ಸಂಚಾರ ನಿಯಮ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಿ

| Published : Dec 30 2023, 01:15 AM IST

ಸಂಚಾರ ನಿಯಮ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ವಾಹನ ಸವಾರರು ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಬೇಡಿ. ಸವಾರರು ಕಡ್ಡಾಯವಾಗಿ ವಾಹನ ಪರವಾನಗಿ ಪಡೆದಿರಬೇಕು.

ಹರಪನಹಳ್ಳಿ: ಪ್ರತಿಯೊಬ್ಬರೂ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲಿಸಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಇಲ್ಲಿಯ ಡಿವೈಎಸ್‌ಪಿ ವೆಂಕಟಪ್ಪ ನಾಯಕ ಹೇಳಿದರು.

ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಗುರುವಾರ ಹೆಲ್ಮೆಟ್ ಕಡ್ಡಾಯ ಜಾಗೃತಿಗೆ ಚಾಲನೆ ನೀಡಿ ಮಾತನಾಡಿದರು.

ಹರಪನಹಳ್ಳಿ ಉಪವಿಭಾಗ ವ್ಯಾಪ್ತಿಯಲ್ಲಿರುವ ಹರಪನಹಳ್ಳಿ, ಚಿಗಟೇರಿ, ಹಲುವಾಗಲು, ಅರಸೀಕೆರೆ, ಹಿರೇಹಡಗಲಿ, ಹೂವಿನಹಡಗಲಿ, ಇಟ್ಟಿಗಿ ಸೇರಿದಂತೆ ಒಟ್ಟು 7 ಕಡೆಗಳಲ್ಲಿ ಏಕಕಾಲಕ್ಕೆ ಹೆಲ್ಮೆಟ್ ಜಾಗೃತಿಯನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ವಾಹನ ಸವಾರರು ಕುಡಿದ ಅಮಲಿನಲ್ಲಿ ವಾಹನ ಚಾಲನೆ ಮಾಡಬೇಡಿ. ಸವಾರರು ಕಡ್ಡಾಯವಾಗಿ ವಾಹನ ಪರವಾನಗಿ ಪಡೆದಿರಬೇಕು. ಜತೆಗೆ ವಿಮೆ ಹೊಂದಿರಬೇಕು ಹಾಗೂ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್‌ನ್ನು ಧರಿಸಿ ಚಲಾಯಿಸಬೇಕು. ಇದರಿಂದ ರಸ್ತೆ ಅಪಘಾತದಲ್ಲಿ ಜೀವ ಉಳಿಯುತ್ತದೆ. ಇದರಿಂದ ನಿಮ್ಮ ಕುಟುಂಬ ನೆಮ್ಮದಿಯಾಗಿರುತ್ತದೆ ಎಂದರು.

ಪೊಲೀಸ್‌ ವೃತ್ತ ನಿರೀಕ್ಷಕ ನಾಗರಾಜ ಎಂ. ಕಮ್ಮಾರ ಮಾತನಾಡಿ, ಅಪರಾಧ ತಡೆ ಮಾಸಾಚರಣೆಯನ್ನು ಡಿಸೆಂಬರ್ ತಿಂಗಳಲ್ಲಿ ನಡೆಸಲಾಗುತ್ತಿದ್ದು, ಈಗಾಗಲೇ ಶಾಲಾ- ಕಾಲೇಜುಗಳಲ್ಲಿ ವಿವಿಧ ರೀತಿಯ ಅಪರಾಧಗಳ ತಡೆ ಕುರಿತು ಜಾಗೃತಿ ಮೂಡಿಸಲಾಗಿದೆ. ಅದೇ ರೀತಿ ಸಂಚಾರಿ ಅಪರಾಧಗಳ ತಡೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ನಂತರ ಪೊಲೀಸ್ ಠಾಣೆಯಿಂದ ಐ.ಬಿ. ವೃತ್ತದ ಮಾರ್ಗವಾಗಿ ಹೊಸಪೇಟೆ, ಹರಿಹರ ರಸ್ತೆ, ಕೊಟ್ಟೂರು ಬೈಪಾಸ್, ಕೊಟ್ಟೂರು ರಸ್ತೆ ವೃತ್ತ, ಇಜಾರಿ ಶಿರಸಪ್ಪ ವೃತ್ತ, ತೆಗ್ಗಿನಮಠ, ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ತಮ್ಮ ದ್ವಿಚಕ್ರ ವಾಹನದೊಂದಿಗೆ ಹೆಲ್ಮೆಟ್ ಧರಿಸಿ, ವಿವಿಧ ಅಪರಾಧ ತಡೆಯುವ ಕುರಿತು ಭಿತ್ತಿಪತ್ರಗಳನ್ನು ಹಿಡಿದು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಪಿಎಸ್‌ಐ ಶಂಭುಲಿಂಗ ಸಿ. ಹಿರೇಮಠ, ವಸಂತಪ್ಪ, ಎಎಸ್‌ಐ ನಿಂಗಪ್ಪ, ಹನುಮಂತಪ್ಪ, ಎಂ. ಕುಮಾರ, ಸೇರಿದಂತೆ ಪೊಲೀಸ್ ಸಿಬ್ಬಂದಿ ಇದ್ದರು.