ಸಾರಾಂಶ
ಉಡುಪಿ ನಗರದ ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ ಕ್ರೀಡೆಯು ದೈಹಿಕ ವೃದ್ಧಿ ಹಾಗೂ ಮನಸ್ಸಿನ ಉಲ್ಲಾಸವನ್ನು ಹೆಚ್ಚಿಸಲು ಸಹಕಾರಿಯಾಗಿದ್ದು. ಸೋಲು ಗೆಲುವಿನ ಕುರಿತು ಯೋಚಿಸದೇ ಕ್ರೀಡಾಕೂಟದಲ್ಲಿ ಸಕ್ರೀಯವಾಗಿ ಭಾಗವಹಿಸುವುದರೊಂದಿಗೆ ಪ್ರತಿಯೊಬ್ಬ ಕ್ರೀಡಾಪಟುಗಳು ಕ್ರೀಡಾಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹೇಳಿದರು.ಅವರು ಭಾನುವಾರ ನಗರದ ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ದಸರಾ ಕ್ರೀಡಾಕೂಟ ಎಂಬುದು ಈ ನಾಡಿನ ಹೆಮ್ಮೆಯ ಕ್ರೀಡಾಕೂಟ. ಅದರಲ್ಲಿ ಭಾಗವಹಿಸುವುದು ಗೌರವದ ವಿಚಾರವಾಗಿದ್ದು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ರಾಜ್ಯ ಮಟ್ಟದಲ್ಲಿ ಭಾಗವಹಿಸುವ ಅವಕಾಶವಿದ್ದು, ಪ್ರತಿಯೊಬ್ಬರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಜಿಪಂ ಮುಖ್ಯಕಾರ್ಯನಿರ್ವಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವಿಕೆ ಅತಿ ಮುಖ್ಯವಾಗಿದ್ದು, ಕ್ರೀಡಾಪಟುಗಳು ಸತತ ಅಭ್ಯಾಸದಿಂದ ತಮ್ಮ ಕ್ರೀಡೆಯಲ್ಲಿ ಏಳಿಗೆಯನ್ನು ಸಾಧಿಸುವ ಮೂಲಕ ಜೀವನದಲ್ಲಿ ಯಶಸ್ಸು ಗಳಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಪೌರಯುಕ್ತ ರಾಯಪ್ಪ, ಅಥ್ಲೇಟಿಕ್ ತರಬೇತುದಾರ ಅನಂತ್‌ರಾಮ್, ವಾಲಿಬಾಲ್ ತರಬೇತುದಾರ ರಾಜೇಶ್ ಪತ್ತರ್, ಬ್ರಹ್ಮಾವರ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ಪ್ರಸನ್ನ ಕುಮಾರ್, ಉಡುಪಿ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ರವೀಂದ್ರ ನಾಯಕ್, ತಾಲೂಕು ಕ್ರೀಡಾಧಿಕಾರಿ ವಸಂತ್ ಜೋಗಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ ನಿರೂಪಿಸಿ ವಂದಿಸಿದರು.ಅಜ್ಜರಕಾಡುವಿನ ಒಳಾಂಗಣ ಕ್ರೀಡಾಂಗಣದಲ್ಲಿ ಟಿ.ಟಿ., ಶಟ್ಲ್ ಮತ್ತು ಬ್ಯಾಡ್ಮಿಂಟನ್ ಕ್ರೀಡಾಕೂಟ, ಅಜ್ಜರಕಾಡುವಿನ ಜಿಲ್ಲಾ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್ ಹಾಗೂ ಕಬಡ್ಡಿ ಕ್ರೀಡಾಕೂಟ, ಸಿಸಿಲಿ ಪ್ರೌಢಶಾಲೆಯಲ್ಲಿ ಥ್ರೋಬಾಲ್ ಕ್ರೀಡಾಕೂಟ, ಮಣಿಪಾಲದ ಎಂ.ಜೆ.ಸಿ ಯಲ್ಲಿ ಫುಟ್ ಬಾಲ್ ಕ್ರೀಡಾಕೂಟ ಹಾಗೂ ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಖೋ-ಖೋ ಸಹಿತ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ವಿವಿಧ ಕ್ರೀಡಾಕೂಟಗಳು ಜರುಗಿತು.