ಸಾರಾಂಶ
ಜಾತಿ, ಮತ ಎಂದು ಭೇದಭಾವ ಮಾಡದೇ ಇಡೀ ಮನುಕುಲದ ಶ್ರೇಯಕ್ಕೆ ದಾರಿ ತೋರಿದಂತಹ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರಿಗೆ ನಾವೆಲ್ಲರೂ ಸದಾ ಚಿರ ಋಣಿಯಾಗಿರಬೇಕು ಎಂದು ಕಾನೂನು, ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಗದಗ: ಜಾತಿ, ಮತ ಎಂದು ಭೇದಭಾವ ಮಾಡದೇ ಇಡೀ ಮನುಕುಲದ ಶ್ರೇಯಕ್ಕೆ ದಾರಿ ತೋರಿದಂತಹ ಮಹಾಸಾಧ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರಿಗೆ ನಾವೆಲ್ಲರೂ ಸದಾ ಚಿರ ಋಣಿಯಾಗಿರಬೇಕು ಎಂದು ಕಾನೂನು, ಪ್ರವಾಸೋದ್ಯಮ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ಶನಿವಾರ ಗದಗ ನಗರದ ಶಿವಾನಂದ ಕಲ್ಯಾಣ ಮಂಟಪದಲ್ಲಿ ಜರುಗಿದ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಾಕಷ್ಟು ಜನರಿಗೆ ನಾಟಕ, ಕೀರ್ತನ ಹಾಗೂ ಪುರಾಣಗಳ ಮೂಲಕ ಪರಿಚಯಿಸಲಾಗುತ್ತಿದೆ. ಮಲ್ಲಮ್ಮ ಭಕ್ತಿಯ ಪರಕಾಷ್ಠೆ, ಭಕ್ತಿಯ ಶ್ರೇಷ್ಠತೆಯನ್ನು ಸಮಾಜಕ್ಕೆ ತೋರಿಸಿರುವ ಮಹಾಸಾದ್ವಿ ಎಂದರು.ದಾರ್ಶನಿಕ, ತತ್ವಜ್ಞಾನಿ ಮಹಾಯೋಗಿ ವೇಮನರನ್ನು ತಿದ್ದುವ ಮೂಲಕ ಸಮಾಜಕ್ಕೆ ವೇಮನರಂತಹ ತತ್ವಜ್ಞಾನಿಯನ್ನು ನೀಡಿದಂತಹ ಮಹಾನುಭಾವೆ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅತಿಥಿ ಸತ್ಕಾರ, ಹಸಿವು ನೀಗಿಸುವ ಕಾರ್ಯದಲ್ಲಿ ಸದಾ ಮುಂದಿರುವ ರೆಡ್ಡಿ ಸಮುದಾಯ ಯಾವಾಗಲೂ ನ್ಯಾಯ ಪರವಾದ ಹೋರಾಟಲ್ಲಿ ಮುಂಚೂಣಿಯಲ್ಲಿದ್ದು ಸಮಾಜದಲ್ಲಿ ಎಲ್ಲರೂ ಒಗ್ಗ ಲಟ್ಟಾಗಿ ಬಾಳುವದರ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.ಸರ್ಕಾರದಿಂದ ಏರ್ಪಡಿಸುವ ಜಯಂತಿಗಳು ಅರ್ಥಪೂರ್ಣವಾಗಿ ಆಚರಿಸಿ ಮಹನೀಯರ ತತ್ವಾದರ್ಶಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿ ಆಯೋಜನೆ ಆಗಬೇಕು. ಮಹನೀಯರ ಜಯಂತಿಗಳು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗಬಾರದು ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರಿಗೂ ತಲುಪಿಸುವಂತಹ ಕಾರ್ಯವಾಗಬೇಕು ಎಂದರು.ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಕುಟುಂಬಗಳು ಒಗ್ಗಟ್ಟಿನಿಂದ ಹೇಗೆ ಸಾಗಬೇಕು ಎಂಬ ಪರಿಪಾಠವನ್ನು ಕಲಿಸಿದಂತಹ ಮಹಾಮಾತೆ ಹೇಮರಡ್ಡಿ ಮಲ್ಲಮ್ಮಅವರು ಸಂಸಾರದಲ್ಲಿ ಬರುವಂತಹ ಕಷ್ಟಗಳನ್ನು ಎದುರಿಸಲು ಮಾರ್ಗದರ್ಶನ ಮಾಡಿದ್ದು ಅವರ ಮಾರ್ಗದರ್ಶನಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ವಿಪ ಶಾಸಕ ಎಸ್.ವಿ. ಸಂಕನೂರ ಮಾತನಾಡಿ, ನಾವು ಅನೇಕ ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಮಹನೀಯರ ಆದರ್ಶಗಳನ್ನು ಮೆಲಕು ಹಾಕುವುದರ ಮೂಲಕ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜ ಸುಧಾರಣೆಗಾಗಿ ಇಂತಹ ಮಹನೀಯರ ಜಯಂತಿಗಳನ್ನು ಆಚರಿಸಲಾಗುತ್ತಿದೆ ಎಂದರು.ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಮಾತನಾಡಿ, ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ವೀಣಾ ತಿರ್ಲಾಪುರ ಹೇಮರಡ್ಡಿ ಮಲ್ಲಮ್ಮನವರ ತತ್ವಾದರ್ಶ,ಜೀವನ ಸಾಧನೆ ಕುರಿತು ಮಾತನಾಡಿದರು.ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ್ ಬಬರ್ಚಿ, ಬಿ.ಬಿ. ಅಸೂಟಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಬಿ.ಆರ್. ಯಾವಗಲ್, ಜಿಪಂ ಸಿಇಓ ಭರತ ಎಸ್, ಎಸ್ಪಿ ಬಿ.ಎಸ್. ನೇಮಗೌಡ, ಎಡಿಸಿ ಅನ್ನಪೂರ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ, ಜಿಲ್ಲಾ ರಡ್ಡಿ ಸಮಾಜದ ಅಧ್ಯಕ್ಷ ರವೀಂದ್ರ ಮೂಲಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಪಂಡಿತ ವೆಂಕಟೇಶ ಅಲ್ಕೋಡ್ ಹಾಗೂ ಸಂಗಡಿಗರು ನಾಡಗೀತೆ ಹಾಗೂ ಭಕ್ತಿ ಸಂಗೀತ ಗಾಯನ ಪ್ರಸ್ತುತಿಸಿದರು. ಎಸ್.ಎಸ್.ಶಿವನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಧಾ ಹುಚ್ಚಣ್ಣವರ ನಿರೂಪಿಸಿದರು.ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರುಗಳಿಗೆ ಸಚಿವರು ಹಾಗೂ ಗಣ್ಯರು ಗೌರವಿಸಿದರು.