ಸಾರಾಂಶ
- ಜಿಲ್ಲಾಡಳಿತ ನೇತೃತ್ವದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ । ರಾಮಾಯಣ ಪ್ರತಿ ಪಾತ್ರವೂ ಜೀವನ ಹೊಣೆ ತಿಳಿಸುತ್ತದೆ: ಸಂಸದೆ
- - - ಕನ್ನಡಪ್ರಭ ವಾರ್ತೆ ದಾವಣಗೆರೆಮಹರ್ಷಿ ಶ್ರೀ ವಾಲ್ಮೀಕಿ ಜಗತ್ತಿಗೆ ನೀಡಿದ ರಾಮಾಯಣ ಮಹಾಕೃತಿಯ ಪ್ರತಿ ಪಾತ್ರವೂ ಜೀವನದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವಂತೆ ತಿಳಿಹೇಳುತ್ತದೆ. ಜೊತೆಗೆ ಮೌಲ್ಯಯುತ ಜೀವನದ ಬಗ್ಗೆ ಮಾರ್ಗದರ್ಶನ ನೀಡುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.
ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಹಮ್ಮಿಕೊಂಡಿದ್ದ ಮಹರ್ಷಿ ಶ್ರೀ ವಾಲ್ಮೀಕಿ ಜಯಂತಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ವಾಲ್ಮೀಕಿ ಸಮಾಜದ ವಿದ್ಯಾರ್ಥಿನಿಯರಿಗಾಗಿ ವಿದ್ಯಾರ್ಥಿ ನಿಲಯ, ಮಾಯಕೊಂಡದ ಹಿರೇ ಮದಕರಿ ನಾಯಕರ ಸಮಾಧಿ ಅಭಿವೃದ್ಧಿ, ಅದನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು ಸೇರಿದಂತೆ ನಾಯಕ ಸಮಾಜದ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಜೊತೆಗೆ ಚರ್ಚಿಸಿ, ಸಮಾಜದ ಬೇಡಿಕೆ ಈಡೇರಿಸಲು ತಾವು ಬದ್ಧ ಎಂದು ಭರವಸೆ ನೀಡಿದರು.
ಸರ್ಕಾರವು ನಾಯಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್, ಸಾಮಾಜಿಕ ಸಬಲೀಕರಣದಡಿ ಅಂತರ್ಜಾತಿ ವಿವಾಹ ಆದವರಿಗೆ ಪ್ರೋತ್ಸಾಹಧನ, ಸ್ವಉದ್ಯೋಗಕ್ಕೆ ಸೌಲಭ್ಯ, ಗ್ರಾಪಂ ಮಟ್ಟದಲ್ಲಿ ₹20 ಲಕ್ಷ, ಹೋಬಳಿ, ಪಪಂ ಮಟ್ಟದಲ್ಲಿ ₹75 ಲಕ್ಷ, ತಾಲೂಕು ಮಟ್ಟದಲ್ಲಿ ₹2 ಕೋಟಿ, ಜಿಲ್ಲಾ ಮಟ್ಟದಲ್ಲಿ ₹4 ಕೋಟಿ ಅನುದಾನವನ್ನು ವಾಲ್ಮೀಕಿ ಭವನ ನಿರ್ಮಿಸಲು ನೀಡಲಾಗುವುದು. ಸಮಾಜ ಬಾಂಧವರು ಸಹ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಆದರ್ಶ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ಡಾ.ಪ್ರಭಾ ತಿಳಿಸಿದರು.ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಕೇಂದ್ರ ಸರ್ಕಾರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಿದ್ದು ಸ್ವಾಗತಾರ್ಹ. ಅದರ ಪಕ್ಕದಲ್ಲೇ ಮಹರ್ಷಿ ವಾಲ್ಮೀಕಿ ದೇವಸ್ಥಾನವನ್ನೂನಿರ್ಮಿಸುವ ಹೃದಯ ಶ್ರೀಮಂತಿಕೆ ತೋರಬೇಕು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅವ್ಯವಹಾರ ಆಗಿರುವುದರಲ್ಲಿ ₹76 ಕೋಟಿಯಷ್ಟು ಹಣ ನಿಗಮಕ್ಕೆ ವಾಪಸ್ ಪಡೆಯಲಾಗಿದೆ. ಉಳಿದ ಹಣ ಸಹ ವಾಪಸ್ ಪಡೆಯಲಾಗುವುದು. ಯಾರೇ ತಪ್ಪು ಮಾಡಿದ್ದರೂ ಅದು ತಪ್ಪು. ತಪ್ಪಿತಸ್ಥರಿಗೆ ನ್ಯಾಯಾಲಯ ಶಿಕ್ಷೆ ನೀಡುತ್ತದೆ ಎಂದರು.
ವಾಲ್ಮೀಕಿ ಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ 328 ದಿನ ಬೆಂಗಳೂರಿನಲ್ಲಿ ಹೋರಾಟ ನಡೆಸಿದ ಫಲವಾಗಿ ಒಳ ಮೀಸಲಾತಿ ಸೌಲಭ್ಯ ದೊರೆಯುವ ಹಂತದಲ್ಲಿದೆ. ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಸೌಲಭ್ಯ ಆದಷ್ಟು ಬೇಗ ಅನುಷ್ಠಾನಕ್ಕೆ ತರುವ ಮೂಲಕ ಸಮಾನತೆ ಒದಗಿಸಬೇಕು ಎಂದು ಹೇಳಿದರು.ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, ಮಹರ್ಷಿ ವಾಲ್ಮೀಕಿ ರಾಮಾಯಣದ ಮೂಲಕ ಬದುಕನ್ನು ಸಾಗಿಸುವ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಎಲ್ಲರೂ ಒಂದಾಗಿ ಮಹಾನ್ ದಾರ್ಶನಿಕರ, ಆದರ್ಶ ಪುರುಷರ ಜಯಂತಿ ಆಚರಿಸುವಂತಾಗಬೇಕು ಎಂದರು.
ಸಮಾಜದ ಜಿಲ್ಲಾಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆದು, ನಮ್ಮ ಸಮಾಜಕ್ಕೆ ಸಿಗಬೇಕಾದ ಹಕ್ಕು, ಸೌಲಭ್ಯಗಳನ್ನು ಅನ್ಯ ಜಾತಿಯವರು ಕಿತ್ತುಕೊಳ್ಳುತ್ತಿದ್ದಾರೆ. ನಕಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವುದನ್ನು ತಡೆಯಲು ಜಿಲ್ಲಾಧಿಕಾರಿ ಅವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ದೇಶದ ಸಂಸ್ಕೃತಿ, ಪರಂಪರೆ, ಆಚಾರ, ವಿಚಾರಗಳನ್ನು ಒಳಗೊಂಡಂತೆ ಎಲ್ಲದಕ್ಕೂ ರಾಮಾಯಣವೇ ಆಧಾರವಾಗಿದೆ. ಜೀವನ ಪಾಠ, ಪ್ರೀತಿ, ಶ್ರದ್ಧೆ ಎಲ್ಲವನ್ನೂ ಕಲಿಸಿಕೊಡುವಂತಹ ರಾಮಾಯಣವನ್ನು ಓದಿ, ಅದನ್ನು ಮನನ ಮಾಡಿಕೊಳ್ಳುವುದು ಎಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.
ಉಪ ಮೇಯರ್ ಶಾಂತಕುಮಾರ ಸೋಗಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ ಜಗದೀಶ, ಮಾಜಿ ಮೇಯಪ್ ಬಿ.ಎಚ್.ವಿನಾಯಕ ಪೈಲ್ವಾನ್, ಮುಖಂಡರಾದ ಎಂ.ಬಿ.ಹಾಲಪ್ಪ, ವಿಜಯಶ್ರೀ, ರೈತ ಮುಖಂಡ ಹುಚ್ಚವ್ವನಹಳ್ಳಿ ಮಂಜುನಾಥ, ವಕೀಲ ಎನ್.ಎಂ.ಆಂಜನೇಯ ಗುರೂಜಿ, ಲಕ್ಷ್ಮೀದೇವಿ ಬಿ.ವೀರಣ್ಣ, ಆರ್.ಅಂಜಿನಪ್ಪ, ಜಿಪಂ ಸಿಇಓ ಸುರೇಶ ಬಿ.ಇಟ್ನಾಳ, ಎಎಸ್ಪಿ ಜಿ.ಮಂಜುನಾಥ, ತಹಸೀಲ್ದಾರ್ ಡಾ.ಎಂ.ಬಿ.ಅಶ್ವತ್ಥ, ನವೀನಕುಮಾರ ಮಠದ, ಫಣಿಯಾಪುರ ಲಿಂಗರಾಜ ಇತರರು ಇದ್ದರು. ಅಪರ ಡಿಸಿ ಪಿ.ಎನ್.ಲೋಕೇಶ ಜಿಲ್ಲಾ ಉಸ್ತುವಾರಿಸಚಿವರ ಸಂದೇಶ ಓದಿದರು. ಇದಕ್ಕೂ ಮುನ್ನ ವೀರ ಮದಕರಿ ನಾಯಕ ವೃತ್ತದಿಂದ ಡಾ.ಎಂ.ಸಿ.ಮೋದಿ ವೃತ್ತದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದವರೆಗೆ ಮಹರ್ಷಿ ಶ್ರೀ ವಾಲ್ಮೀಕಿ ಭಾವಚಿತ್ರದ ಮೆರವಣಿಗೆ ನಡೆಯಿತು.
- - -ಬಾಕ್ಸ್ * ವಾಲ್ಮೀಕಿ ಬಗ್ಗೆ ಸುಳ್ಳು, ಕಲ್ಪಿತ ಕಥೆ ಸಲ್ಲದು: ಡಾ.ರಾಮಚಂದ್ರಪ್ಪ
ದಾವಣಗೆರೆ: ಕಳ್ಳ, ಸುಳ್ಳ, ದರೋಡೆಕೋರ, ಬ್ರಾಹ್ಮಣ ಅಂತೆಲ್ಲಾ ಕಳೆದ 5 ಸಾವಿರ ವರ್ಷಗಳಿಂದಲೂ ಮಹರ್ಷಿ ವಾಲ್ಮೀಕಿ ಬಗ್ಗೆ ಸುಳ್ಳು, ಕಲ್ಪಿತ ಕಥೆಗಳನ್ನೇ ಹೇಳುತ್ತಿದ್ದಾರೆ. ವಾಲ್ಮೀಕಿ ಒಬ್ಬ ರಸಋಷಿ. ಅಂಥವರ ಬಗ್ಗೆ ಹುಸಿ ಮಾತನಾಡೋದು ನಿಲ್ಲಬೇಕು ಎಂದು ನಿವೃತ್ತ ಪ್ರಾಚಾರ್ಯ ಡಾ. ಎ.ಬಿ.ರಾಮಚಂದ್ರಪ್ಪ ಹೇಳಿದರು. ಸಮಾರಂಭದಲ್ಲಿ ಉಪನ್ಯಾಸ ನೀಡಿದ ಅವರು, ಮಹರ್ಷಿ ವಾಲ್ಮೀಕಿ ಅವರ ರಾಮಾಯಣ ದೇಶದ ಅಲಿಖಿತ ಸಾಂಸ್ಕೃತಿಕ ಸಂವಿಧಾನವಾಗಿದೆ. ಭಾರತೀಯ ಪರಂಪರೆ, ಸಂಪ್ರದಾಯ, ಸಂಸ್ಕೃತಿ ಎಲ್ಲವೂ ವಾಲ್ಮೀಕಿ ಅವರ ರಾಮಾಯಣದ ಮೇಲೆ ಆಧಾರವಾಗಿದೆ. ವಾಲ್ಮೀಕಿ ಅಗಾಧ ಬೌದ್ಧಿಕ ಪ್ರತಿಭೆ. ಅಂಥವರನ್ನು ಮುಕ್ತ ಮನಸ್ಸಿನಿಂದ ಆಸ್ವಾದಿಸುವಂತಹ ಮನಸ್ಥಿತಿ ಇಲ್ಲವಾಗಿದೆ. ವಾಲ್ಮೀಕಿ ಸೃಷ್ಟಿಸಿದಂತಹ ಪಾತ್ರಗಳೇ ಪ್ರಧಾನವಾಗುತ್ತಾ ಸಾಗುತ್ತವೆ. ವಾಲ್ಮೀಕಿ ಅವರನ್ನು ಹಿಂದಕ್ಕೆ ಸರಿಸುವಂತಹದ್ದು ಸಹ ಕಂಡುಬರುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಈಗಿನ ವಾತಾವರಣದಲ್ಲಿ ಜಾತಿ ವಿಷಬೀಜ ಬಿತ್ತುವ, ಕೋಮುವಾದದ ಮಧ್ಯೆ ಶ್ರೀರಾಮ ಸೊರಗಿದ್ದಾನೆ. ನಮಗೆ ವೈದಿಕ ಮೂಲದ ರಾಮ ಬೇಡ, ವಾಲ್ಮೀಕಿಯವರ ಮೂಲ ಸಾಂಸ್ಕೃತಿಕ ಬೇರಿನ ಶ್ರೀರಾಮ ಬೇಕಾಗಿದ್ದಾನೆ ಎಂದು ಡಾ. ಎ.ಬಿ.ರಾಮಚಂದ್ರಪ್ಪ ಹೇಳಿದರು.- - - (ಸಾಂದರ್ಭಿಕ ಚಿತ್ರ)- - -ಟಾಪ್ ಕೋಟ್
ಹಬ್ಬ ಹರಿದಿನಗಳೆಂದರೆ ಈಚೆಗೆ ಗಲಾಟೆ, ಕೋಮು ಘರ್ಷಣೆ, ಸಂಘರ್ಷ ಮೂಡಿಸುವಂತದ್ದು ಎಂಬಂದಾಗಿದೆ. ಹಬ್ಬ, ಆಚರಣೆಗಳ ವೇಳೆ ಪೊಲೀಸ್ ಇಲಾಖೆ ಸದಾ ಜಾಗೃತವಾಗಿರಬೇಕಾಗುತ್ತದೆ. ಎಲ್ಲರನ್ನೂ ಒಗ್ಗೂಡಿಸುವುದಕ್ಕಾಗಿ ಹಬ್ಬಗಳ ಆಚರಣೆ ಮಾಡುವಂತಾಗಬೇಕು. ದಾವಣಗೆರೆ ಸೇರಿದಂತೆ ಎಲ್ಲ ಕಡೆ ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯ- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ
- - - -(ಫೋಟೋ ಇದೆ):