ಸಾರಾಂಶ
ಸಿಂಧನೂರಿನ ಸಕ್ರ್ಯೂಟ್ ಹೌಸ್‌ನಲ್ಲಿ ನಡೆದ ಸರ್ವ ಪಕ್ಷಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಸಿಂಧನೂರು
ನಗರದಲ್ಲಿ ಪ್ರಥಮ ಬಾರಿಗೆ ದಸರಾ ಮಹೋತ್ಸವವನ್ನು 9 ದಿನಗಳ ಕಾಲ ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಲಾಗಿದ್ದು, ಇದರ ಯಶಸ್ವಿಗೆ ತಾಲೂಕಿನ ಎಲ್ಲ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ. ಎಲ್ಲರೂ ಒಗ್ಗೂಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಶಾಸಕ ಹಂಪನಗೌಡ ಬಾದರ್ಲಿ ಮನವಿ ಮಾಡಿದರು.ನಗರದ ಸಕ್ರ್ಯೂಟ್ ಹೌಸ್‌ನಲ್ಲಿ ನಡೆದ ಸರ್ವ ಪಕ್ಷಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 4 ರಿಂದ 12 ರವರೆಗೆ ದಸರಾ ಉತ್ಸವವನ್ನು ವಿಭಿನ್ನವಾಗಿ ಆಚರಿಸಲು ಸಕಲ ತಯಾರಿ ನಡೆಸಿದ್ದು, ಮೈಸೂರು ದಸರಾ ಮಾದರಿಯಲ್ಲಿ ಸಿಂಧನೂರಿನಲ್ಲಿ ದಸರಾ ನಡೆಸಿ ಹೊಸ ಸಾಂಸ್ಕೃತಿಕ ಲೋಕವನ್ನು ಸೃಷ್ಠಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.
ಅ.4 ರಂದು ಕಲ್ಯಾಣ ದಸರಾ, 5 ರಂದು ಸಾಂಸ್ಕೃತಿಕ ದಸರಾ, 6 ರಂದು ರೈತ ದಸರಾ, 7 ರಂದು ಮಹಿಳಾ ದಸರಾ, 8 ರಂದು ನೌಕರ ದಸರಾ, 9 ರಂದು ಕ್ರೀಡಾ ದಸರಾ, 10 ರಂದು ಕಲಾ ದಸರಾ, 11 ರಂದು ಯುವ ದಸರಾ, 12 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಅಂದು ಸಂಜೆ ಸಿದ್ದಪರ್ವತ ಅಂಬಾಮಠದ ಅಂಬಾದೇವಿಯ ಮೂರ್ತಿಯನ್ನು ವಿವಿಧ ಕಲಾ ತಂಡಗಳು, ಸ್ತಬ್ಧಚಿತ್ರಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.ದಸರಾ ಹಬ್ಬಕ್ಕೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯನವರಿಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು. ನಾನಾ ಇಲಾಖೆ ಅಧಿಕಾರಿ,ಪಕ್ಷಗಳ ಮುಖಂಡರು ಇದ್ದರು.