ಸಂಚಾರ ನಿಯಮಗಳ ಪಾಲನೆಗಳನ್ನು ಉಲ್ಲಂಘನೆ ಮಾಡುವುದರಿಂದ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ.
ಹೊಸಪೇಟೆ: ಸಂಚಾರ ನಿಯಮಗಳ ಪಾಲನೆಗಳನ್ನು ಉಲ್ಲಂಘನೆ ಮಾಡುವುದರಿಂದ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಎಲ್ಲ ಇಲಾಖೆಗಳ ಅಧಿಕಾರಿಗಳು ಸೇರಿ ರಸ್ತೆ ಅಪಘಾತ ತಡೆಗಟ್ಟಲು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿ ಅಪಘಾತ ರಹಿತ ಜಿಲ್ಲೆಯನ್ನಾಗಿ ಮಾಡೋಣ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಹೇಳಿದರು.
ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಇವರ ಜಂಟಿ ಸಹಯೋಗದಲ್ಲಿ 37ನೇ ರಾಷ್ಟೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ರಸ್ತೆ ನಿಯಮಗಳ ಪಾಲನೆಯ ಪೋಸ್ಟರ್ ಬಿಡುಗಡೆ ಮಾಡಿ ಅವರು ಶನಿವಾರ ಮಾತನಾಡಿದರು.ಕಾನೂನು ನಿಯಮ ಪಾಲನೆ ಮಾಡಿ ಮತ್ತು ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕಿದೆ. ಈ ವರ್ಷವಾದರೂ ಅಪಘಾತ ರಹಿತ ವರ್ಷವನ್ನಾಗಿ ಮಾಡುವ ಸಲುವಾಗಿ ರಸ್ತೆ ಮಾಸಾಚರಣೆ ಹಮ್ಮಿಕೊಳ್ಳಲಾಗಿದೆ. ವಾಹನಗಳ ಸಂಖ್ಯೆ ಮೀತಿ ಮೀರುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಾದಂತೆ ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿವೆ ಎಂದು ಹೇಳಿದರು.
ಅಪಘಾತಕ್ಕೆ ಮುಖ್ಯ ಕಾರಣಗಳೆಂದರೆ ಸಂಚಾರ ನಿಯಮಗಳ ಉಲ್ಲಂಘನೆ ಮಾಡುವುದು, ನಿರ್ಲಕ್ಷತೆಯಿಂದ ವಾಹನ ಚಾಲನೆ ಮತ್ತು ಅತೀ ವೇಗವಾಗಿ ವಾಹನ ಚಲಿಸುವುದು, ಹೆಲ್ಮೆಟ್ ಧರಿಸದೆ ಇರುವುದು. ಮದ್ಯಪಾನ ಸೇವನೆ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸಿದರೆ ಅವರ ಪೋಷಕರಿಗೆ ₹25 ಸಾವಿರ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಅಪಘಾತದಲ್ಲಿ ಕೂಲಿ ಕಾರ್ಮಿಕರು ಮೃತಪಟ್ಟರೆ ಮತ್ತು ಗಾಯಗೊಂಡರೆ ಕಾನೂನು ಬದ್ಧವಾಗಿ ₹10 ಲಕ್ಷಕ್ಕೂ ಹೆಚ್ಚು ಪರಿಹಾರ ಸಿಗುವ ಅವಕಾಶವಿದ್ದರೂ ನಿಯಮ ಪಾಲನೆ ಮಾಡಿ ಜೀವ ಉಳಿಸಲು ಮೊದಲ ಆದ್ಯತೆ ನೀಡಿ ಎಂದು ಹೇಳಿದರು.ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಮಂಜುನಾಥ ಮಾತನಾಡಿ, ಪೊಲೀಸ್ ಇಲಾಖೆಯಿಂದ ರಸ್ತೆ ಸುರಕ್ಷತಾ ಸಪ್ತಾಹವನ್ನು ಜ.1ರಿಂದ ಜ.31ರವರೆಗೆ ಎಲ್ಲ ಪ್ರೌಢ ಶಾಲೆಗಳಲ್ಲಿ ಮತ್ತು ಫ್ಯಾಕ್ಟರಿಗಳಲ್ಲಿ ಈ ಕಾರ‍್ಯಕ್ರವನ್ನು ಆಯೋಜಿಸಲಾಗಿದೆ. ರಸ್ತೆ ಸುರಕ್ಷತಾ ಕಾನೂನು ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಪ್ರತಿ ವರ್ಷ 1.5 ಲಕ್ಷಕ್ಕಿಂತ ಹೆಚ್ಚು ಅಪಘಾತದಿಂದ ಮೃತಪಟ್ಟಿದ್ದಾರೆ. ಎಲ್ಲರೂ ಕಡ್ಡಾಯವಾಗಿ ಕಾನೂನು ನಿಯಮಗಳನ್ನು ಪಾಲನೆ ಮಾಡಬೇಕು. ಫೆ.1ರಿಂದ ಫೆ.31ರವರೆಗೆ ನ್ಯಾಯಾಂಗ, ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆಯಿಂದ ನಗರದ ಪ್ರಮುಖ ವೃತ್ತಗಳಲ್ಲಿ ನಿಯಮಗಳನ್ನು ಪಾಲನೆ ಮಾಡದವರ ವಾಹನಗಳ ಸವಾರರಿಗೆ ದಂಡವನ್ನು ವಿಧಿಸಲಾಗುತ್ತದೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ದಾಮೋದರ್ ಮಾತನಾಡಿ, ಮನುಷ್ಯನ ಜೀವ ಅತ್ಯಾಮೂಲ್ಯವಾದದ್ದು. ಆ ಜೀವವನ್ನು ಯಾವುದೇ ರೀತಿಯ ಅಪಘಾತಕ್ಕೆ ಒಳಗಾಗದೇ ನಿಮ್ಮ ಜೀವವನ್ನು ಕೊನೆವರೆಗೂ ನಿಮ್ಮ ಕುಟುಂಬದ ಜೊತೆಗೆ ನಡೆಸಲು ಕಾನೂನು ನಿಯಮಗಳ ಪಾಲನೆ ಮಾಡಬೇಕು. ಸವಾರರು ಚಾಲನೆ ಮಾಡುವಾಗ ಮೊಬೈಲ್ ಫೋನ್‌ನಲ್ಲಿ ಮಾತನಾಡುವುದರಿಂದ ಭೀಕರ ಅಪಘಾತಗಳು ಸಂಭವಿಸುತ್ತದೆ. ಟ್ರಾಫಿಕ್ ಸಿಗ್ನಲ್‌ಗಳು, ರಸ್ತೆ ಬದಿಯ ಸೂಚನಾ ಫಲಕಗಳು ಮತ್ತು ಬೈಕ್‌ಗಳ ಸಿಗ್ನಲ್‌ಗಳನ್ನು ಸರಿಯಾಗಿ ಗಮನಿಸಿ ವಾಹನಗಳನ್ನು ಚಲಿಸಬೇಕು ಎಂದು ಮಾಹಿತಿ ನೀಡಿದರು.ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಮರೆವಣಿಗೆ ಆರಂಭಗೊಂಡು ಕೇಂದ್ರ ಬಸ್ ನಿಲ್ದಾಣ, ಡಾ.ಪುನೀತ್ ರಾಜಕುಮಾರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ವಿಜಯನಗರ ಕಾಲೇಜು ಮುಂಭಾಗದಿಂದ ಜಿಲ್ಲಾ ಒಳ ಕ್ರೀಡಾಂಗಣದವರೆಗೆ ಭವ್ಯ ಮೆರೆವಣಿಗೆ ನಡೆಸಲಾಯಿತ್ತು.
ಈ ವೇಳೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ.ಪಿ.ಕುಮಾರ ಸ್ವಾಮಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಎನ್., ಅಪರ ಹಿರಿಯ ಸಿವಿಲ್ ನ್ಯಾಯಾಧೀಶೆ ರೂಪಾ ಕೆ., ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಪ್ರಶಾಂತ್ ನಾಗಲಾಪುರ್, 2ನೇ ಅಪರ ಸಿವಿಲ್ ನ್ಯಾಯಧೀಶರು ಶ್ರುತಿ ತೇಲಿ, ಜಿಲ್ಲಾ ಕಾರ್ಮಿಕ ಅಧಿಕಾರಿಗಳಾದ ಸೂರಪ್ಪ ದೊಂಬರ್ ಮತ್ತೂರು, ನಗರಸಭೆಯ ಪೌರಾಯುಕ್ತರಾದ ಶಿವಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಪ್ರಹ್ಲಾದ್, ಡಿಡಿಪಿಯು ನಾಗರಾಜ್ ಹವಾಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶೇಕ್ರಪ್ಪ ಹೊರಪೇಟೆ, ತಾಲೂಕು ವೈದ್ಯಾಧಿಕಾರಿಗಳಾದ ಡಾ.ವಿನೋದ್ ಕುಮಾರ್ ಭಾಗವಹಿಸಿದ್ದರು.ಕ್ಯಾಪ್ಶನ್.... ಹೊಸಪೇಟೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಎಂ.ರಾಜಶೇಖರ್ ಮಾತನಾಡಿದರು.