ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯವಾಗಿದ್ದು ಇಲ್ಲಿನ ೧೫ನೇ ವಾರ್ಡ್‌ನ ಜನತೆ ಒಗ್ಗಟ್ಟಾಗಿ ವಾರ್ಡ್ ಅಭಿವೃದ್ಧಿಗೆ ನಗರಸಭೆಯ ಜೊತೆ ಕೈಜೋಡಿಸುತ್ತಿರುವುದು ಸಂತಸದ ವಿಷಯ ಎಂದು ಶಾಸಕ ಕೆ.ಷಡಕ್ಷರಿ ತಿಳಿಸಿದರು.ನಗರದ ಕಂಚಾಘಟ್ಟ ಹೊಸ ಬಡಾವಣೆಯ ೧೫ನೇ ವಾರ್ಡ್ ಬಿ.ಆರ್.ವಿ. ಲೇಔಟ್‌ನಲ್ಲಿ ಶ್ರೀ ಸಿದ್ಧಿವಿನಾಯಕ ಸೇವಾ ಸಂಘ ಮತ್ತು ನಾಗರಿಕ ಹಿತ ರಕ್ಷಣಾ ವೇದಿಕೆಯಿಂದ ಆಯೋಜಿಸಲಾಗಿದ್ದ ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸಂಘದ ಹಾಗೂ ವಾರ್ಡ್ ಜನರ ಬೇಡಿಕೆಯಂತೆ ಉದ್ಯಾನವನದಲ್ಲಿ ವಾಕಿಂಗ್ ಪಾಥ್ ನಿರ್ಮಾಣ ಜೊತೆಗೆ ಪ್ರತಿ ವಾರ್ಡ್‌ನಲ್ಲಿಯೂ ಒಂದು ಸಾರ್ವಜನಿಕ ಗ್ರಂಥಾಲಯವನ್ನು ಪ್ರಾರಂಭಿಸಲು ಅನುದಾನ ನೀಡಲಾಗುವುದು. ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಸುವ ಈಚನೂರು ಕೆರೆ ಬಹಳ ಹಿಂದೆ ರೂಪಿಸಿರುವ ಯೋಜನೆ. ನಗರದ ಜನಸಂಖ್ಯೆ ಒಂದು ಲಕ್ಷ ದಾಟುತ್ತಿದ್ದು ಈ ಜನಸಂಖ್ಯೆಗೆ ಹಾಗೂ ಮುಂದೆ ಹೆಚ್ಚಾಗುವ ನಗರಪ್ರದೇಶದ ವಿಸ್ತಾರವನ್ನು ಗಮನದಲ್ಲಿಟ್ಟುಕೊಂಡು ನಾವು ಕುಡಿಯುವ ನೀರಿಗೆ ಹೊಸ ಯೋಜನೆಯನ್ನು ರೂಪಿಸಬೇಕಿದೆ. ನಾನು ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರೆಸಿದ್ದು ಶೀಘ್ರದಲ್ಲಿಯೇ ನಗರಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಜಾರಿ ಮಾಡುತ್ತೇನೆ ಎಂದರು. ನಗರಸಭಾ ಅಧ್ಯಕ್ಷೆ ಯಮುನಾ ಧರಣೇಶ್ ಮಾತನಾಡಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನಮ್ಮ ಕರ್ತವ್ಯ. ಆದರೆ ನಮ್ಮ ಕಾರ್ಯಕ್ಕೆ ನಾಗರೀಕರು ಕೈ ಜೋಡಿಸಿದಾಗ ಮಾತ್ರ ನಗರ ಸ್ವಚ್ಛವಾಗುವುದಕ್ಕೆ ಸಾಧ್ಯ. ನಿಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶ, ಚರಂಡಿ ಸೇರಿದಂತೆ ಪರಿಸರವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳಿ. ಹಸಿ ಕಸ ಹಾಗೂ ಒಣ ಕಸ ಬೇರೆ ಮಾಡಿ ನಗರಸಭೆ ವಾಹನಕ್ಕೇ ನೀಡಿ ಎಲ್ಲೆಂದರಲ್ಲಿ ಕಸ ಎಸೆಯಬಾರದು ಎಂದರು. ಸಿದ್ಧಿವಿನಾಯಕ ಸೇವಾ ಸಂಘದ ಅಧ್ಯಕ್ಷ ಉಮೇಶ್ ಮಾತನಾಡಿ, ನಮ್ಮ ವಾರ್ಡಿನ ಮನೆಗಳಲ್ಲಿ ಕಸ ವಿಂಗಡಣೆ ಆಗುತ್ತಿಲ್ಲ. ಒಣ ಕಸ, ಹಸಿ ಕಸ ವಿಂಗಡಣೆಯಾದರೆ ನಮ್ಮ ಕೆಲಸ ಸುಲಭವಾಗುತ್ತದೆ. ಪರಿಸರ, ಪ್ರಕೃತಿ ಬಹಳ ಮುಖ್ಯ. ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ. ಮರ-ಗಿಡಗಳನ್ನು ಬೆಳೆಸಿದಾಗ, ಮನುಷ್ಯ ಆರೋಗ್ಯಯುತವಾದ ಜೀವನ ನಡೆಸಬಹುದು. ಒಳ್ಳೆಯ ಆರೋಗ್ಯವಂತರಾಗಿ ಇರಬೇಕೆಂದರೆ ಮತ್ತು ಶುದ್ಧವಾದ ಗಾಳಿ ಸಿಗಬೇಕೆಂದರೆ ಮನೆಗೊಂದು ಮರ ಬೆಳೆಸಬೇಕು. ಆದರಿಂದ ನಮ್ಮ ಸಂಘಟನೆಯಿಂದ ಈ ವಾರ್ಡಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಮಾಜಿಕ ಮತ್ತು ಪರಿಸರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇವೆ ಎಂದರು. ಈ ಸಂದರ್ಭದಲ್ಲಿ ಸಂಘದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು. ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಸದಸ್ಯೆ ವಿನುತಾ ತಿಲಕ್, ಪರಿಸರ ಪ್ರೇಮಿ ರೇಣುಕಾರಾಧ್ಯ, ಸಂಘದ ಉಪಾಧ್ಯಕ್ಷ ಪ್ರಕಾಶ್, ಖಜಾಂಚಿ ಕಿರಣ್, ಕಾರ್ಯದರ್ಶಿ ವಾಗೀಶ್, ಗುತ್ತಿಗೆದಾರ ರಾಮಚಂದ್ರಪ್ಪ, ನಾಗರಾಜ್, ತೇಜಮೂರ್ತಿ, ಸಂಘಟನೆಯ ಪದಾಧಿಕಾರಿಗಳು, ನಾಗರೀಕರು ಉಪಸ್ಥಿತರಿದ್ದರು.