ಸಾರಾಂಶ
ಕನ್ನಡಪ್ರಭ ವಾರ್ತೆ ಗುಬ್ಬಿ
ಎಲ್ಲರೂ ಜವಾಬ್ದಾರಿ ತೆಗೆದುಕೊಂಡರೆ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ ಎಂದು ಪತ್ರಕರ್ತ ಗುರುಪ್ರಸಾದ್ ತಿಳಿಸಿದರು.ತಾಲೂಕಿನ ತ್ಯಾಗಟೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮೌಲ್ಯವರ್ಧನ ಹಾಗೂ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆ ಕಂಡುಬರುತ್ತಿದ್ದು, ಎಲ್ಲರೂ ಇಲಾಖೆಯ ಜೊತೆ ಸಹಕರಿಸಿ ಅಭಿವೃದ್ಧಿಗೆ ಶ್ರಮಿಸಬೇಕಿದೆ. ಈ ಹಿಂದೆ ಸರ್ಕಾರಿ ಶಾಲೆಗಳಲ್ಲಿಯೇ ಓದುತ್ತಿದ್ದ ಪೋಷಕರು ಇಂದು ಅವರ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವ ಕಾರಣ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದೆ ಎಂದು ಬೇಸರ ವ್ಯತ್ತಪಡಿಸಿದರು.
ಗ್ರಾಪಂ ಸದಸ್ಯ ಕುಮಾರಸ್ವಾಮಿ ಮಾತನಾಡಿ, ಉತ್ತಮ ವಿದ್ಯಾರ್ಹತೆವುಳ್ಳ ಹಾಗೂ ಗುಣಮಟ್ಟದ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಇದ್ದಾರೆ ಎನ್ನುವುದನ್ನು ಪೋಷಕರು ಮನಗಾಣಬೇಕಿದೆ. ಪೋಷಕರು ಆಂಗ್ಲ ಭಾಷೆಯ ಮೋಹಕ್ಕೆ ಒಳಗಾಗಿ ಪಟ್ಟಣಗಳಲ್ಲಿರುವ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸುವ ಮೂಲಕ ಮಕ್ಕಳನ್ನು ಒತ್ತಡಕ್ಕೆ ಸಿಲುಕಿಸಲಾಗುತ್ತಿದ್ದಾರೆ. ದಶಕಗಳ ಹಿಂದೆ ಸರ್ಕಾರಿ ಶಾಲೆಗಳಲ್ಲಿ ಓದಿದವರೇ ಇಂದು ಸಮಾಜದಲ್ಲಿ ಉತ್ತಮ ಸ್ಥಾನಮಾನಗಳನ್ನು ಪಡೆದಿದ್ದಾರೆ ಎನ್ನುವುದನ್ನು ಪೋಷಕರು ಮನ ಕಾಣಬೇಕಿದೆ ಎಂದು ತಿಳಿಸಿದರು.ಭುವನೇಶ್ವರಿ ಶಾಲಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ರವೀಶ್ ಮಾತನಾಡಿ, ಮಕ್ಕಳಲ್ಲಿರುವ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯನ್ನು ಮೂಡಿಸುವ ಕಾರಣಕ್ಕಾಗಿಯೇ ಸಮವಸ್ತ್ರವನ್ನು ವಿತರಿಸಲಾಗುತ್ತಿದೆ. ನಮ್ಮೂರ ಶಾಲಾ ಅಭಿವೃದ್ಧಿಗೆ ಸಾಧ್ಯವಿರುವ ಎಲ್ಲಾ ಸಹಕಾರವನ್ನು ನೀಡಿ ಶಾಲೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಪೋಷಕರ ಸಹಕರಿಸಿದರೆ ಅನುಕೂಲವಾಗುವುದು ಎಂದರು.
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರಿ ಶಾಲೆಗಳಿಗೆ ಸಾಧ್ಯವಿರುವ ಅನುಕೂಲ ಮಾಡಿಕೊಡುವಂತೆ ಕೇಳಿಕೊಳ್ಳಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಸರ್ಕಾರಿ ಶಾಲೆಗಳ ಉಳಿವಿಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲಬೇಕು ಎಂದು ತಿಳಿಸಿದರು.ಶಾಲೆಯ ಮಕ್ಕಳಿಗೆ ಸಮವಸ್ತ್ರ ವಿತರಣೆ ಮಾಡಲಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷ ಓಂಕಾರಮೂರ್ತಿ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನಯ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು, ಪೋಷಕರು, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.