ಟ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಹಾಗೂ ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮಾಡುವುದು ಹಾಗೂ ಅತಿವೇಗವಾಗಿ ವಾಹನ ಚಾಲನೆ ಮಾಡುವುದು ಒಳ್ಳೆಯದಲ್ಲ.
ಚಿಂತಾಮಣಿ: ಕೆಲವೊಮ್ಮೆ ನಾವು ಜಾಗರೂಕತೆಯಿಂದ ವಾಹನ ಚಾಲನೆ ಮಾಡುತ್ತಿದ್ದರೂ ನಮ್ಮ ಮುಂಬದಿ ಹಾಗೂ ಹಿಂಬದಿಯಿಂದ ಬರುವ ವಾಹನ ಸವಾರರ ಅಡ್ಡಾದಿಡ್ಡಿ ಚಾಲನೆಯಿಂದಲೂ ಅಪಘಾತಗಳಾಗುತ್ತವೆ. ಅದನ್ನು ತಪ್ಪಿಸಬೇಕಾದರೆ ಪ್ರತಿಯೊಬ್ಬರೂ ರಸ್ತೆ ನಿಯಮಗಳು ಅನುಸರಿಸಿದಾಗ ಹಾಗೂ ಸ್ವಚ್ಛ ಮನಸ್ಥಿತಿಯಿಂದ ವಾಹನ ಚಾಲನೆ ಮಾಡಿದಾಗ ಮಾತ್ರ ಅಪಘಾತಗಳನ್ನು ಕಡಿಮೆ ಮಾಡಬಹುದೆಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಆರ್. ಶಕುಂತಲಾ ನುಡಿದರು.
ನಗರದ ವಿಕ್ರಮ್ ಸಿಬಿಎಸ್‌ಇ ಕೇಂದ್ರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಸಾರಿಗೆ ಇಲಾಖೆ, ವಕೀಲರ ಸಂಘ ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಚಿಂತಾಮಣಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆಯಲ್ಲಿ ಮಾತನಾಡಿ, ಟ್ರಿಬಲ್ ರೈಡಿಂಗ್, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಹಾಗೂ ಅಪ್ರಾಪ್ತ ವಯಸ್ಸಿನಲ್ಲಿ ವಾಹನ ಚಾಲನೆ ಮಾಡುವುದು ಹಾಗೂ ಅತಿವೇಗವಾಗಿ ವಾಹನ ಚಾಲನೆ ಮಾಡುವುದು ಒಳ್ಳೆಯದಲ್ಲ. ಇದರಿಂದ ನಿಮ್ಮನ್ನು ನಂಬಿರುವ ಕುಟುಂಬಗಳಿಗೆ ತೊಂದರೆಯಾಗುತ್ತದೆ ಎಂದು ಕಿವಿಮಾತು ಹೇಳಿದರು.ಸಹಾಯಕ ಪ್ರಾದೇಶಿಕ ಅಧಿಕಾರಿ ಬೈರಾರೆಡ್ಡಿ ಮಾತನಾಡಿ, ರಸ್ತೆ ಮಾಸಾಚರಣೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 12 ಸಾವಿರ ಅಪಘಾತಗಳು ಪ್ರತಿವರ್ಷ ನಡೆಯುತ್ತದೆ ಅದರಲ್ಲಿ ನೂರಾರು ಮಂದಿ ಸಾವನ್ನಪ್ಪುತ್ತಿದ್ದು ಇದನ್ನು ಕಡಿವಾಣ ಹಾಕಬೇಕಾದರೆ ವಾಹನ ಚಾಲನೆ ಮಾಡುವಾಗ ರಸ್ತೆ ನಿಯಮಗಳನ್ನು ಪಾಲಿಸುವುದು ಮುಖ್ಯವೆಂದರು.
ಹಿರಿಯ ಮೋಟಾರು ವಾಹನ ಇನ್‌ಸ್ಪೆಕ್ಟರ್ ದಾಸೇಗೌಡ ಮಾತನಾಡಿ, ಭಾರತದಲ್ಲಿ ಅತ್ಯಂತ ಹೆಚ್ಚು ಸಾವುಗಳು ಸಂಭವಿಸುತ್ತಿರುವುದು ಅಪಘಾತಗಳಿಂದಾಗಿ. ಅವುಗಳನ್ನು ತಪ್ಪಿಸುವ ಉದ್ದೇಶದಿಂದ ರಾಷ್ಟ್ರೀಯ ಮಟ್ಟದ ಒಂದು ಆಚರಣೆಯೇ 37ನೇ ರಸ್ತೆ ಸುರಕ್ಷತಾ ಮಾಸಾಚರಣೆಯಾಗಿದೆ ಎಂದರು.ಗ್ರಾಮಾಂತರ ಆರಕ್ಷಕ ನಿರೀಕ್ಷಕ ಶಿವರಾಜ್, ಬಿಇಒ ಉಮಾದೇವಿ, ಆರಕ್ಷಕ ನಿರೀಕ್ಷಕಿ ಪದ್ಮ, ಪ್ರಾಂಶುಪಾಲೆ ಭುವನೇಶ್ವರಿ ಮಾತನಾಡಿದರು. ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶರಾದ ಹರ್ಷಿತಾ, ಅಧ್ಯಕ್ಷ ಸಿ.ಎನ್. ನರಸಿಂಹರೆಡ್ಡಿ, ಖಜಾಂಚಿ ಡಾ.ಎನ್.ಆರ್.ವಿಕ್ರಮ್, ಸಿಇಒ ಪ್ರಿಯಾಂಕವಿಕ್ರಮ್, ಬಿಇಒ ಉಮಾದೇವಿ, ಆರಕ್ಷಕ ನಿರೀಕ್ಷಕಿ ಪದ್ಮ, ವಕೀಲ ಸಂಘದ ಅಧ್ಯಕ್ಷ ಬಿ. ಶ್ರೀನಿವಾಸ್, ಕಾರ್ಯದರ್ಶಿ ಆರ್. ಎಸ್.ಶ್ರೀನಾಥ್, ಜಂಟಿ ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಚೌಡಪ್ಪ, ಪ್ಯಾನೆಲ್ ವಕೀಲರು ವಿ.ರಮೇಶ್, ಕೆ.ಎ. ರಮೇಶ್, ವಕೀಲ ಶ್ರೀನಿವಾಸ್, ಪ್ರಾಂಶುಪಾಲೆ ಭುವನೇಶ್ವರಿ ಇದ್ದರು.