ಕನ್ನಡಪ್ರಭ ವಾರ್ತೆ ಅಥಣಿ
ದೈಹಿಕ ಮತ್ತು ಮಾನಸಿಕ ಸದೃಢತೆಗಾಗಿ ಯೋಗ ಉತ್ತಮ ಸಾಧನವಾಗಿದ್ದು, ರೋಗ ಮುಕ್ತ ಸಮಾಜವನ್ನು ಕಟ್ಟಲು ಪ್ರತಿಯೊಬ್ಬರೂ ಪ್ರತಿನಿತ್ಯ ಯೋಗ ಅಭ್ಯಾಸ ರೂಡಿಸಿಕೊಳ್ಳಬೇಕು. ಯೋಗದ ಜೊತೆಗೆ ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಯನ್ನು ಸುಧಾರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಅನಿಸಿಕೆ ವ್ಯಕ್ತಪಡಿಸಿದರು.ಪಟ್ಟಣದ ಎಸ್ಎಸ್ಎಮ್ಎಸ್ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಂತ್ರಜ್ಞಾನ ಬೆಳದಂತೆ ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬದಲಾಗಿವೆ. ಸದಾ ಒತ್ತಡದ ಜೀವನ ಮತ್ತು ಅತಿಯಾದ ರಾಸಾಯನಿಕ ಬಳಕೆಯ ಕಲುಷಿತ ಆಹಾರಗಳನ್ನು ಸೇವಿಸುತ್ತಿದ್ದೇವೆ. ಇದರಿಂದ ಕ್ಯಾನ್ಸರ್, ಕಿಡ್ನಿ ಮತ್ತು ಲಿವರ್ ಸಮಸ್ಯೆ, ಹೃದಯಾಘಾತಗಳು ಹೆಚ್ಚಾಗುತ್ತಿವೆ. ಯೋಗ ಬಲ್ಲವನಿಗೆ ರೋಗವಿಲ್ಲ ಎಂಬಂತೆ ಯೋಗ ದಿನಾಚರಣೆ ಒಂದು ದಿನಕ್ಕೆ ಸೀಮಿತವಾಗದೆ, ನಿತ್ಯ ಬದುಕಿನಲ್ಲಿ ರೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪತಂಜಲಿ ಯೋಗ ಸಮಿತಿಯ ರಾಜ್ಯ ಉಸ್ತುವಾರಿ ಭವರಲಾಲ್ ಆರ್ಯ ಮಾತನಾಡಿ, ಭಾರತ ಯುವಶಕ್ತಿ ಹೊಂದಿರುವ ರಾಷ್ಟ್ರ. ನಮ್ಮ ಯುವಕರು ಆರೋಗ್ಯ ಮತ್ತು ಸದೃಢವಾಗಿದ್ದರೆ ಭಾರತ ಸದೃಢವಾಗುತ್ತದೆ. ನಮ್ಮ ಯುವಕ, ಯುವತಿಯರು ಯೋಗ ಮತ್ತು ವ್ಯಾಯಾಮ, ಕ್ರೀಡೆಗಳಲ್ಲಿ ತಮ್ಮನ್ನ ತೊಡಗಿಸಿಕೊಳ್ಳಬೇಕು. ವಿವಿಧ ಕಾಯಿಲೆಗಳಿಗೆ ಯೋಗ ದಿವ್ಯ ಔಷಧಿಯಾಗಿದ್ದು, ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ರೂಡಿಸಿಕೊಳ್ಳಬೇಕು ಎಂದು ಹೇಳಿದರು.ಈ ವೇಳೆ ವಿವಿಧ ಯೋಗಾಸನ ಭಂಗಿಗಳನ್ನು ಪ್ರದರ್ಶನ ಮಾಡುವ ಮೂಲಕ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ಯೋಗ ಅಭ್ಯಾಸಗಳ ಮಾರ್ಗದರ್ಶನ ಮಾಡಿದರು. ಈ ಸಂದರ್ಭದಲ್ಲಿ ಕಾಡಸಿದ್ದೇಶ್ವರ ಸ್ವಾಮೀಜಿ, ಅಥಣಿ ಪುರಸಭೆಯ ಅಧ್ಯಕ್ಷ ಶಿವಲೀಲಾ ಬೂಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ, ಹಿರಿಯ ವೈದ್ಯ ಡಾ.ಮಲ್ಲಿಕಾರ್ಜುನ ಹಂಜಿ, ಯುವ ಮುಖಂಡ ಚಿದಾನಂದ ಸವದಿ, ತಹಸೀಲ್ದಾರ್ ಸಿದರಾಯ ಬೋಸಗಿ, ಡಿವೈಎಸ್ಪಿ ಪ್ರಶಾಂತ್ ಮುನ್ನೊಳ್ಳಿ, ಸಿಪಿಐ ಸಂತೋಷ್ ಹಳ್ಳೂರ, ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಬಿಇಒ ಎಂ.ಆರ್.ಮುಂಜೆ, ಪುರಸಭೆ ಅಧಿಕಾರಿ ಅಶೋಕ ಗುಡಿಮನಿ, ಆರೋಗ್ಯಾಧಿಕಾರಿ ಡಾ.ಬಸಗೌಡ ಕಾಗೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ಎಸ್.ಪಾಟೀಲ, ಪತಂಜಲಿ ಯೋಗ ಸಮಿತಿಯ ಅಧ್ಯಕ್ಷ ಎಸ್.ಕೆ.ಹೊಳೆಪ್ಪನವರ, ಸುರೇಶ್ ಚಿಕ್ಕಟ್ಟಿ, ಶಿವಾನಂದ ಬುರ್ಲಿ, ಅಪ್ಪಾಸಾಹೇಬ ತಾಂಬಾಟ, ಶಿವಾನಂದ ಮಾಲಗಾವಿ, ಅಪ್ಪಾಸಾಹೇಬ ಅಲಿಬಾದಿ, ಸುರೇಖಾ ತಂಬಾಟ, ರೋಹಿಣಿ ಯಾದವಾಡ ಸೇರಿ ಯೋಗ ಶಿಕ್ಷಕರು, ತಾಲೂಕು ಮಟ್ಟದ ಅಧಿಕಾರಿಗಳು, ವಿವಿಧ ಶಾಲಾ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.