ಸಂವಿಧಾನದ ಆಶಯದಂತೆ ಪ್ರತಿಯೊಬ್ಬರು ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಹೇಳಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಸಂವಿಧಾನದ ಆಶಯದಂತೆ ಪ್ರತಿಯೊಬ್ಬರು ಕಾರ್ಯನಿರ್ವಹಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ನಗರಸಭೆ ಪೌರಾಯುಕ್ತ ಕೆ.ಎನ್ ಹೇಮಂತ್ ಹೇಳಿದರು.ಅವರು ಬುಧವಾರ ತಾಲೂಕು ಆಡಳಿತ, ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ತಾಪಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರತಿಯೊಬ್ಬರು ಸಂವಿಧಾನ ಆಶಯಗಳನ್ನು ಅರ್ಥ ಮಾಡಿಕೊಂಡಾಗ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ. ಈ ಹಿನ್ನಲೆಯಲ್ಲಿ ಸರ್ಕಾರ ಸಂವಿಧಾನ ದಿನ ಆಚರಿಸುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಸಂವಿಧಾನದ ಮೂಲಕ ಈ ದೇಶದ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕನ್ನು ನೀಡಿದ್ದಾರೆ. ಅಲ್ಲದೆ ನಮ್ಮ ನಮ್ಮ ಧರ್ಮ, ಜಾತಿಗಳ ನಡುವೆ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ. ನಾವೆಲ್ಲರೂ ಒಗ್ಗಟ್ಟಿನಿಂದ ಬದುಕುವ ವ್ಯವಸ್ಥೆ ರೂಪಿಸಿಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕಾಗಿದೆ, ಯುವ ಸಮುದಾಯ ಸಂವಿಧಾನದ ಆಶಯಗಳನ್ನು ಅರ್ಥ ಮಾಡಿಕೊಂಡು ಭವಿಷ್ಯದ ಸಮಾಜ ರೂಪಿಸಿಕೊಳ್ಳಬೇಕೆಂದರು.ದಲಿತ ಮುಖಂಡ, ನಿವೃತ್ತ ಪ್ರಾಂಶುಪಾಲ ಶಿವಬಸಪ್ಪ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್‌ರವರು ಈ ದೇಶದಲ್ಲಿ ಸಂವಿಧಾನದ ಮೂಲಕ ಮೀಸಲಾತಿ ಜಾರಿಗೆ ತಂದಿರುವ ಹಿನ್ನೆಲೆಯಲ್ಲಿ ಇಂದು ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಸಮಾನತೆ ಕಾಣಲು ಸಾಧ್ಯವಾಗುತ್ತಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಸಮಾನತೆ ಕಾಯ್ದುಕೊಳ್ಳಲು ಹಿಂದುಳಿದಿರುವ ಜಾತಿ, ಪಂಗಡಗಳಿಗೆ ಮೀಸಲಾತಿ ಇಂದಿಗೂ ಅಗತ್ಯವಾಗಿದೆ. ಇದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ ಎಂದರು.
ಚನ್ನಗಿರಿ ಶ್ರೀ ಶಿವಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಸತೀಶ್‌ಕುಮಾರ್, ಅಂಬೇಡ್ಕರ್ ಮತ್ತು ಸಂವಿಧಾನ ಕುರಿತು ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷೆ ಜೆ.ಸಿ ಗೀತಾರಾಜಕುಮಾರ್, ತಹಸೀಲ್ದಾರ್ ಪರುಸಪ್ಪ ಕುರುಬರ, ತಾಪಂ ಕಾರ್ಯನಿರ್ವಹಣಾಧಿಕಾರಿ ಕೊಟ್ರಪ್ಪ, ದಲಿತ ಮುಖಂಡರಾದ ಧರ್ಮರಾಜ್, ಸಂದೀಪ್, ಕೆ. ರಂಗನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಸಮಾಜ ಕಲ್ಯಾಣ ಇಲಾಖೆ ಕಚೇರಿ ವ್ಯವಸ್ಥಾಪಕಿ ಸವಿತಾ ಸಂವಿಧಾನ ಪೀಠಿಕೆ ವಾಚಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಸ್ವಾಗತಿಸಿ, ಶಶಿಕುಮಾರ್ ನಿರೂಪಿಸಿ ವಂದಿಸಿದರು.
ಸಂವಿಧಾನ ದಿನಾಚರಣೆ ಅಂಗವಾಗಿ ವಿವಿಧ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಬಾಬಾ ಸಾಹೇಬ್ ಅಂಬೇಡ್ಕರ್‌ರವ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶಾಲಾ-ಕಾಲೇಜುಗಳ ಮಕ್ಕಳಿಂದ ಜಾಥಾ ಆರಂಭಗೊಂಡಿತು. ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ, ರಂಗಪ್ಪ ವೃತ್ತದ ಮೂಲಕ ತಾಲೂಕು ಪಂಚಾಯಿತಿ ಕಚೇರಿವರೆಗೂ ಜಾಥಾ ನಡೆಯಿತು.ಸೀಗೆಬಾಗಿ ರಾಜೀವ್‌ಗಾಂಧಿ ಬಿ.ಎಡ್ ಕಾಲೇಜು, ಹೊಸಸೇತುವೆ ರಸ್ತೆ ವಿಶ್ವೇಶ್ವರಯ್ಯ ಎಜ್ಯುಕೇಷನ್ ಟ್ರಸ್ಟ್ ಬಿ.ಎಡ್ ಕಾಲೇಜು ಹಾಗೂ ಸಮಾಜ ಕಲ್ಯಾಣ ಇಲಾಖೆಯವರು, ಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.