ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಸಂವಿಧಾನದ ಆಶಯಗಳಾದ ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಇದರಂತೆ ಪ್ರತಿಯೊಬ್ಬರು ನಡೆದುಕೊಂಡಾಗ ಮಾತ್ರ ಸಂವಿಧಾನ ರಚನೆಯಾಗಿದಕ್ಕೂ ಸಾರ್ಥಕವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಲೋಕೇಶ್ವರ ತಿಳಿಸಿದರು.ನಗರದ ನಗರಸಭೆ ಆವರಣದಲ್ಲಿ ಸೋಮವಾರ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಸಹಯೋಗದೊಂದಿಗೆ ನಡೆದ ಭಾರತದ ಸಂವಿಧಾನದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಸಂವಿಧಾನ ಆಶಯ ಮತ್ತು ಮಹತ್ವಗಳನ್ನು ಸರ್ವರಿಗೂ ತಿಳಿಸುವ ಸಲುವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಭಾರತದ ಸಂವಿಧಾನ ವಿಶ್ವದಲ್ಲಿಯೇ ಬೃಹತ್ ಮತ್ತು ಶ್ರೇಷ್ಠ ಸಂವಿಧಾನವಾಗಿದ್ದು, ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನದ ಅಡಿಯಲ್ಲಿ ಬದುಕು ನಡೆಸಬೇಕು. 75ವರ್ಷಗಳ ಹಿಂದೆ ಭಾರತ ಗುಲಾಮಗಿರಿಯಿಂದ ಹೊರಬಂದ ನಂತರ ಉದ್ಬವಿಸಿದ ಸಮಸ್ಯೆಗಳಲ್ಲಿ ಸಂವಿಧಾನ ರಚನೆಯು ಒಂದು. ಸಂವಿಧಾನ ರಚಿಸಲು ಡಾ.ಬಿ.ಆರ್. ಅಂಬೇಡ್ಕರ್ ಅವರು ಸರಿಯಾದ ವ್ಯಕ್ತಿ ಎಂದು ಕರಡು ರಚನಾ ಸಮಿತಿಯ ಜೇಮ್ಸ್ ಆಗಿ ಸುಮಾರು ೩೮೯ ಸದಸ್ಯರ ಸಹಕಾರದಿಂದ 2ವರ್ಷ 11ತಿಂಗಳು 18 ದಿನಗಳಲ್ಲಿ ಸಂವಿಧಾನವು ರಚನೆಯಾಯಿತು ಎಂದರು.ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ ಉಪನ್ಯಾಸ ನೀಡಿ, ರಾಜಕಾರಣಿಗಳು, ಸರ್ಕಾರಿ ನೌಕರರು, ಯುವಕರು ಮೊದಲು ಸಂವಿಧಾನದ ತತ್ವಗಳನ್ನು ಅಳವಡಿಸಿಕೊಳ್ಳಬೇಕಿದೆ. ಸಂವಿಧಾನದ ರಚನೆ ಬುದ್ಧನ ಕಾಲದಿಂದಲೂ ಆರಂಭವಾಗಿತ್ತು. ಸಮಾನತೆಯ ತತ್ವದ ಮೇಲೆ ಸಂವಿಧಾನ ಬಂದಿದ್ದು ಮೌಢ್ಯ, ಅಂಧಕಾರ, ಅಸ್ಪೃಶ್ಯತೆ, ಜಾತಿಪದ್ಧತಿಯನ್ನು ತೊಡಿದು ಹಾಕಲು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದರು. ಅದಕ್ಕಾಗಿ ಅವರನ್ನು ಜಗತ್ತು ಕಂಡ ತತ್ವಜ್ಞಾನಿ, ದಲಿತ ಸಮಾಜಗಳ ನಾಯಕ, ಹೊಸ ಧರ್ಮ ಪ್ರವರ್ತಕ ಎಂದು ಕರೆಯಲಾಗುತ್ತದೆ. ಶಿಕ್ಷಣ, ಸಂಘನೆ, ಹೋರಾಟ ಅಂಬೇಡ್ಕರ್ ಕೊಟ್ಟ ಕೊಡುಗೆಗಳಾಗಿದ್ದು ಅದರಂತೆ ಜವಾಬ್ದಾರಿ ಅರಿತು ಬದುಕನ್ನು ಪರಿವರ್ತನೆ ಮಾಡಿಕೊಳ್ಳಬೇಕಿದೆ ಎಂದರು.
ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಮಾತನಾಡಿ, ಸ್ವಾತಂತ್ರ್ಯ ಬಂದು 75ವರ್ಷಗಳಾದ ನಂತರ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವಂತಹ ಪರಿಸ್ಥಿತಿ ಬಂದಿದ್ದು ಇದು ನಮ್ಮ ದೌರ್ಭಾಗ್ಯವೇ ಸರಿ. ಈ ಕೆಲಸವನ್ನು ಮೊದಲೆ ಮಾಡಿದ್ದರೆ ದೇಶದ ವ್ಯವಸ್ಥೆ ಈ ರೀತಿ ಇರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಅಧ್ಯಕ್ಷತೆಯನ್ನು ತಹಸೀಲ್ದಾರ್ ಪವನ್‌ಕುಮಾರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಸಪ್ತಾಶ್ರೀ, ಪೌರಾಯುಕ್ತ ವಿಶ್ವೇಶ್ವರಯ್ಯ ಬದರಗಡೆ, ತಾಪಂ ಇಒ ಸುದರ್ಶನ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತ್ರಿವೇಣಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಲಜಾಕ್ಷಮ್ಮ, ಬಿಇಒ ಚಂದ್ರಯ್ಯ, ಸಿಡಿಪಿಒ ಅಶೋಕ್, ಬೆಸ್ಕಾಂ ಎಇಇ ಮನೋಹರ್, ನಗರಸಭೆ ಸದಸ್ಯರಾದ ಸೊಪ್ಪುಗಣೇಶ್, ಮಹೇಶ್, ಹೂರ್‌ಬಾನು, ಎಆರ್‌ಟಿಒ ಸುಧಾಮಣಿ, ಎಪಿಎಂಸಿ ಕಾರ್ಯದರ್ಶಿ ನ್ಯಾಮಗೌಡ, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ದಲಿತ ಮುಖಂಡರಾದ ಕುಪ್ಪಾಳು ರಂಗಸ್ವಾಮಿ, ಪೆದ್ದಿಹಳ್ಳಿ ನರಸಿಂಹಯ್ಯ, ಸುರೇಶ್, ಬಜಗೂರು ಮಂಜುನಾಥ್, ನಾಗತೀಹಳ್ಳಿ ಕೃಷ್ಣಮೂರ್ತಿ, ವೆಂಕಟೇಶ್, ಕಲ್ಲೇಶ್ ಮತ್ತಿತರರಿದ್ದರು.
ಸಮಾರಂಭಕ್ಕೂ ಮುನ್ನ ನಗರದ ಕೋಡಿಸರ್ಕಲ್‌ನಿಂದ ಭಾರತ ಸಂವಿಧಾನ ಜಾಗೃತಿ ಜಾಥಾದ ಸ್ತಬ್ದ ಚಿತ್ರದ ಮೆರವಣಿಗೆಯು ಪೂರ್ಣ ಕುಂಬ ಸ್ವಾಗತದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ಸಂವಿಧಾನ ಜಾಗೃತಿ ಜಾಥಾ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.