಜಾತ್ರೆ ಅತ್ಯಂತ ಯಶಸ್ವಿಯಾಗಿ ನಡೆದಿದ್ದು, ಲಕ್ಷಾಂತರ ಭಕ್ತರು ಯಾವ ತೊಂದರೆಯಿಲ್ಲದೆ ದರ್ಶನ ಪಡೆದರು. ದೀಪಲಂಕಾರ ಈ ಬಾರಿಯ ವೈಶಿಷ್ಟ್ಯತೆ ಆಗಿತ್ತು. ಜೊತೆಗೆ ದೇವಸ್ಥಾನದಲ್ಲಿ ಹೂವಿನ ಅಲಂಕಾರ ಗಮನ ಸೆಳೆಯಿತು. ಸುಮಾರು 46 ಅಡಿ ಎತ್ತರದ ಚಾಮುಂಡಿ ದೇವಿಯ ಪ್ರತಿಮೆ ಆಕರ್ಷಕವಾಗಿತ್ತು. ಎಲ್ಲ ವ್ಯವಸ್ಥೆಗಳು ಸಮರ್ಪಕವಾಗಿ ನಡೆಯಿತು. ಯಾವ ಅಹಿತರ ಘಟನೆಯೂ ನಡೆಯದೇ ಜಾತ್ರೆ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಅರಣ್ಯ ಇಲಾಖೆ, ಪೊಲಿಸ್‌ ಇಲಾಖೆ, ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಗಳ ಸಹಕಾರವಿದೆ ಎಂದು ತಿಳಿಸಿದರು.

ಈ ಬಾರಿ ಜಾತ್ರೆಯ ಅಲಂಕಾರ ಎಲ್ಲರ ಗಮನ ಸೆಳೆದಿದೆ. ಇದರ ರೂವಾರಿ ಕಾಂಗ್ರೆಸ್‌ ಮುಖಂಡ ಎಂ.ಶ್ರೀಕಾಂತ್‌ ಅವರು. ಪ್ರಥಮ ಬಾರಿಗೆ ದೇವಸ್ಥಾನದ ಆವರಣದಲ್ಲಿ ಅವರು ಲಕ್ಷಾಂತರ ರು. ವೆಚ್ಚದಲ್ಲಿ ಹೂವಿನ ಅಲಂಕಾರ ಮಾಡಿಸಿದ್ದರು. ಮುಂದಿನ ವರ್ಷಗಳಲ್ಲಿ ದೇವಸ್ಥಾನ ಸಮಿತಿಯಿಂದಲೇ ಈ ರೀತಿಯ ಅಲಂಕಾರವನ್ನು ಮಾಡುತ್ತೇವೆ. ಇದು ನಮಗೆ ಪ್ರೇರಣೆಯಾಗಿದೆ ಎಂದರು.

ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ಶಾಸಕರು ಸ್ಥಳೀಯ ಮಾಜಿ ಕಾಪೋರೇಟರ್‌ಗಳು, ಮಾಧ್ಯಮ ಹೀಗೆ ಎಲ್ಲಾ ಇಲಾಖೆಗಳು ಈ ಬಾರಿ ನಮಗೆ ಸಹಕಾರ ನೀಡಿವೆ. ಜೊತೆಗೆ ಜಾತ್ರೆಯ ಯಶಸ್ಸಿಗಾಗಿ ನಾವು ಹಲವು ಉಪಸಮಿತಿಗಳನ್ನು ಮಾಡಿದ್ದೆವು. ಸಮಿತಿಗಳು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವೆ ಎಂದು ಹೇಳಿದರು.

ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಮಾತನಾಡಿ, ಇದೊಂದು ಅರ್ಥಪೂರ್ಣ ಜಾತ್ರೆಯಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ಸರ್ವಧರ್ಮದವರು ಭಾಗವಹಿಸಿದ್ದರು. ಒಂದು ಸಣ್ಣ ಕಳ್ಳತನವೂ ಆಗಲಿಲ್ಲ. ಪೊಲೀಸರು ಅತ್ಯಂತ ಎಚ್ಚರಿಕೆ ವಹಿಸಿದ್ದರು. ಸಿ.ಸಿ. ಕ್ಯಾಮರಗಳನ್ನು ಅಳವಡಿಸಲಾಗಿತ್ತು. ಬಹುಮುಖ್ಯವಾಗಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿತ್ತು. ಮಹಾನಗರ ಪಾಲಿಕೆ ತ್ಯಾಜ್ಯ ವಿಲೇವಾರಿಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಕುಡಿಯುವ ನೀರಿನ ತೊಂದರೆಯಾಗಲಿಲ್ಲ. ಮೆಸ್ಕಾಂ ಇಲಾಖೆ ಕೂಡ ಸಹಕರಿಸಿತ್ತು. ವಿದ್ಯುತ್ ಸಂಪರ್ಕಕ್ಕೂ ಅಡಚಣೆಯಾಗಲಿಲ್ಲ ಎಂದು ಹೇಳಿದರು.

ಸಮಿತಿ ಉಪಾಧ್ಯಕ್ಷ ಎನ್.ಉಮಾಪತಿ ಮಾತನಾಡಿ, ಈ ಬಾರಿ ರಾಜ್ಯಮಟ್ಟದ ಬಯಲು ಕುಸ್ತಿಪಂದ್ಯಾವಳಿ ಅತ್ಯಂತ ಆಕರ್ಷಕವಾಗಿತ್ತು. ಇದೇ ಮೊದಲ ಬಾರಿಗೆ ಮಹಿಳೆಯರಿಗೆ ನಾವು ಕುಸ್ತಿ ಪಂದ್ಯಾವಳಿ ನಡೆಸಿದ್ದೆವು. ಇದು ನಮಗೆ ಪ್ರೇರಣೆ ನೀಡಿದೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸುವ ಉದ್ದೇಶವಿದೆ ಎಂದರು.

ಪುರುಷರ ಕುಸ್ತಿ ಪಂದ್ಯಾವಳಿ ಕೂಡ ಗಮನಸೆಳೆಯಿತು. ಹರಿಯಾಣ, ಮಹಾರಾಷ್ಟ್ರ, ದೆಹಲಿ ಮುಂತಾದ ಕಡೆಗಳಿಂದ ಕುಸ್ತಿಪಟುಗಳು ಆಗಮಿಸಿದ್ದರು. ಈ ಬಾರಿ ಗ್ಯಾಲರಿಯನ್ನು ನಿರ್ಮಿಸಲಾಗಿತ್ತು. ಇದು ಮಣ್ಣಿನ ಕುಸ್ತಿಯಾಗಿದೆ. ರಾಷ್ಟ್ರಮಟ್ಟದಲ್ಲಿ ಮ್ಯಾಟ್ ಕುಸ್ತಿ ಚಾಲ್ತಿಯಲ್ಲಿದೆ. ಮುಂದಿನ ಬಾರಿ ಮಣ್ಣಿನ ಕುಸ್ತಿಯ ಜೊತೆಗೆ ಮ್ಯಾಟ್ ಕುಸ್ತಿಯನ್ನು ಕೂಡ ನಡೆಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಡಿ.ಎಂ.ರಾಮಯ್ಯ, ವಿ.ರಾಜು, ಪ್ರಕಾಶ್, ಸುನೀಲ್, ಎಸ್.ಸಿ.ಲೋಕೇಶ್ ಮತ್ತಿತರರು ಇದ್ದರು.

- - - -20ಎಸ್‌ಎಂಜಿಕೆಪಿ02: ಎಸ್‌.ಕೆ.ಮರಿಯಪ್ಪ