ಕನ್ನಡಪ್ರಭ ವಾರ್ತೆ ಮಂಡ್ಯ

ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಜಾಗೃತರಾಗಬೇಕು. ನಿತ್ಯ ವ್ಯಾಯಾಮ, ಸಮತೋಲನ ಆಹಾರ ಸೇವಿಸಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಸಲಹೆ ನೀಡಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಮಂಡ್ಯ ಜಿಲ್ಲಾ ಶಾಖೆ, ಸರ್ಕಾರಿ ಮಹಿಳಾ ಕಾಲೇಜು, ಯುವ ರೆಡ್‌ಕ್ರಾಸ್ ಘಟನೆ ಇವರ ವತಿಯಿಂದ ನಗರದ ಸರ್ಕಾರಿ ಮಹಿಳಾ ಕಾಲೇಜು ಆವರಣದಲ್ಲಿ ನಡೆದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯವಂತ ಮನುಷ್ಯನಿಂದ ಮಾತ್ರ ಆರೋಗ್ಯವಂತ ದೇಶ ಕಟ್ಟಲು ಸಾಧ್ಯ ಎಂದು ಅಭಿಪ್ರಾಯಿಸಿದರು.

ಕಾಯಿಲೆಗಳಿಂದಲೂ ವಿಶ್ವವನ್ನು ಒಗ್ಗೂಡಿಸಲು ಸಾಧ್ಯ ಎಂಬುದನ್ನು ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ ತಿಳಿಸಿಕೊಟ್ಟಿದೆ ಎಂದು ಉದಾಹರಣೆ ಸಮೇತ ತಿಳಿಸಿದ ಅವರು, ಕೋವಿಡ್ ನಂತರದ ದಿನಗಳೂ ಸಹ ಹೇಗೆಲ್ಲಾ ಇರಬೇಕು ಎಂದು ಅರಿಯುವುದರೊಂದಿಗೆ ಆರೋಗ್ಯದ ಪ್ರಭಾವ ಹೇಗಿರಬೇಕು ಎಂದು ತಿಳಿಯಿತು. ಶರೀರವನ್ನು ಕೋಟೆ ರೀತಿಯಲ್ಲಿ ಬಲಪಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ತಾಂತ್ರಿಕತೆ ಬೆಳೆದಂತೆಲ್ಲಾ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿವೆ. ಇದರ ಪರಿಣಾಮ ಐಷಾರಾಮಿ ಜೀವನಕ್ಕೆ ಎಲ್ಲರೂ ಮಾರು ಹೋಗಿದ್ದೇವೆ. ಅದರಲ್ಲೂ ಮೊಬೈಲ್ ಬಂದ ನಂತರ ಜೀವನ ಶೈಲಿ ಯಾವ ರೀತಿ ಬದಲಾಯಿಸಿದೆ. ಇದರಿಂದ ನಾವು ಪಾಠ ಕಲಿತು ಒಳ್ಳೆಯ ಜೀವನ ಶೈಲಿಗೆ ವಾಪಸ್ಸಾಗಬೇಕಿದೆ. ಒಳ್ಳೆಯದನ್ನು ಬಳಸುವುದು ತಪ್ಪಲ್ಲ. ಮುಂದಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಬರುವುದಕ್ಕಿಂತಲೂ ಮುನ್ನ ನಾವು ಅದರಿಂದ ಒಳ್ಳೆಯ ಪಾಠವನ್ನು ಕಲಿಯುತ್ತಿದ್ದೇವೆ ಎಂದು ಎಚ್ಚರಿಸಿದರು.


ರೆಡ್‌ಕ್ರಾಸ್ ಸಂಸ್ಥೆ ಪ್ರಾರಂಭವಾಗಿದ್ದೇ ಶುಶ್ರೂಷೆಯಿಂದ. ಎಲ್ಲಿ ಯುದ್ಧವಾಗಲಿ ಅಲ್ಲಿ ರೆಡ್‌ಕ್ರಾಸ್ ಇರುತ್ತದೆ. ಅಂತಹ ಕಡೆ ಹೋಗಲು ರೆಡ್‌ಕ್ರಾಸ್‌ಗೆ ಯಾವುದೇ ನಿರ್ಬಂಧವಿರುವುದಿಲ್ಲ. ರೆಡ್‌ಕ್ರಾಸ್ ಎಲ್ಲೆಡೆ ತನ್ನ ಅಂತಃಕರಣ, ಮಾನವೀಯತೆಯನ್ನು ಹರಡುತ್ತಿದೆ ಎಂದರು.

ಜೀವನ ಶೈಲಿಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಲ್ಲಿ ಎಲ್ಲಾ ರೀತಿಯಲ್ಲೂ ನಾವು ಆರೋಗ್ಯವಂತರಾಗಿರಲು ಸಾಧ್ಯವಾಗುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಸ್ವಚ್ಚ ಮತ್ತು ಸುಸ್ಥಿರ ಪರಿಸರ ನಿರ್ಮಾಣಕ್ಕೆ ನಾವೆಲ್ಲರೂ ಪಣ ತೊಡಬೇಕಾಗಿದೆ ಎಂದರು.

ಪ್ರಾಧ್ಯಾಪಕಿ ಪ್ರೊ.ಜಯಲಕ್ಷ್ಮಿ ಮಾತನಾಡಿ, ಇಂದಿನ ದಿನಗಳಲ್ಲಿ ಆರೋಗ್ಯ ತೀರಾ ಅತ್ಯಾವಶ್ಯಕವಾಗಿದೆ. ಅದರಲ್ಲೂ ಹೆಣ್ಣು ಮಕ್ಕಳು ಒತ್ತಡದಲ್ಲೇ ತಮ್ಮ ಜೀವನ ಶೈಲಿಯನ್ನು ಕಳೆಯುತ್ತಿರುತ್ತಾರೆ. ಅವರಿಗೂ ಸಹ ಆರೋಗ್ಯ ಬಹಳ ಮುಖ್ಯವಾದದ್ದು ಎಂದು ಪ್ರತಿಪಾದಿಸಿದರು.

ಧರಣ ವೆಲ್‌ನೆಸ್ ಸಂಸ್ಥಾಪಕಿ ಡಾ.ಎನ್‌ಅಕ್ಷತಾ ಎನ್. ಮಾತನಾಡಿ, ಇಂದು ವಿಶ್ವದ ಅರ್ಧದಷ್ಟು ಜನಸಂಖ್ಯೆಯು ಅವರಿಗೆ ಅಗತ್ಯವಿರುವ ಆರೋಗ್ಯ ಸೇವೆಗಳನ್ನು ಪಡೆಯುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ತಿಳಿದುಬಂದಿದೆ. ಆದ್ದರಿಂದ ಮಕ್ಕಳ, ಯುವಜನರ, ವಯಸ್ಕರ, ಗರ್ಭಿಣಿಯರ ಮತ್ತು ಹಿರಿಯರ ಆರೋಗ್ಯದ ಮೇಲೆ ಎಲ್ಲರೂ ಗಮನ ಹರಿಸುವುದು ಬಹುಮುಖ್ಯವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಗುರುರಾಜ್ ಪ್ರಭು ಕೆ. ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪತ್ರಾಂಕಿತ ವ್ಯವಸ್ಥಾಪಕಿ ಹೇಮಲತಾ ಎಸ್.ಪಿ., ಯುವ ರೆಡ್‌ಕ್ರಾಸ್ ಘಟಕದ ಎಸ್. ನವೀನ್, ಕ್ರೀಡಾ ಸಂಯೋಜಕ ಲೋಕೇಶ್ ಕೆ.ಆರ್. ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.