ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲಾರೂ ಪಣ ತೊಡಬೇಕು: ಸಿಇಓ ಡಾ.ಗೋಪಾಲಕೃಷ್ಣ

| Published : Feb 10 2024, 01:46 AM IST / Updated: Feb 10 2024, 02:52 PM IST

ಜೀತ ಪದ್ಧತಿ ನಿರ್ಮೂಲನೆಗೆ ಎಲ್ಲಾರೂ ಪಣ ತೊಡಬೇಕು: ಸಿಇಓ ಡಾ.ಗೋಪಾಲಕೃಷ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿಪದ್ಧತಿ ನಿಯಂತ್ರಣಕ್ಕೆ ಕಾನೂನು ಇದ್ದರೂ ತೆರೆಯ ಮರೆಯಲ್ಲಿ ಮುಂದುವರೆದುಕೊಂಡು ಬರುತ್ತಿದೆ. ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ, ಜೀತ ಪದ್ಧತಿಯಿಂದ ಅವರನ್ನು ಮುಕ್ತಗೊಳಿಸಿ ನೆರವಾಗಬೇಕು ಎಂದು ಸಿಇಓ ಡಾ.ಬಿ.ಗೋಪಾಲಕೃಷ್ಣ ಹೇಳಿದರು.

ಕನ್ನಡಪ್ರಭವಾರ್ತೆ ಚಿಕ್ಕಮಗಳೂರು 

ಜೀತ ಪದ್ಧತಿ ನಿರ್ಮೂಲನೆ ಮಾಡಲು ಕಾನೂನು ಜಾರಿಯಲ್ಲಿದ್ದರೂ ಕೂಡ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುವ ಪ್ರದೇಶಗಳಲ್ಲಿ ಇಂದಿಗೂ ಕೂಡ ಜೀವಂತವಾಗಿದೆ. ಇದರ ನಿರ್ಮೂಲನೆಗೆ ಅಧಿಕಾರಿಗಳ ಜತೆಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಬಿ.ಗೋಪಾಲಕೃಷ್ಣ ಅವರು ಕರೆ ನೀಡಿದ್ದಾರೆ. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಚಿಕ್ಕಮಗಳೂರು ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಳಿಕ ಪ್ರತಿಜ್ಞಾ ವಿಧಿ ಬೋಧಿಸಿ ಅವರು ಮಾತನಾಡಿದರು. 

ಜೀತ ಪದ್ಧತಿ ಇರುವಿಕೆಯ ಬಗ್ಗೆ ಸರ್ವೆ ಮಾಡಿ ವರದಿ ನೀಡುವಂತೆ ಸರ್ಕಾರಗಳು ಆಗಾಗ ಸುತ್ತೋಲೆ ಹೊರಡಿಸುತ್ತವೆ. ಹೆಚ್ಚಿನ ಮಂದಿ ಜಿಲ್ಲಾ ಮಟ್ಟದ ಅಧಿಕಾರಿಗಳು ಇಲ್ಲ ಎಂದು ವರದಿ ನೀಡುತ್ತಾರೆ. ಆದರೆ, ಅಧಿಕಾರಿಗಳ ಗಮನಕ್ಕೆ ಬರದೆ ಹಲವೆಡೆ ಈ ಪದ್ಧತಿ ಮುಂದುವರೆದುಕೊಂಡು ಬಂದಿರುತ್ತದೆ. ಪ್ರಮುಖವಾಗಿ ಇಟ್ಟಿಗೆಗೂಡು ನಿರ್ವಹಣೆ ಕೆಲಸದಲ್ಲಿ ಈ ಪದ್ಧತಿ ಇರುತ್ತದೆ ಎಂದರು. 

ಕುಟುಂಬದ ನಿರ್ವಹಣೆಗಾಗಿ ಮನೆಯ ಯಜಮಾನ ತಾನು ಕೆಲಸ ಮಾಡುವ ಸ್ಥಿತಿವಂತರ ಬಳಿ ಸಾಲದ ರೂಪದಲ್ಲಿ ಹಣ ಪಡೆದುಕೊಂಡಿದ್ದರೆ, ಆತನ ಬಳಿ ಇಡೀ ಕುಟುಂಬ ಜೀತದಾಳು ಆಗಿ ಕೆಲಸ ಮಾಡಬೇಕಾಗುತ್ತದೆ. ಈ ಪದ್ಧತಿ ನಿಯಂತ್ರಣಕ್ಕೆ ಕಾನೂನು ಇದ್ದರೂ ಕೂಡ ತೆರೆಯ ಮರೆಯಲ್ಲಿ ಮುಂದುವರೆದುಕೊಂಡು ಬರುತ್ತಿದೆ.

 ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚುವ ಜತೆಗೆ ಅವರನ್ನು ಜೀತ ಪದ್ಧತಿಯಿಂದ ಮುಕ್ತಗೊಳಿಸಿ ಸರ್ಕಾರದ ವಿವಿಧ ಯೋಜನೆಗಳಲ್ಲಿನ ನೆರವು ನೀಡುವ ಮೂಲಕ ನೆರವಾಗಬೇಕು. ಹೀಗೆ ಮಾಡುವುದರಿಂದ ಹಲವು ಸಮಸ್ಯೆಗಳಿಂದ ಆ ಕುಟುಂಬ ಮುಕ್ತವಾಗಲಿದೆ ಎಂದು ಹೇಳಿದರು. ಜೀತ ಪದ್ಧತಿ ನಿಯಂತ್ರಣಕ್ಕೆ ಕಾನೂನು ಇದೆ, ಅಧಿಕಾರಿಗಳು ಸಮರ್ಪಕವಾದ ರೀತಿಯಲ್ಲಿ ಬಳಸಿಕೊಳ್ಳಬೇಕು. 

ಎಲ್ಲಾದರೂ ಪ್ರಕರಣ ಕಂಡು ಬಂದರೆ ಸುಮ್ಮನೆ ಇರಬಾರದು ಎಂದ ಅವರು, ಈ ನಿಟ್ಟಿನಲ್ಲಿ ನಾವುಗಳು ಕೆಲಸ ಮಾಡಿದರೆ ಮಾತ್ರ ಇಂತಹ ದಿನಾಚರಣೆಗಳಿಗೆ ಅರ್ಥ ಬರಲಿದೆ, ಇಲ್ಲದೆ ಹೋದರೆ ಕಾಟಾಚಾರದ ಕಾರ್ಯಕ್ರಮವಾಗಲಿದೆ ಕಿವಿ ಮಾತು ಹೇಳಿದರು. 

ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸೋಮ ಅವರು ಮಾತನಾಡಿ, ಜೀತ ಪದ್ಧತಿ ನಗರ ಪ್ರದೇಶಗಳಲ್ಲಿ ಕಂಡು ಬರುವುದಿಲ್ಲ, ಗ್ರಾಮೀಣ ಪ್ರದೇಶಗಳಲ್ಲಿ ಹಲವು ವರ್ಷಗಳ ಹಿಂದೆ ಜೀವಂತವಾಗಿತ್ತು. ಕಡಿಮೆ ಹಣಕ್ಕೆ ಹೆಚ್ಚಿನ ಸಮಯ ಹೊಲಗಳಲ್ಲಿ ಮಾತ್ರವಲ್ಲ, ಮನೆ ಕೆಲಸಗಳಲ್ಲೂ ಒಂದೇ ಕುಟುಂಬದವರನ್ನು ದುಡಿಸಿಕೊಳ್ಳುತ್ತಿದ್ದರು ಎಂದು ಹೇಳಿದರು. 

ಕಾರ್ಮಿಕರಿಗೆ ಇಂತಿಷ್ಟು ವೇತನ ನೀಡಬೇಕೆಂದು 1948 ರಲ್ಲಿ ಕಾನೂನು ಜಾರಿಗೆ ಬಂದಿದೆ. ಹಾಗಿದ್ದರೂ ಕೂಡ ಕಡಿಮೆ ವೇತನಕ್ಕೆ ದುಡಿಸಿಕೊಳ್ಳುತ್ತಿದ್ದಾರೆ. ಆದರೂ ಕೂಡ ಹಲವೆಡೆ ಸುಧಾರಣೆಯಾಗಿದೆ ಎಂದರು. ಸಂವಿಧಾನದಲ್ಲಿ ಎಲ್ಲರಿಗೂ ಸಮನವಾದ ಹಕ್ಕಿದೆ. ಆದರೆ, ಬಹಳಷ್ಟು ಜನರಿಗೆ ಅದು ತಿಳಿದಿಲ್ಲ, ಜೀವನ ಮಟ್ಟ ಸುಧಾರಿಸಲು ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. 

ಜನರಿಗೆ ಮಾತ್ರ ತಿಳಿದಿಲ್ಲ, ಈ ಕುರಿತು ಅರಿವು ಮೂಡಿಸುವ ಕೆಲಸ ಆಡಳಿತ ಯಂತ್ರದಿಂದ ಆಗಬೇಕು. ಸಾರ್ವಜನಿಕರು ಕೂಡ ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂ ಅಮಟೆ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾ ಅಧಿಕಾರಿ ಸೋಮಶೇಖರ್‌, ಬಿಎಸ್ಪಿ ಜಿಲ್ಲಾಧ್ಯಕ್ಷ ಕೆ.ಟಿ. ರಾಧಾಕೃಷ್ಣ, ಎಂ.ಸಿ. ಶಿವಾನಂದಸ್ವಾಮಿ, ರಾಧಾ ಸುಂದರೇಶ್, ವಕೀಲ ಪರಮೇಶ್ ಇದ್ದರು.