ಸಾರಾಂಶ
ಕಾರವಾರ: ಡ್ರಗ್ಸ್ ಮುಕ್ತ ಅಭಿಯಾನದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಬೇಕು ಎಂದು ಎಸ್ಪಿ ನಾರಾಯಣ ಎಂ. ತಿಳಿಸಿದರು.
ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ನಗರದ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಮಾದಕ ವಸ್ತುಗಳ ಜನಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕರ್ನಾಟಕ ಪೊಲೀಸ್ ಇಲಾಖೆಯಿಂದ ರಾಜ್ಯಾದ್ಯಂತ ಯುವ ಜನತೆಯಲ್ಲಿ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಮತ್ತು ಆಕ್ರಮ ಸಾಗಾಣಿಕೆ ವಿರೋಧಿ ದಿನವನ್ನು ಆಚರಿಸಲಾಗುತ್ತಿದೆ. ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿಸಲು ಮುಖ್ಯಮಂತ್ರಿ ಮುಂದಾಗಿದ್ದು ಪೊಲೀಸ್ ಇಲಾಖೆಯಿಂದ ಮಾತ್ರ ಡ್ರಗ್ಸ್ ನಿಯಂತ್ರಿಸಲು ಸಾಧ್ಯವಿಲ್ಲ, ಈ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಡ್ರಗ್ಸ್ ಮುಕ್ತ ರಾಜ್ಯಾವನ್ನಾಗಿಸಬೇಕು ಎಂದರು.
ಕ್ರಿಮ್ಸ್ ಆಸ್ಪತ್ರೆ ಮನೋರೊಗ ವಿಭಾಗದ ಪ್ರಾಧ್ಯಪಕ ಹಾಗೂ ಮುಖ್ಯಸ್ಥ ಡಾ. ವಿಜಯರಾಜ್ , ಮಾದಕ ವಸ್ತುಗಳ ಸುಲಭವಾಗಿ ದೊರೆಯುದರಿಂದ ಹುಚ್ಚು ಖೋಡಿ ಮನಸ್ಸು ಹದಿನಾರರ ವಯಸ್ಸು ಎನ್ನುವಂತೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಾದಕ ವಸ್ತುಗಳಿಗೆ ಮಾರು ಹೋಗುತ್ತಾರೆ. ಒಂದು ಬಾರಿ ಮಾದಕ ವಸ್ತುಗಳನ್ನು ವ್ಯಸನವಾಗಿಸಿಕೊಂಡರೆ ಅದರಿಂದ ಹೊರ ಬರಲು ಸಾಧ್ಯವಾಗುವುದಿಲ್ಲ. ಇದರಿಂದ ಮಾನಸಿಕ ಮತ್ತು ದೈಹಿಕ ತೊಂದರೆ ಅನುಭವಿಸಬೇಕಾಗುತ್ತದೆ. ಯುವಕರು ಮಾದಕ ವಸ್ತುವಿನಂತೆ ಸೋಶಿಯಲ್ ಮೀಡಿಯಾಗೂ ಮಾರು ಹೋಗಬಾರದು, ಇದರಿಂದ ಅಮೂಲ್ಯವಾದ ಜೀವನ ಮತ್ತು ಗುರಿ ಮುಟ್ಟಲು ಸಾಧ್ಯವಿಲ್ಲ ಎಂದರು.ನಟಿ ಶ್ವೇತಾ ಭಟ್ ಮಾದಕ ವಸ್ತು ವಿರೋಧಿ ದಿನದ ಪ್ರತಿಜ್ಞಾವಿಧಿ ಬೋಧಿಸಿ, ಈಚಿನ ದಿನಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾಗುತ್ತಿದ್ದು ಅದನ್ನು ನಿಯಂತ್ರಿಸಲು ಮತ್ತು ಡ್ರಗ್ಸ್ ಮುಕ್ತ ದೇಶವನ್ನಾಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು, ಯಾರೂ ಕೂಡ ಪ್ಯಾಶನ್, ಕ್ಷಣಿಕ ಸುಖಕ್ಕಾಗಿ ಮಾದಕ ವಸ್ತುಗಳ ಸೇವನೆ ಮಾಡಬಾರದು ಮಾಡುವವರಿಗೆ ಪ್ರೋತ್ಸಾಹ ಸಹ ನೀಡದೆ
ಇದರಿಂದ ಆಗುವ ದುಷ್ಪರಿಣಾಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.ಮಾದಕ ವಸ್ತುಗಳ ಜಾಗೃತಿ ಕುರಿತು ವಿವಿಧ ಸ್ಪರ್ಧೆ ಆಯೋಜಿಸಲಾಗಿದ್ದು, ವಿಜೇತರಿಗೆ ಪ್ರಶಂಸಾ ಪತ್ರ ವಿತರಿಸಲಾಯಿತು.
ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕ್ರಿಮ್ಸ್ ಸಹಾಯಕ ಪ್ರಾಧ್ಯಾಪಕಿ ಡಾ.ಮಹಾಲಕ್ಷ್ಮೀ ಮತ್ತಿತರರು ಇದ್ದರು.ಇದಕ್ಕೂ ಮುನ್ನ ಶಿವಾಜಿ ಹೈಸ್ಕೂಲ್ ನಿಂದ ಪೊಲೀಸ್ ಕಲ್ಯಾಣ ಮಂಟಪ ಹಾಗೂ ಕಾರವಾರ ಬಸ್ ನಿಲ್ದಾಣದಿಂದ ಪೊಲೀಸ್ ಕಲ್ಯಾಣ ಮಂಟಪದವರೆಗೆ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ರ್‍ಯಾಲಿ ನಡೆಯಿತು.