ತಾಲೂಕಿನ ಚಿಬ್ಬಲಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಪಕ್ಷಿ ವೀಕ್ಷಣಾ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.
ಚಿಬ್ಬಲಗೇರಿ ಸರಕಾರಿ ಪ್ರೌಢಶಾಲೆಯಲ್ಲಿ ಪಕ್ಷಿ ವೀಕ್ಷಣಾ ಕಾರ್ಯಾಗಾರ
ಕನ್ನಡಪ್ರಭ ವಾರ್ತೆ ಹಳಿಯಾಳತಾಲೂಕಿನ ಚಿಬ್ಬಲಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಪಕ್ಷಿ ವೀಕ್ಷಣಾ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.
ಪ್ರಕೃತಿಯೊಂದಿಗೆ ಮಕ್ಕಳನ್ನು ಬೆಸೆಯುವ ಹಾಗೂ ಪಕ್ಷಿ ಸಂರಕ್ಷಣೆಯು ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಾಗಾರ ಆಯೋಜಿಸಲಾಗಿತ್ತು.ಕೈಗಾದ ಪಕ್ಷಿ ವೀಕ್ಷಕರಾದ ವಿ.ಜಿ. ಮೋಹನದಾಸ, ಮಹಾಂತೇಶ್ ಓಸಿಮಠ ಹಾಗೂ ಸೂರಜ ಪ್ರಕಾಶ್ ಜೆ.ಬಿ. ಸಹಯೋಗ ಮತ್ತು ಮಾರ್ಗದರ್ಶನದಲ್ಲಿ ನಡೆದ ಈ ವಿಶೇಷ ಕಾರ್ಯಾಗಾರವು ವಿದ್ಯಾರ್ಥಿಗಳಿಗೆ ಅಪೂರ್ವ ಕಲಿಕಾ ಅನುಭವ ನೀಡಿತು.
ಪಕ್ಷಿ ವೀಕ್ಷಣಾ ಕಾರ್ಯಾಗಾರದಲ್ಲಿ 45 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಾಗಾರದಲ್ಲಿ ಸುಮಾರು 55ಕ್ಕೂ ಹೆಚ್ಚು ಬಗೆಯ ಪಕ್ಷಿಗಳನ್ನು ಗುರುತಿಸಿ ವಿದ್ಯಾರ್ಥಿಗಳು ಸಂತಸಪಟ್ಟರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಈ ಪಕ್ಷಿ ವೀಕ್ಷಣೆಯಲ್ಲಿ ಮಕ್ಕಳು ಪಕ್ಷಿಗಳ ಹಾರಾಟದ ವಿಧಾನ, ಆಹಾರ ಹುಡುಕುವ ರೀತಿ, ಗೂಡು ಕಟ್ಟುವ ಪ್ರದೇಶ ಹಾಗೂ ಅವುಗಳ ಸಹಜ ವರ್ತನೆಗಳನ್ನು ಗಮನಿಸುವ ಅವಕಾಶ ಪಡೆದರು.ಮಧುರ ಕಂಠ, ಬೂದು ಹಾರ್ನಬಿಲ್ಲ, ಕಂಚು ಕೋಟರ್, ವಿವಿಧ ಬಗೆಯ ಗುಬ್ಬಿಗಳು, ಸಿಪಾಯಿ ಹಕ್ಕಿಗಳು, ತುರಾಯಿ ಪನ್ನಾರಿ, ಬೂದುಬಕ, ಬಿಳಿ ಹುಬ್ಬಿನ ಕುಂಡೆ ಕುಣಸಾ, ಚುಕ್ಕೆ ಬೆಳವ ಸೇರಿ ಅನೇಕ ವೈವಿಧ್ಯಮಯ ಪಕ್ಷಿಗಳನ್ನು ವಿದ್ಯಾರ್ಥಿಗಳು ಕಣ್ತುಂಬಿಕೊಂಡರು.ಪಕ್ಷಿಗಳ ವೀಕ್ಷಣೆಯ ನಂತರ ಶಾಲೆಯಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಜಿ.ಮೋಹನದಾಸ ವಿವಿಧ ಪಕ್ಷಿಗಳ ಕುರಿತು ಮಾಹಿತಿ ನೀಡಿದರು. ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಪಕ್ಷಿಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಪಕ್ಷಿ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕಾದ ಅಗತ್ಯವಿದೆ ಎಂದರು.
ದೂರದರ್ಶಕದ ಮೂಲಕ ದೂರದಲ್ಲಿರುವ ಪಕ್ಷಿಗಳನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಯಿತು. ಈ ಕಾರ್ಯಾಗಾರದ ಕೊನೆಯಲ್ಲಿ ಪಕ್ಷಿ ಸಂರಕ್ಷಣೆಯ ಕುರಿತು ಸಂಕಲ್ಪವನ್ನು ವಿದ್ಯಾರ್ಥಿಗಳು ಕೈಗೊಂಡರು.ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ ಸಂಸ್ಥೆಯ ಸಹಯೋಗದಲ್ಲಿ ಕೈಗೊಂಡಿರುವ ಹಕ್ಕಿಯ ಹಾಡು ಯೋಜನೆಯ ಅಂಗವಾಗಿ ನಡೆಯುತ್ತಿರುವ ಪಶ್ಚಿಮ ಘಟ್ಟದ ಹಕ್ಕಿಗಳ ಜನಪದ ಸಂಶೋಧನಾ ಯಾತ್ರೆ ಯೋಜನೆಯಡಿ ಈ ಕಾರ್ಯಾಗಾರವನ್ನು ವಿಜ್ಞಾನ ಶಿಕ್ಷಕ ಸಿದ್ದಪ್ಪ ಬಿರಾದಾರ ಆಯೋಜಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಧಾನಟ್ಟಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ವಿಠ್ಠಲ ಕೊರ್ವೆಕರ ಆಗಮಿಸಿದ್ದರು.