ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ದೇಶದ ಪ್ರತಿಯೊಬ್ಬರು ಸಂವಿಧಾನ ಓದಬೇಕು. ಜೊತೆಗೆ ಮನೆಯಲ್ಲೊಂದು ಸಂವಿಧಾನದ ಪುಸ್ತಕ ಕೂಡ ಇರಬೇಕು ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಜಿ.ಪಿ.ರಾಜರತ್ನಂ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇಶದ ಕಾನೂನುಗಳೆಲ್ಲ ಭಾರತದ ಸಂವಿಧಾನದ ಆಧಾರದಲ್ಲಿಯೇ ರೂಪಿತಗೊಂಡಿವೆ. ಮನೆಯಲ್ಲೊಂದು ಸಂವಿಧಾನದ ಪುಸ್ತಕ ಇರಬೇಕು. ಪ್ರತಿ ದಿನ ಒಂದು ಆರ್ಟಿಕಲ್ ಓದಿದರೆ ಸಾಕು ಕಾನೂನುಗಳು ತಾನಾಗಿಯೇ ತಿಳಿಯುತ್ತದೆ ಎಂದರು.ದೇಶದಲ್ಲಿ ಸಾಕಷ್ಟು ಕಾನೂನು ಪದವಿ ಪಡೆದವರಿದ್ದಾರೆ. ಡಾಕ್ಟರ್, ಎಂಜಿನಿಯರ್‌ಗೆ ಕಾನೂನು ಬೇಕು. ವಿದ್ಯಾವಂತ, ಅವಿದ್ಯಾವಂತ, ಬಡವ, ಶ್ರೀಮಂತ ಎನ್ನದೆ ಕಾನೂನು ಎಲ್ಲರಿಗೂ ಒಂದೇ. ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯಿರಿ ಎಂದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದ ಜನ ಕಷ್ಟದ ಜೀವನ ನಡೆಸುತ್ತಿದ್ದರು. ಸ್ವಾತಂತ್ರ್ಯ ಬಂದ ಬಳಿಕ ದೇಶದ ಸಂವಿಧಾನ ಹೇಗಿರಬೇಕು ಎಂಬ ವಿಷಯ ಚರ್ಚೆಗೆ ಬಂತು. ಹಲವು ಸಮಿತಿಗಳ ರಚಿಸಿದರು. ಕರಡು ಸಮಿತಿ ರಚಿಸಿದ ಬಳಿಕ 60 ದೇಶಗಳ ಸಂವಿಧಾನ ಒಳ್ಳೇ ಅಂಶ ಸೇರಿಸಿ ಸಂವಿಧಾನ ರಚನೆ ಆಗಿದೆ ಎಂದರು.ಸಂವಿಧಾನ ರಚಿಸಿದ ಬಳಿಕ 1949 ನ. 26ರಂದು ಸಂವಿಧಾನ ಮಂಡನೆ ಮಾಡಿದ ಹಿನ್ನೆಲೆ ಕಾನೂನು ದಿನ ಎಂದು ಘೋಷಿಸಲಾಯಿತು. 2015ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ದಿನ ಎಂದು ಘೋಷಿಸಿದರು ಎಂದರು.ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಮದನಕುಮಾರ್ ಎ.ಆರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಶಿವಕುಮಾರ್ ಜಿ.ಜೆ., ತಾಲೂಕು ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ವೆಂಕಟೇಶ್, ಕಾರ್ಯದರ್ಶಿ ಎಂ.ಬೀರೇಗೌಡ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಕವಿತಾ ಎಂ., ಶಿವಸ್ವಾಮಿ ಎಂ., ಪುಟ್ಟಬುದ್ದಿ ಎನ್. ಹಾಗೂ ವಿದ್ಯಾರ್ಥಿಗಳಿದ್ದರು.
=-----೨೬ಜಿಪಿಟಿ೧
ಗುಂಡ್ಲುಪೇಟೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆಯನ್ನು ನ್ಯಾಯಾಧೀಶ ಬಸವರಾಜ ತಳವಾರ ಉದ್ಘಾಟಿಸಿದರು.