ಸಾರಾಂಶ
ಕುಮಟಾ: ತಾಲೂಕಿನ ನಾಲ್ಕು ಪ್ರಮುಖ ಹೆದ್ದಾರಿಗಳನ್ನು ಚತುಷ್ಪಥವಾಗಿ ಅಭಿವೃದ್ಧಿ ಪಡಿಸುವಂತೆ ಸೋಮವಾರ ಅಧಿವೇಶನದಲ್ಲಿ ಶಾಸಕ ದಿನಕರ ಶೆಟ್ಟಿ ಕ್ಷೇತ್ರದ ಪರವಾಗಿ ಸರ್ಕಾರದ ಮುಂದೆ ಪ್ರಮುಖ ಬೇಡಿಕೆ ಮಂಡಿಸಿದ್ದಾರೆ.
ಅಧಿವೇಶನದಲ್ಲಿ ಈ ಕುರಿತು ಚುಕ್ಕೆ ಗುರುತಿನ ಪ್ರಶ್ನೆಯಿಟ್ಟು ಮಾತನಾಡಿದ ಶಾಸಕರು, ಗೋಕರ್ಣ-ವಡ್ಡಿ-ದೇವನಹಳ್ಳಿ ರಾಜ್ಯ ಹೆದ್ದಾರಿಯಲ್ಲಿ ಆರಂಭದಿಂದ ೯.೪೮ ಕಿಮೀ ವರೆಗೆ ಭೂಸ್ವಾಧೀನಗೊಳಿಸಿ ಅಭಿವೃದ್ಧಿಪಡಿಸುವುದು, ಕುಮಟಾ-ಕೊಡಮಡಗು ರಾಜ್ಯ ಹೆದ್ದಾರಿಯಲ್ಲಿ ಆರಂಭದಿಂದ ೮.೫೦ ಕಿಮೀ ಅಂದರೆ ಚಂದಾವರದ ವರೆಗೆ ಭೂಸ್ವಾಧೀನಗೊಳಿಸಿ ಅಭಿವೃದ್ಧಿಪಡಿಸುವುದು, ಕುಮಟಾ-ಹೆಗಡೆ-ಮಿರ್ಜಾನ ರಸ್ತೆಯಲ್ಲಿ ಆರಂಭದಿಂದ ೬.೦೩ ಕಿಮೀ ವರೆಗೆ ಹಾಗೂ ಅಘನಾಶಿನಿ-ಕುಮಟಾ ರಸ್ತೆಯಲ್ಲಿ ಆರಂಭದಿಂದ ೧೧.೬೫ ಕಿಮೀ ಭೂಸ್ವಾಧೀನಗೊಳಿಸಿ ರಸ್ತೆ ಅಭಿವೃದ್ಧಿಪಡಿಸಿ ಮೇಲ್ದರ್ಜೆಗೆ ಏರಿಸಬೇಕು ಎಂದು ಸದನದಲ್ಲಿ ಬೇಡಿಕೆ ಇಟ್ಟರು.ವಾಹನಗಳ ಸಂಚಾರ ಅಧಿಕವಿರುವ ಈ ರಸ್ತೆಗಳನ್ನು ವಾಹನಗಳ ಸುಗಮ ಸಂಚಾರ ಯೋಗ್ಯವಾಗಿ ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ಭೂಸ್ವಾಧೀನ ಅನಿವಾರ್ಯ. ವಾರಾಂತ್ಯಗಳಲ್ಲಿ ೧೫-೨೦ ಸಾವಿರ ಪ್ರವಾಸಿಗರು ಬರುತ್ತಿದ್ದಾರೆ. ರಸ್ತೆಗಳು, ನಿಲುಗಡೆ ಸಾಲುತ್ತಿಲ್ಲ, ಅಪಘಾತಗಳು ಹೆಚ್ಚಿವೆ. ಪ್ರಮುಖವಾಗಿ ಶ್ರೀಕ್ಷೇತ್ರ ಗೋಕರ್ಣ ರಸ್ತೆಯಂತೂ ತೀರಾ ಸಮಸ್ಯೆ ಎದುರಿಸುತ್ತಿದ್ದು, ಈಗಲೇ ಸೂಕ್ತ ಕ್ರಮವಾಗಬೇಕು. ಈ ರಸ್ತೆಗಳ ಇಕ್ಕೆಲಗಳಲ್ಲಿ ಜನ ಕಟ್ಟಡಗಳನ್ನು ಕಟ್ಟಿ ಒತ್ತುವರಿಯಾಗುವ ಮುಂಚೆ ಕ್ರಮವಾಗಬೇಕು. ಈ ರಸ್ತೆಗಳನ್ನು ಸೂಕ್ತವಾಗಿ ಮೇಲ್ದರ್ಜೆಗೆ ಏರಿಸಲು ಅಗತ್ಯವಿರುವ ಅನುದಾನ ಒದಗಿಸಲು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಅವರಿಗೂ ಸದನದಲ್ಲಿ ವಿನಂತಿಸಿದರು. ಶಾಸಕ ದಿನಕರ ಶೆಟ್ಟಿ ಬೇಡಿಕೆಗೆ ವಿಪಕ್ಷ ನಾಯಕ ಆರ್. ಅಶೋಕ ಕೂಡಾ ಬೆಂಬಲಿಸಿ ಸಚಿವರಿಗೆ ಶಾಸಕ ದಿನಕರ ಶೆಟ್ಟಿ ಅವರ ಬೇಡಿಕೆ ಈಡೇರಿಸುವಂತೆ ವಿನಂತಿಸಿದರು.
ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಚತುಷ್ಪಥ ಮಾಡಲು ರಾಜ್ಯಕ್ಕೆ ಅವಕಾಶವಿಲ್ಲ, ಆದರೆ ರಸ್ತೆ ಅಗಲ ಹೆಚ್ಚಿಸುವ ಕಾರ್ಯಕ್ಕೆ ಹಣಕಾಸು ಲಭ್ಯತೆ ಆಧರಿಸಿ ಆದ್ಯತೆಯ ಮೇರೆಗೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.