ವಸತಿ ನಿಲಯಗಳ ಅನುದಾನ ದುರುಪಯೋಗ: ತನಿಖೆಗೆ ಆಗ್ರಹ

| Published : Feb 10 2024, 01:46 AM IST

ಸಾರಾಂಶ

ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ವಸತಿ ನಿಲಯಗಳ ನಿರ್ವಹಣೆಗಾಗಿ ಬಂದಿರುವ ಅನುದಾನ ದುರುಪಯೋಗವಾಗಿದ್ದು, ಅದನ್ನು ತನಿಖೆ ಮಾಡಬೇಕು. ವಿಜಯಪುರದ ಜನತಾ ಬಜಾರದಿಂದ ವಸತಿ ನಿಲಯಗಳಿಗೆ ಆಹಾರ ಧಾನ್ಯ ಸರಬರಾಜು ಆಗಬೇಕು ಎಂಬ ನಿಯಮ ಇದ್ದರೂ ಅದನ್ನು ಮೀರಿ ಖಾಸಗಿ ಅಂಗಡಿಗಳಲ್ಲಿ ಖರೀದಿ ಮಾಡುತ್ತಿರುವುದನ್ನು ತಡೆಗಟ್ಟಬೇಕು. ತಪ್ಪಿಸ್ಥ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಧರ್ಮರಾಯ ಸಾಲೋಟಗಿ ನೇತೃತ್ವದಲ್ಲಿ ಪದಾಧಿಕಾರಿಗಳು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಇಂಡಿ

ಪ್ರತಿಭಟನೆ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳ ಕಚೇರಿ ಮುಂದೆ ಕೆಲಕಾಲ ಧರಣಿ ನಡೆಸಿ, ಟಿಪ್ಪುಸುಲ್ತಾನ, ಬಸವೇಶ್ವರ, ಅಂಬೇಡ್ಕರ್‌ ವೃತ್ತದ ಮೂಲಕ ನಡೆದು ತಾಲೂಕಾಡಳಿತ ಸೌಧ ತಲುಪಿತು.

ಈ ಸಂದರ್ಭದಲ್ಲಿ ಮಾತನಾಡಿದ ದರವೇ ಜಿಲ್ಲಾಧ್ಯಕ್ಷ ಧರ್ಮರಾಯ ಸಾಲೋಟಗಿ, ಲಕ್ಷ್ಮಣ ಗುಂದವಾನ, ಡಾ.ಭುವನೇಶ್ವರಿ ಕಾಂಬಳೆ, ಸತೀಶ ಲಚ್ಯಾಣ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಗೆ ವಸತಿ ನಿಲಯಗಳ ನಿರ್ವಹಣೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಲುವಾಗಿ ಸರ್ಕಾರ ಕೋಟ್ಯಂತರ ರುಪಾಯಿಗಳನ್ನು ಖರ್ಚು ಮಾಡುತ್ತಿದೆ. ಆದರೆ ಸರ್ಕಾರದ ಅನುದಾನ ಸದ್ಭಳಕೆಯಾಗದೇ ದುರ್ಬಳೆಕೆಯಾಗಿದ್ದರಿಂದ ಇಂಡಿ ಹಾಗೂ ಚಡಚಣ ತಾಲೂಕಿನ 19 ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳು ಸಿಗದೇ ಇರುವುದಕ್ಕಾಗಿ ವಿದ್ಯಾರ್ಥಿಗಳು ತೊಂದರೆ ಪಡುತ್ತಿದ್ದಾರೆ. ಜಿಲ್ಲೆ ಹಾಗೂ ತಾಲೂಕಿನ ಯಾವೊಬ್ಬರು ಅಧಿಕಾರಿಗಳು ಸೌಜನ್ಯಕ್ಕಾದರೂ ವಸತಿ ನಿಲಯಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಕಷ್ಟ, ಸುಖ ಕೇಳುವ ಗೋಜಿಗೆ ಹೋಗಿರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆಯಿಂದ ಕೋಟ್ಯಂತರ ರುಪಾಯಿ ಅವ್ಯವಹಾರ ಕಂಡು ಬಂದಿದ್ದು ಕೂಡಲೇ ತನಿಖೆ ಮಾಡಬೇಕು. ಇಲ್ಲವಾದರೆ ಜಿಲ್ಲೆ, ರಾಜ್ಯಾಧ್ಯಂತ ಉಗ್ರ ಹೋರಾಟ ಮಾಡುವುದಿಲ್ಲದೆ, ರಾಜ್ಯದ ಸಮಾಜ ಕಲ್ಯಾಣ ಸಚಿವರ ಮನೆಗೆ ಮುತ್ತಿಗೆ ಹಾಕುವ ಕಾರ್ಯ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ವಸತಿ ನಿಲಯಗಳ ವಿದ್ಯಾರ್ಥಿಗಳ ಕಳಕಳಿಯನ್ನು ಇಟ್ಟುಕೊಂಡು ಕನ್ನಡಪ್ರಭ ದಿನಪತ್ರಿಕೆಯಲ್ಲಿ ವಸತಿ ನಿಲಯದ ಅವ್ಯವಸ್ಥೆ ಕುರಿತು ಹಾಗೂ ಸರ್ಕಾರದ ಅನುದಾನದ ದುರುಪಯೋಗ ಕುರಿತು ವರದಿ ಮಾಡಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸದೇ, ವಸತಿ ನಿಲಯಗಳನ್ನು ಸುಧಾರಣೆ ಮಾಡುವ ಕೆಲಸಕ್ಕೆ ಮುಂದಾಗದೇ ಇರುವ ಅಧಿಕಾರಿಗಳ ನಡೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.

ನಂತರ ತಹಸೀಲ್ದಾರ್‌ ಅವರಿಗೆ ಮನವಿ ಸಲ್ಲಿಸಿದರು. ಈ ವೇಳೆ ಶಟ್ಟೆಪ್ಪ ಶಿವಪೂರ, ಸುನೀಲ ಗಾಯಕವಾಡ, ಲಕ್ಷ್ಮಣ ಗುಂದವಾನ, ರಾಜು ಶಿರಗೂರ, ವಿಕಾಸ ಬನಸೋಡೆ, ಮಲಕಾರಿ ಕಾಂಬಳೆ, ಯಲ್ಲಪ್ಪ ಗಜಾಕೋಶ, ಮಂಜುನಾಥ ಮೇಲಿಕೇರಿ, ಮಲ್ಲಿಕಾರ್ಜುನ ಧರೆನವರ, ಗಂಗಾಧರ ಹಜೇರಿ,ಕಿರಣ ತೆಲಗ, ಶ್ರೀಕಾಂತ ಧರೆನವರ,ವಿರೂಪಾಕ್ಷಿ ಕಾಳೆ, ಪ್ರಶಾಂತ ಸಿಂಗೆ, ರಾಮು ಹಿಳ್ಳಿ, ಇಂದಿರಾಗಾಂದಿ ಹೊಸಮನಿ, ಮಹಾದೇವಿ ಶಿವಶರಣ, ಜ್ಯೋತಿ ಧನ್ಯಾಳ, ಜಯಶ್ರೀ ಸಿಂಗೆ ಮೊದಲಾದವರು ಪ್ರತಿಭಟನೆಯಲ್ಲಿ ಇದ್ದರು.