ಶಿವಯೋಗಿಗಳು ನಾಡಿನ ಜನರ ಹಿತಕ್ಕಾಗಿ ಕ್ರಿಯಾಶೀಲವಾಗಿ ಸಮಾಜ ಸೇವಾ ಕಾರ್ಯಗಳಿಗೆ ನಿರಂತರವಾಗಿ ಶ್ರಮಿಸಿದರು. ಇಂತಹ ಮಹನೀಯರು ಸಾರಿದ ಸತ್ ಭಾವನೆ, ಸತ್ ಚಿಂತನೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪಟ್ಟಣದಲ್ಲಿ 6 ದಿನಗಳ ಕಾಲ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವ ಕಾರ್ಯಕ್ರಮ ಬಹಳ ಅಭೂತಪೂರ್ವವಾಗಿ ನೆರವೇರಿದೆ. ಒಂದು ತಾಲೂಕು ಕೇಂದ್ರಕ್ಕೆ ದೇಶದ ಪ್ರಥಮ ಪ್ರಜೆಗಳಾದ ರಾಷ್ಟ್ರಪತಿ ಅವರೇ ಬಂದಿದ್ದು ಅತೀವ ಸಂತಸ ತಂದಿದೆ ಎಂದು ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.ಪಟ್ಟಣದಲ್ಲಿ 6 ದಿನಗಳ ಕಾಲ ನಡೆದ ಸುತ್ತೂರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಯಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹತ್ತನೇ ಶತಮಾನದಲ್ಲಿ ನಾಡಿನಲ್ಲಿ ಶಾಂತಿ, ಪ್ರೀತಿ, ಸೌಹಾರ್ದ ಸಾರಿದ ಮಹಾನ್ ಸಂತರು ಶಿವರಾತ್ರೀಶ್ವರ ಸ್ವಾಮಿಗಳು ಎಂದರು.
ಶಿವಯೋಗಿಗಳು ನಾಡಿನ ಜನರ ಹಿತಕ್ಕಾಗಿ ಕ್ರಿಯಾಶೀಲವಾಗಿ ಸಮಾಜ ಸೇವಾ ಕಾರ್ಯಗಳಿಗೆ ನಿರಂತರವಾಗಿ ಶ್ರಮಿಸಿದರು. ಇಂತಹ ಮಹನೀಯರು ಸಾರಿದ ಸತ್ ಭಾವನೆ, ಸತ್ ಚಿಂತನೆ, ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.ಡಾ.ಬಿ.ಆರ್.ಅಂಬೇಡ್ಕರ್ ರವರು ಸಂವಿಧಾನ ರಚನೆ ಮಾಡಿದ ನಂತರ ಶರಣರಾದ ಬಸವಣ್ಣ ಅವರ ಸಾಮಾಜಿಕ ಸಂದೇಶಗಳನ್ನು ತಿಳಿದು ಪ್ರಭಾವಿತರಾಗಿದ್ದರು ಎಂಬ ಭವ್ಯ ಪರಂಪರೆ ನಮ್ಮ ರಾಜ್ಯಕ್ಕಿದೆ ಎಂದು ಬಾಬಾ ಸಾಹೇಬರನ್ನು ಸ್ಮರಿಸಿದರು.
ಜಯಂತ್ಯೋತ್ಸವ ಆರಂಭದ ದಿನಗಳಿಂದ ಕೊನೆ ಕ್ಷಣದವರೆಗೂ ಭಕ್ತ ಮಹಾಶಯರುಗಳು ಸಾಗರೋಪಾದಿಯಾಗಿ ಬಂದಿದ್ದು, ನಮ್ಮ ಮನಸ್ಸು ತುಂಬಿ ಬಂದಿದೆ. ದಾಸೋಹದಲ್ಲಿ ನಿರಂತರವಾಗಿ ಭಕ್ತಾಧಿಗಳಿಗೆ ಅನ್ನ ಉಣಬಡಿಸಿದ ಮತ್ತು ಸ್ವಚ್ಚತಾ ಕಾರ್ಯಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಶಿವರಾತ್ರಿ ಶಿವಯೋಗಿಗಳು ಶಾಂತಿ ಸಂದೇಶ ಸಾರಿದ್ದರು. ತಂತ್ರಜ್ಞಾನ, ವಿಜ್ಞಾನ ಬೆಳೆದಂತೆ ಇಂದು ಶಾಂತಿ ನೆಮ್ಮದಿ ಇಲ್ಲದಂತಾಗಿದೆ. ಯುವಕರು ನಮ್ಮ ಮಸಸ್ಸಿನೊಳಗೆ ಶಾಂತಿ ನೆಮ್ಮದಿ ಸೃಷ್ಟಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದರು.
ಸಂತರು ವ್ಯಕ್ತಿಗಳಿಗೆ ಸೀಮಿತರಾಗದೇ ಎಲ್ಲರ ಬದುಕಿನ ಅಭಿವೃದ್ಧಿಗಾಗಿ ಶ್ರಮಿಸಿದ್ದರು. ಸಾವಿರಾರು ವರ್ಷಗಳಿಂದ ಗುರು ಪರಂಪರೆಯನ್ನು ಸುತ್ತೂರು ಮಠ ಮುಂದುವರೆಸಿಕೊಂಡು ಬಂದಿದೆ. ಇಂತಹ ಪ್ರಕೃತಿಯ ಮಡಿಲಿನಲ್ಲಿ ಜಯಂತ್ಯುತ್ಸವದಲ್ಲಿ ಅದ್ದೂರಿಯಾಗಿದೆ ಎಂದು ಬಣ್ಣಿಸಿದರು.ರಾಷ್ಟ್ರಪತಿಗಳು ಉದ್ಘಾಟಿಸಿ ಕಾರ್ಯಕ್ರಮಕ್ಕೆ ಸಿಎಂ ಬಂದಿರುವುದು ಸಂತಸ ತಂದಿದೆ. ಮೊನ್ನೆಯವರಿಗೆ ನಡೆದ ಬೆಳಗಾವಿಯ ಬಿಸಿ ಅಧಿವೇಶನ ನಡೆದರೂ ಸಹ ಸಿದ್ದರಾಮಯ್ಯ ಅವರು ಶಾಂತ ಸ್ವಭಾವದಿಂದ ಇದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದರು.