ಸಾರಾಂಶ
ಕುಶಾಲನಗರದ ದಾರುಲ್ ಉಲೂಂ ಫಾಳಿಲಾ ಮಹಿಳಾ ಶರೀಯತ್ ಕಾಲೇಜಿನ ಐದನೇ ವಾರ್ಷಿಕ ಹಾಗೂ ಮೂರನೇ ಪದವಿ ಪ್ರದಾನ ಸಮ್ಮೇಳನ ಉದ್ಘಾಟಿಸಿ ಸಮಸ್ತ ಕೇರಳ ಕೇಂದ್ರ ಮುಶಾವರ ಸಮಿತಿ ಸದಸ್ಯ ಎಂ. ಅಬ್ದುಲ್ಲಾ ಫೈಝಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಹೆಣ್ಣು ಮಕ್ಕಳು ಸೇರಿದಂತೆ ಪ್ರತಿಯೊಬ್ಬರಿಗೆ ಧಾರ್ಮಿಕ ಹಾಗೂ ಸಾಮಾಜಿಕ ಶಿಕ್ಷಣ ಕಡ್ಡಾಯವಾಗಿ ನೀಡುವುದು ಪೋಷಕರ ಪ್ರಮುಖ ಜವಾಬ್ದಾರಿ ಎಂದು ಸಮಸ್ತ ಕೇರಳ ಕೇಂದ್ರ ಮುಶಾವರ ಸಮಿತಿ ಸದಸ್ಯ ಎಂ. ಅಬ್ದುಲ್ಲಾ ಫೈಝಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಕುಶಾಲನಗರದ ದಾರುಲ್ ಉಲೂಂ ಫಾಳಿಲಾ ಮಹಿಳಾ ಶರೀಯತ್ ಕಾಲೇಜಿನ ಐದನೇ ವಾರ್ಷಿಕ ಹಾಗೂ ಮೂರನೇ ಪದವಿ ಪ್ರದಾನ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ನೀಡುವ ಮೂಲಕ ಯುವ ಪೀಳಿಗೆಯನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಮಕ್ಕಳಿಗೆ ಶಿಕ್ಷಣ ನೀಡುವುದರಲ್ಲಿ ಪೋಷಕರು ಲೋಪ ದೋಷ ಮಾಡಬಾರದು ಎಂದ ಅವರು, ಪೋಷಕರು ತಪ್ಪು ಮಾಡಿದಲ್ಲಿ ಇಡೀ ಸಮಾಜವೇ ಏರುಪೇರು ಆಗುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದರು.ಪ್ರಾಸ್ತಾವಿಕ ಮಾತನಾಡಿದ ದಾರುಲ್ ಉಲೂಂ ಮದರಸ ಮತ್ತು ಫಾಳಿಲಾ ಮಹಿಳಾ ಕಾಲೇಜು ಪ್ರಾಂಶುಪಾಲ ಎಂ. ತಮ್ಲೀಕ್ ದಾರಿಮಿ, ಹೆಣ್ಣು ಮಗಳೊಬ್ಬಳು ಶಿಕ್ಷಣ ಪಡೆದಲ್ಲಿ ಇಡೀ ಕುಟುಂಬದ ಅಭಿವೃದ್ಧಿ ಮತ್ತು ಏಳಿಗೆ ಸಾಧ್ಯ ಎಂದರು.
ಕೊಡಗು ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಕೆ.ಎ.ಯಾಕೂಬ್ ಮಾತನಾಡಿ, ಕಾರ್ಯಕ್ರಮಕ್ಕೆ ಶುಭ ಕೋರಿದರು.ಕಾರ್ಯಕ್ರಮಕ್ಕೂ ಮುನ್ನ ಮಹಿಳಾಸಂಗಮ ಕಾರ್ಯಾಗಾರ ನಡೆಯಿತು. ಹಿಲಾಲ್ ಮಸೀದಿಯ ಧರ್ಮಗುರು ನಾಸಿರ್ ಫೈಝಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಧರ್ಮ ಗುರುಗಳಿಂದ ಧಾರ್ಮಿಕ ಪಾರಾಯಣ ನಡೆಯಿತು. 22 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಲಾಯಿತು.
ಹಿಲಾಲ್ ಮಸೀದಿ ಕಾರ್ಯದರ್ಶಿ ಹಾಗೂ ದಾರುಲ್ ಉಲೂಂ ಮದರಸ ಮತ್ತು ಕಾಲೇಜಿನ ಪ್ರಮುಖ ಅಬ್ದುಲ್ ಮಜೀದ್ ಮಾತನಾಡಿ, ಸಮುದಾಯದ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಪೋಷಕರ ಆದ್ಯ ಕರ್ತವ್ಯ ಎಂದರು.ಹಿಲಾಲ್ ಮಸೀದಿ ಮತ್ತು ಮದರಸ ಹಾಗೂ ಕಾಲೇಜಿನ ಅಧ್ಯಕ್ಷ ಎಂಎಂಎಸ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೀಫ್ ಫೈಝಿ ಸಂದೇಶ ನುಡಿಗಳನಾಡಿದರು.
ಹಿಲಾಲ್ ಮಸೀದಿ ಮತ್ತು ಮದರಸ ಉಪಾಧ್ಯಕ್ಷ ಹಂಸ ಹಾಜಿ, ಶನಿವಾರ ಸಂತೆ ಧರ್ಮ ಗುರು ಸೂಫಿ ದಾರಿಮಿ, ಪ್ರಮುಖರಾದ ಬಿ ರಫೀಕ್, ಮಾಜಿ ಅಧ್ಯಕ್ಷರಾದ ಬಿ ಎಚ್ ಅಹಮದ್ ಹಾಜಿ, ಎ ಎ ಸಲೀಂ, ಉನೈಸ್ ಫೈಝಿ , ರಾಝಿಖ್ ರೆಹ್ಮನಿ ಮತ್ತಿತರರಿದ್ದರು.