ಸಾರಾಂಶ
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಕಾನೂನಿನ ಬಗೆಗಿನ ಸಾಮಾನ್ಯ ಜ್ಞಾನ ಪ್ರತಿಯೊಬ್ಬರಿಗೂ ಅತ್ಯಗತ್ಯ. ಕಾನೂನು ಬಗ್ಗೆ ಅಜ್ಞಾನ ಅಕ್ಷಮ್ಯ ಅಪರಾಧ ಎಂದು ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಬಿ.ಎನ್.ರಮೇಶ್ ಬಾಬು ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಜಿ ಎಸ್ ಎಸ್ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ,ಸಮಾಜಶಾಸ್ತ್ರ ವಿಭಾಗ ಹಾಗೂ ಮಹಿಳಾ ಸಬಲೀಕರಣ ಕೋಶ, ಯುವ ರೆಡ್ ಕ್ರಾಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಕಾನೂನು ದಿನಾಚರಣೆ ಮತ್ತು ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಮಾಜದಲ್ಲಿ ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕಲು ಕಾನೂನು ಅಗತ್ಯವಾಗಿದ್ದು, ಕಾನೂನಿನ ಮೂಲಕ ಪ್ರತಿಯೊಬ್ಬರ ನೆಮ್ಮದಿಗೆ ಹಕ್ಕು ಹಾಗೂ ಜವಾಬ್ದಾರಿಯನ್ನು ನೀಡಲಾಗಿದೆ ಸಮರ್ಪಕವಾಗಿ ಪಾಲಿಸಬೇಕಾಗಿರುವುದು ಎಲ್ಲರ ಕರ್ತವ್ಯ ಎಂದ ಅವರು ಕಾನೂನು ಬಗೆಗಿನ ಸಾಮಾನ್ಯ ಜ್ಞಾನವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಕಾನೂನಿನ ಬಗ್ಗೆ ಪ್ರಾಥಮಿಕ ಅಜ್ಞಾನ ಅಕ್ಷಮ್ಯ ಅಪರಾಧ ಎಂದು ತಿಳಿಸಿದರು.ಪ್ರತಿ ವರ್ಷ ನ.9ರಂದು ರಾಷ್ಟ್ರೀಯ ಕಾನೂನು ದಿನಾಚರಣೆಯಾಗಿ ಆಚರಿಸಲಾಗುತ್ತದೆ.1987ರ ಕಾಯ್ದೆ ಅನುಷ್ಠಾನದ ನೆನಪಿಗಾಗಿ ಹಾಗೂ ದುರ್ಬಲ ವರ್ಗದವರಿಗೆ ಉಚಿತ ಕಾನೂನು ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಆಚರಿಸಲಾಗುತ್ತದೆ ಎಂದ ಅವರು, ನ.26 ರಂದು ಭಾರತದ ಸಂವಿಧಾನವನ್ನು ಅಂಗೀಕರಿಸಿದ ಸಂದರ್ಭದ ಸವಿನೆನಪಿಗಾಗಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯನ್ನು ಗೌರವಿಸಲು ಸಂವಿಧಾನ ದಿನ ಅಥವಾ ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ನಶಾ ಮುಕ್ತ ಭಾರತ ಅಭಿಯಾನ (ಎನ್‌ಎಂಬಿಎ) ಭಾರತ ಸರ್ಕಾರದ ಒಂದು ರಾಷ್ಟ್ರವ್ಯಾಪಿ ಉಪಕ್ರಮವಾಗಿದ್ದು, ಮಾದಕ ದ್ರವ್ಯಗಳ ಬಳಕೆಯನ್ನು ತಡೆಗಟ್ಟಲು ಮತ್ತು ವ್ಯಸನಿಗಳಿಗೆ ಪುನರ್ವಸತಿ ಒದಗಿಸಲು 2020ರಲ್ಲಿ ಅಭಿಯಾನ ಆರಂಭಿಸಲಾಗಿದೆ. ಅಭಿಯಾನದ ಅಂಗವಾಗಿ ಮಾದಕ ದ್ರವ್ಯದ ಬಗ್ಗೆ ಜಾಗೃತಿ ಮೂಡಿಸುವುದು, ತಡೆಗಟ್ಟುವಿಕೆ ಮತ್ತು ಸಮುದಾಯದ ಒಳಗೊಳ್ಳುವಿಕೆಯನ್ನು ಕೇಂದ್ರೀಕರಿಸುತ್ತದೆ ಎಂದ ಅವರು, ಆರಂಭದಲ್ಲಿ 272 ದುರ್ಬಲ ಜಿಲ್ಲೆಗಳಲ್ಲಿ ಪ್ರಾರಂಭವಾಗಿ ಇದೀಗ ದೇಶಾದ್ಯಂತ ವಿಸ್ತರಿಸಲಾಗಿದ್ದು ಯುವಜನರನ್ನು ಗುರಿಯಾಗಿರಿಸಿಕೊಂಡಿದೆ. ದುಶ್ಚಟಗಳಿಗೆ ದಾಸರಾಗಿ ಕಿರಿಯ ವಯಸ್ಸಿನಲ್ಲಿ ಆರೋಗ್ಯ ಹಾಳುಮಾಡಿಕೊಳ್ಳುವ ಮೂಲಕ ಸಮಾಜ ದುರ್ಬಲಗೊಳ್ಳಲು ಕಾರಣವಾಗಿರುವ ಮಾದಕ ದ್ರವ್ಯವನ್ನು ಕಟ್ಟುನಿಟ್ಟಾಗಿ ತಡೆಗಟ್ಟುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.ಕಾಲೇಜಿನ ಪ್ರಾಚಾರ್ಯ ಡಾ.ಬಿ ಜಿ ಚನ್ನಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಸ್.ರಶ್ಮಿ, ತಾ.ವಕೀಲರ ಸಂಘದ ಅಧ್ಯಕ್ಷ ಉಮೇಶ್, ರಾಜುನಾಯ್ಕ ತಾಪಂ ಅಧಿಕಾರಿ ಹುಚ್ಚುರಾಯಪ್ಪ ಮತ್ತಿತರರು ಹಾಜರಿದ್ದರು.
ಪ್ರಾಸ್ತಾವಿಕವಾಗಿ ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ರೇಷ್ಮಾ ಮಾತನಾಡಿದರು. ಯಶೋಧ ಪ್ರತಿಜ್ಞಾ ವಿಧಿ ಬೋಧಿಸಿದರು. ಮಹಿಳಾ ಸಬಲೀಕರಣ ಕೋಶದ ಸಂಚಾಲಕರಾದ ರೋಹಿಣಿ ಸ್ವಾಗತಿಸಿ, ರಾಘವೇಂದ್ರ ನಿರೂಪಿಸಿ ಸುಮಾ ವಂದಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))