ನರೇಗಲ್ಲ: ಐದು ವರ್ಷದೊಳಗಿನ ಪ್ರತಿಯೊಂದು ಮಗುವಿಗೂ ತಪ್ಪದೇ ಪೋಲಿಯೋ ಹನಿ ಹಾಕಿಸುವ ಮೂಲಕ ದೇಶವನ್ನು ಸಂಪೂರ್ಣ ಪೋಲಿಯೋ ಮುಕ್ತವಾಗಿಸಲು ಪೋಷಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ ಜಾಲಿಹಾಳ ತಿಳಿಸಿದರು.

ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಅಂಗವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿಡಗುಂದಿ ವ್ಯಾಪ್ತಿಯ ನರೇಗಲ್ಲ ಅರ್ಬನ್ ಪ್ರದೇಶದಲ್ಲಿ ಶನಿವಾರ ನಡೆದ ಜಾಗೃತಿ ಪ್ರಭಾತ ಫೇರಿ ಹಾಗೂ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಲ್ಸ್ ಪೋಲಿಯೋ ಅಭಿಯಾನ ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದು, ಈಗಾಗಲೇ ನಿಯಮಿತ ಲಸಿಕೆಗಳನ್ನು ಪಡೆದ ಮಕ್ಕಳಿಗೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಡಿ ಎರಡು ಹನಿ ಪೋಲಿಯೋ ನೀಡುವುದು ಅತ್ಯಗತ್ಯವಾಗಿದೆ ಎಂದರು.

ವೈದ್ಯಾಧಿಕಾರಿ ಡಾ. ಚಿದಾನಂದ ಮುಂಡಾಸದ ಮಾತನಾಡಿ, ಪೋಲಿಯೋ ನಿರ್ಮೂಲನೆಗೆ ಸರ್ಕಾರ ಕೈಗೊಂಡಿರುವ ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಪೋಷಕರೂ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಹನಿ ಹಾಕಿಸಬೇಕು ಎಂದರು.

ಜಾಥಾದಲ್ಲಿ ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಶಿಕ್ಷಕರು ಭಾಗವಹಿಸಿ ಪೋಲಿಯೋ ನಿರ್ಮೂಲನೆ ಕುರಿತ ಘೋಷಣೆಗಳನ್ನು ಕೂಗುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಅಲ್ಲದೆ ಕರಪತ್ರಗಳನ್ನು ವಿತರಿಸಿ ಕಾರ್ಯಕ್ರಮದ ಮಹತ್ವದ ಕುರಿತು ಅರಿವು ಮೂಡಿಸಲಾಯಿತು.


ಈ ವೇಳೆ ಕಲ್ಲಪ್ಪ ಬೂದಿಹಾಳ, ಎಸ್.ಎಸ್. ಬೆನ್ನೂರ, ಮುತ್ತಣ್ಣ ಮನಿನಾಗರ, ಸಂಗೀತಾ ಮುಚಖಂಡಿ, ವಿಜಯಲಕ್ಷ್ಮೀ ಪೊಲೀಸ್ ಪಾಟೀಲ, ರಹಮತ್ ಬಾನು, ಶರಬತ್‌ವಾಲಾ, ಶಿಕ್ಷಕರಾದ ಬಿ.ಬಿ. ಕುರಿ, ಎಂ.ಎಲ್. ಹೊಸಳ್ಳಿ, ಮಾಳಶೆಟ್ಟಿ ಸೇರಿದಂತೆ ಹಲವರು ಇದ್ದರು.

ಪಲ್ಸ್ ಪೋಲಿಯೋ ಲಸಿಕಾ ದಿನದಂದು ಬೆಳಗ್ಗೆ 8 ರಿಂದ ಸಂಜೆ 5ರ ವರೆಗೆ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ವಿಶೇಷ ಪೋಲಿಯೋ ಬೂತ್‌ಗಳಲ್ಲಿ ಉಚಿತವಾಗಿ ಪೋಲಿಯೋ ಹನಿ ನೀಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.